ಆಶ್ರಯ ಸಮಿತಿಗೆ ಕಾನೂನು ಬಾಹಿರ ನೇಮಕ

| Published : Jul 20 2024, 12:53 AM IST

ಆಶ್ರಯ ಸಮಿತಿಗೆ ಕಾನೂನು ಬಾಹಿರ ನೇಮಕ
Share this Article
  • FB
  • TW
  • Linkdin
  • Email

ಸಾರಾಂಶ

ದೇವರಹಿಪ್ಪರಗಿ ಪಟ್ಟಣ ಪಂಚಾಯತಿಯ ನಗರ ಘಟಕದ ಆಶ್ರಯ ಸಮಿತಿಗೆ ನಾಮ ನಿರ್ದೇಶನದ ಮೂಲಕ ಸದಸ್ಯರನ್ನು ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ. ಈ ಪೈಕಿ 2 ಜನ ಸದಸ್ಯರನ್ನು ಕಾನೂನು ಬಾಹಿರವಾಗಿ ನೇಮಕ ಮಾಡಲಾಗಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪಟ್ಟಣ ಪಂಚಾಯತಿಯ ನಗರ ಘಟಕದ ಆಶ್ರಯ ಸಮಿತಿಗೆ ನಾಮ ನಿರ್ದೇಶನದ ಮೂಲಕ ಸದಸ್ಯರನ್ನು ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ. ಈ ಪೈಕಿ 2 ಜನ ಸದಸ್ಯರನ್ನು ಕಾನೂನು ಬಾಹಿರವಾಗಿ ನೇಮಕ ಮಾಡಲಾಗಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ಪಟ್ಟಣ ಪಂಚಾಯತಿ ಆವರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಟ್ಟಣ ಪಂಚಾಯತಿ ಸದಸ್ಯರು ಶುಕ್ರವಾರ ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಕಾನೂನು ಬಾಹಿರವಾಗಿ ನಾಮ ನಿರ್ದೇಶರನ್ನು ನೇಮಕ ಮಾಡಲಾಗಿದೆ. ಕೂಡಲೇ ವಜಾಗೊಳಿಸಬೇಖು ಎಂದು ಒತ್ತಾಯಿಸಿದರು.ನಿಂಗಪ್ಪ ಶಿವಪ್ಪ ಸಿಂದಗಿ ಅವರು ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ-1ರ, ಕ್ರ.ಸಂ.550ರಲ್ಲಿ ಹಾಗೂ ಗೌರಾಬಾಯಿ ಸಂಜೀವ ತಳವಾರ ಇಂಡಿ ತಾಲೂಕಿನ ತೆನ್ನಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-1ರ ಕ್ರ.ಸಂ.248ರಲ್ಲಿ ಮತದಾನದ ಹಕ್ಕನ್ನು ಹೊಂದಿರುವ ಅವರನ್ನು ಪಟ್ಟಣ ಪಂಚಾಯತಿಗೆ ನಾಮನಿರ್ದೇಶನ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪಣ ಅರ್ಜಿ ಸಲ್ಲಿಸಿ ಮಾತನಾಡಿದ ಬಿಜೆಪಿ ಪಟ್ಟಣ ಪಂಚಾಯತಿ ಸದಸ್ಯರಾದ ರಮೇಶ ಮಸಿಬಿನಾಳ ಅವರು, ನೂತನವಾಗಿ ಸದಸ್ಯರಾಗಿ ಆಯ್ಕೆಯಾದ ನಮಗೆ ಹಲವು ವರ್ಷಗಳಿಂದ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಗರಣಗಳ ಮೇಲೆ ಹಗರಣ ನಡೆಯುತ್ತಿವೆ. ತಾಲೂಕಿನಲ್ಲಿ ಹಲವು ಸಮಿತಿಗೆ ಸರ್ಕಾರ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿದೆ. ಅದರಲ್ಲಿ ಅಹಿಂದ ವರ್ಗಕ್ಕೆ ಸೇರಿದವರನ್ನು ಮಾತ್ರ ಆಯ್ಕೆ ಮಾಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಹಲವು ಜಾತಿ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಅಧಿಕಾರ ದೊರೆತ ಮೇಲೆ ಬಹು ಸಂಖ್ಯಾತ ವರ್ಗದ ಜನರನ್ನು ನಿರ್ಲಕ್ಷಿಸುತ್ತಿರುವುದು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ಮುಖಂಡರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಅಹಿಂದ ವರ್ಗದವರನ್ನು ನಾಮನಿರ್ದೇಶನ ಮಾಡುವ ಮೂಲಕ ಲಿಂಗಾಯಿತರ ಕಡೆಗಡನೆ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಲಿಂಗಾಯಿತರ ವಿರೋಧಿಯಾಗಿದೆ ಎಂದು ಕ್ಷೇತ್ರದಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ನಗರ ಘಟಕದ ಆಶ್ರಯ ಸಮಿತಿಗೆ ಕಾನೂನು ಬಾಹಿರವಾಗಿ ನೇಮಕ ಮಾಡಿದ ಕೆಲ ಸದಸ್ಯರನ್ನು ವಜಾಗೊಳಿಸಿ, ಸ್ಥಳೀಯ ಮುಖಂಡರನ್ನು ನೇಮಕ ಮಾಡಬೇಕು. ಇಲ್ಲದಿದ್ದರೇ ಬರುವಂತ ದಿನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರಿಂದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಟ್ಟಣ ಪಂಚಾಯತಿಯ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರುಗಳಾದ ಕಾಸುಗೌಡ ಬಿರಾದಾರ, ಶಾಂತಯ್ಯ ಜಡಿಮಠ, ರತ್ನಬಾಯಿ ದೇವೂರ, ಜಯಶ್ರೀ ದೇವನಗಾಂವ, ದಾನಬಾಯಿ ಚವ್ಹಾಣ, ಸುಮಂಗಲ ಸೇಬೆನವರ, ಸಿಂಧೂರ ಡಾಲೇರ ಹಾಗೂ ಮುಖಂಡರುಗಳಾದ ಸೋಮು ದೇವೂರ, ಬಸವರಾಜ ದೇವಣಗಾಂವ, ವಿನೋದ ಚವ್ಹಾಣ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.

ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಪಟ್ಟಣ ಪಂಚಾಯತಿ ಸದಸ್ಯರು ಮನವಿ ಕೊಟ್ಟಿರುವುದು ನನ್ನ ಗಮನಕ್ಕೆ ಬಂದಿದೆ. ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೆ ಬಾರದೇ ಈ ರೀತಿ ಘಟನೆ ಆಗಿದ್ದು, ಜಿಲ್ಲೆಯ ಹಾಗೂ ರಾಜ್ಯ ನಾಯಕರಿಗೆ ತಿಳಿಸಲಾಗುವುದು. ಪಪಂ ವ್ಯಾಪ್ತಿಯ ಎಲ್ಲ ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಿತಿಯ ಸದಸ್ಯರನ್ನು ನೇಮಕ ಮಾಡಬೇಕಾಗಿತ್ತು. 2023ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಈ ವಿಷಯದಲ್ಲಿ ಯಾರ ಗಮನಕ್ಕೂ ತರದೆ ಮಾಡಿದ್ದು ಜನ ಮಾತನಾಡುವಂತೆ ಆಗಿದೆ. ಬರುವಂತ ದಿನಗಳಲ್ಲಿ ಎಲ್ಲಾ ಜನಾಂಗದವರಿಗೆ ಅಧಿಕಾರ ನೀಡಲು ಜಿಲ್ಲೆಯ ಹಾಗೂ ರಾಜ್ಯದ ನಾಯಕರಿಗೆ ಮನವಿ ಸಲ್ಲಿಸಲಾಗುವುದು.

-ಬಸೀರ್‌ ಅಹ್ಮದ್ ಕಸಬ್,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪ.ಪಂ ಸದಸ್ಯರು ದೇವರಹಿಪ್ಪರಗಿ.