ಸಾರಾಂಶ
ತಾಲೂಕಿನ ಕಾಸರಕೋಡ, ಕೆಳಗಿನಪಾಳ್ಯ, ಬಿಕಾಸಿನತಾರಿಯ ಸಮೀಪ ಪ್ರವಾಸಿಗರನ್ನು ದೋಣಿ ವಿಹಾರಕ್ಕೆ ಕರೆದೊಯ್ಯಲಾಗುತ್ತದೆ.
ಹೊನ್ನಾವರ: ತಾಲೂಕಿನ ಶರಾವತಿ ನದಿಯಲ್ಲಿ ಅಕ್ರಮವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುತಿದ್ದ ಬೋಟನ್ನು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಜಪ್ತು ಪಡಿಸಿಕೊಂಡ ಘಟನೆ ನಡೆದಿದೆ.
ತಾಲೂಕಿನ ಕಾಸರಕೋಡ, ಕೆಳಗಿನಪಾಳ್ಯ, ಬಿಕಾಸಿನತಾರಿಯ ಸಮೀಪ ಪ್ರವಾಸಿಗರನ್ನು ದೋಣಿ ವಿಹಾರಕ್ಕೆ ಕರೆದೊಯ್ಯಲಾಗುತ್ತದೆ. ಆದರೆ ಹಲವು ದೋಣಿಗಳು ಪ್ರವಾಸೋದ್ಯಮ ಇಲಾಖೆಯ ನೋಂದಣಿ ಇಲ್ಲದೇ ಅಕ್ರಮವಾಗಿ ಯಾವುದೇ ಸುರಕ್ಷತೆ ಬಳಸದೇ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತಿತ್ತು. ಈ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಇಲಾಖೆ ನಿರ್ದೇಶಕ ಮಂಜುನಾಥ್ ನಾವಿ, ತಹಸೀಲ್ದಾರ್ ಪ್ರವೀಣ್ ಕರಾಂಡೆ, ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.ಹಡಿನಬಾಳ ಗ್ರಾಪಂ ವ್ಯಾಪ್ತಿಯ ಬೆರೋಳ್ಳಿ ಬಳಿ ಶರಾವತಿ ಉಪನದಿಯಲ್ಲಿದ್ದ ಮಂಜುನಾಥ್ ಎಂಬವರು ನಡೆಸುತ್ತಿದ್ದ ಬೋಟನ್ನು ವಶಕ್ಕೆ ಪಡೆದು ನೋಟಿಸ್ ನೀಡಿದ್ದಾರೆ. ಇವರು ಅಕ್ರಮವಾಗಿ ಎರಡು ಬೋಟುಗಳನ್ನು ಜೋಡಿಸಿ ಸುರಕ್ಷತಾ ನಿಯಮವನ್ನು ಗಾಳಿಗೆ ತೂರಿ ಬೋಟನ್ನು ಹೊಟೇಲ್ ಆಗಿ ಪರಿವರ್ತಿಸಿದ್ದರು. ಬೇರೊಳ್ಳಿಯ ರವೀಂದ್ರ ಜೈವಂತ ಪ್ರಭು ಎಂಬವರು ದೂರು ನೀಡಿದ್ದರು. ನದಿಯಲ್ಲಿಯೇ ತಿಂಡಿ, ತಿನಿಸುಗಳು ಉಳಿದಿದ್ದನ್ನು ಎಸೆಯುವುದು, ಕೈಯನ್ನು ನದಿಯಲ್ಲಿಯೇ ತೊಳೆಯುವುದು, ಪಾತ್ರೆ, ತಟ್ಟೆ ಇತ್ಯಾದಿಗಳನ್ನು ಅಲ್ಲಿಯೇ ತೊಳೆಯುವುದು, ಉಳಿದಂತಹ ಚಹಾ, ತಂಪಾದ ಪಾನೀಯಗಳನ್ನು ನದಿಗೆ ಎಸೆಯುವುದನ್ನು ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಇನ್ನು ಅಕ್ರಮವಾಗಿ ದೋಣಿಗಳನ್ನು ದೋಣಿ ವಿಹಾರಕ್ಕೆ ಬಳಸುವ ಮೂವರು ದೋಣಿ ಮಾಲೀಕರಿಗೂ ಕಾರ್ಯಾಚರಣೆ ವೇಳೆ ನೋಟಿಸ್ ನೀಡಲಾಗಿದ್ದು, ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.