ಹುಬ್ಬಳ್ಳಿ:
ನಿವೇಶನದ ಹೆಸರಿನಲ್ಲಿ ಖರೀದಿಸಿದ ಜಾಗೆಯಲ್ಲಿ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಹಿಂದೂಪರ ಸಂಘಟನೆಯೊಂದಿಗೆ ಮಂಗಳವಾರ ಇಲ್ಲಿನ ಗೋಕುಲ ರಸ್ತೆಯ ಸವಣೂರು ಲೇಔಟ್‌ನ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮುಂದೆ ಪ್ರತಿಭಟನೆ ನಡೆಸಿದರು.ಕಳೆದ 3-4 ವರ್ಷಗಳ ಹಿಂದೆ ಸವಣೂರು ಲೇಔಟ್‌ನಲ್ಲಿ ವಸತಿ ಉದ್ದೇಶಕ್ಕಾಗಿ ಈ ಜಾಗ ಖರೀದಿಸಲಾಗಿತ್ತು. ಆದರೆ, ಈಗ ಇದೇ ಜಾಗದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಲಾಗುತ್ತಿದೆ. ವಸತಿ ಪ್ರದೇಶದಲ್ಲಿ ಧಾರ್ಮಿಕ ಕೇಂದ್ರ ಸ್ಥಾಪಿಸಲು ಇರುವ ಕಾನೂನುಬದ್ಧ ನಿಯಮಗಳನ್ನು ಪಾಲಿಸದೆ ಈ ಕಾಮಗಾರಿ ನಡೆಯುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಈ ಮಸೀದಿ ಅಕ್ರಮ ನಿರ್ಮಾಣಕ್ಕೆ ಹು-ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ. ಸ್ಥಳೀಯರು ಆರಂಭದಿಂದಲೂ ಈ ಮಸೀದಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೂ ಸಹ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮುಂದೆಯೇ ಜಮಾಯಿಸಿದ ನೂರಾರು ಕಾರ್ಯಕರ್ತರು ಮತ್ತು ಮಹಿಳೆಯರು ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಪಟ್ಟು ಹಿಡಿದರು. ವಸತಿ ಬಡಾವಣೆಗಳಲ್ಲಿ ಇಂತಹ ಅಕ್ರಮ ನಿರ್ಮಾಣಗಳಿಂದ ಶಾಂತಿ ಕದಡುತ್ತದೆ. ನಿವೇಶನ ಎಂದು ಹೇಳಿ ಈಗ ಪ್ರಾರ್ಥನಾ ಮಂದಿರ ಕಟ್ಟುತ್ತಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ದೂರಿದರು.
ಪ್ರತಿಭಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರು. ಇದಕ್ಕೊಪ್ಪದ ಪ್ರತಿಭಟನಾಕಾರರು ಕೂಡಲೇ ಅಕ್ರಮವಾಗಿ ನಿರ್ಮಿಸಲಾಗುತ್ತಿರುವ ಮಸೀದಿಯನ್ನು ತೆರವುಗೊಳಿಸಬೇಕು ಅಥವಾ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಪಟ್ಟು ಹಿಡಿದರು.
ಪ್ರತಿಭಟನೆಯ ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿದ ಪಾಲಿಕೆ ಉಪಮೇಯರ್ ಸಂತೋಷ ಚವ್ಹಾಣ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ಬಳಿಕ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚನೆ ನೀಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು. ಅಲ್ಲದೇ ಒಂದು ವೇಳೆ ಮತ್ತೆ ಕಾಮಗಾರಿ ಆರಂಭಿಸಿದಲ್ಲಿ ಮುಂದಿನ ದಿನಗಳಲ್ಲಿ ನಗರದಾದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಧರ ಕಲಬುರ್ಗಿ, ರಘು ಯಲ್ಲಕ್ಕನವರ, ಮಂಜು ಕಾಟಕರ, ಸುನೀಲ ಚಿಲ್ಲಾಳ, ಪರಶುರಾಮ ಕೊಟಗಿ, ಸಂತೋಷ ಕಂಬಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.