ಗಂಗಾವತಿ ತಾಲೂಕಿನ ಸಾಣಾಪುರ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ತೆಪ್ಪಗಳನ್ನು ಹಾಕಿ, ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಗಾವತಿ: ತಾಲೂಕಿನ ಸಾಣಾಪುರ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ತೆಪ್ಪಗಳನ್ನು ಹಾಕಿ, ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಣಾಪುರ ಸುತ್ತಮುತ್ತ ತುಂಗಭದ್ರಾ ನದಿ ಹರಿಯುತ್ತಿದ್ದು, ಈ ಪ್ರದೇಶಕ್ಕೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮಿನಿ ಗೋವಾ ಎಂದೇ ಕರೆಯಲಾಗುವ ಸಾಣಾಪುರ, ಹನುಮಹಳ್ಳಿ, ಆನೆಗೊಂದಿ, ಕಿಷ್ಕಿಂಧೆ, ಜಂಗ್ಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ರೆಸಾರ್ಟ್‌ಗಳಿದ್ದು, ಈ ಪ್ರದೇಶಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.ಬರುವ ಪ್ರವಾಸಿಗರಿಗೆ ಅಲ್ಲಿರುವ ರೆಸಾರ್ಟ್ ಮಾಲೀಕರು ನದಿ ತೀರಕ್ಕೆ ಕಳುಹಿಸಿ, ತೆಪ್ಪಗಳಲ್ಲಿ ಹೋಗಿ ಬರುವಂತೆ ಪ್ರೇರೇಪಿಸುತ್ತಿದ್ದಾರೆ. ಹಿಂದೆ ತೆಪ್ಪ ಸಂಚಾರಕ್ಕೆ ಜಿಲ್ಲಾಡಳಿತ ಮತ್ತು ನೀರಾವರಿ ಇಲಾಖೆಯವರು ನಿರ್ಬಂಧ ಹೇರಿದ್ದರು. ಈಗ ಮತ್ತೆ ರಾಜಾರೋಷವಾಗಿ ತೆಪ್ಪಗಳ ಸಂಚಾರ ನಡೆಸಲಾಗುತ್ತಿದೆ.
ಸಾಣಾಪುರ ಹಳೆಯ ಪ್ರವಾಸಿ ಮಂದಿರ, ಸಮಾನಾಂತರ ಜಲಾಶಯ ಹಾಗೂ ವಾಟರ್‌ಫಾಲ್ಸ್ ಬಳಿ ಅಕ್ರಮವಾಗಿ ತೆಪ್ಪಗಳನ್ನು ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.ಪ್ರೀ-ವೆಡ್ಡಿಂಗ್ ಶೂಟಿಂಗ್‌ಗೆ ಸಾವಿರಾರು ರು. ವಸೂಲಿ: ಸಾಣಾಪುರ ಸಮಾನಾಂತರ ಜಲಾಶಯದ ಪ್ರದೇಶವು ವಿಹಂಗಮವಾಗಿದ್ದು, ಸುತ್ತಲೂ ಬೆಟ್ಟ-ಗುಡ್ಡಗಳು ಹಾಗೂ ತುಂಗಭದ್ರಾ ನದಿ ಹರಿಯುತ್ತದೆ. ಇಲ್ಲಿ ಪ್ರೀ-ವೆಡ್ಡಿಂಗ್ ಶೂಟಿಂಗ್‌ಗಾಗಿ ಬೇರೆ ಬೇರೆ ಜಿಲ್ಲೆಗಳಿಂದ ಬರುತ್ತಾರೆ. ಇಲ್ಲಿ ಶೂಟಿಂಗ್‌ಗೆ ಕನಿಷ್ಠ ₹5 ಸಾವಿರದಿಂದ ₹8 ಸಾವಿರದ ವರೆಗೆ ವಸೂಲಿ ಮಾಡಲಾಗುತ್ತಿದೆ.
ಈ ಹಿಂದೆ ಇದೇ ಸ್ಥಳದಲ್ಲಿ ತೆಪ್ಪ ಮುಳುಗಿದ ಉದಾಹರಣೆಗಳಿವೆ. ಹಲವಾರು ಬಾರಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದ್ದರೂ ಇದನ್ನು ಲೆಕ್ಕಿಸದೆ ತೆಪ್ಪ ಮಾಲೀಕರು ಅವ್ಯಾಹತವಾಗಿ ತೆಪ್ಪಗಳನ್ನು ಹಾಕುತ್ತಿದ್ದಾರೆ. ಸ್ಥಳೀಯ ಪ್ರವಾಸಿಗರಿಗೆ ₹800ರಿಂದ ₹1 ಸಾವಿರದ ವರೆಗೆ ಶುಲ್ಕ ನಿಗದಿಪಡಿಸಿದ್ದಾರೆ.ಬಟ್ಟೆ ಒಗೆಯಲು ನಿರಾಕರಣೆ, ತೆಪ್ಪ ಸಂಚಾರಕ್ಕೆ ಅನುಮತಿ: ಸಾಣಾಪುರ ಗ್ರಾಮಸ್ಥರು ನದಿಯಲ್ಲಿ ಬಟ್ಟೆಗಳನ್ನು ತೊಳೆಯಲು ಗ್ರಾಮ ಪಂಚಾಯಿತಿಯವರು ಅನುಮತಿ ನೀಡಿಲ್ಲ. ಆದರೆ, ತೆಪ್ಪಗಳ ಸಂಚಾರಕ್ಕೆ ಅನುಮತಿ ನೀಡಿರುವುದು ಯಾವ ನ್ಯಾಯ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಮೊಸಳೆಗಳು, ನೀರುನಾಯಿಗಳು ಇರುವ ಕಾರಣ ಯಾರೂ ನದಿಗೆ ತೆರಳಬಾರದೆಂದು ಅರಣ್ಯ ಇಲಾಖೆಯವರು ಎಚ್ಚರಿಕೆ ನಾಮಫಲಕವನ್ನೂ ಹಾಕಿದ್ದಾರೆ. ಆದರೆ, ತಾರತಮ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಅಲ್ಲದೆ, ಕೆಲವರು ಬೆಳಗ್ಗೆ ತೆಪ್ಪ ಮೂಲಕ ನದಿ ದಾಟಿ, ಮದ್ಯಪಾನ, ಊಟ ಮಾಡಿ ಸಂಜೆ ವಾಪಸ್ ಬರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಅಸಹಾಯಕರಾದ ಅಧಿಕಾರಿಗಳು: ಸಾಣಾಪುರ ಬಳಿ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ತೆಪ್ಪಗಳನ್ನು ಹಾಕುತ್ತಿದ್ದು, ಅವರಿಗೆ ಹಲವಾರು ಬಾರಿ ನೋಟಿಸ್ ನೀಡಿದ್ದರೂ ನಮ್ಮ ಮಾತು ಕೇಳುತ್ತಿಲ್ಲ ಎಂದು ಅಧಿಕಾರಿಗಳು ನಿಸ್ಸಾಹಾಯಕತೆಯಿಂದ ಹೇಳುತ್ತಿದ್ದಾರೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನೀರಾವರಿ ಇಲಾಖೆ ಹಾಗೂ ಅರಣ್ಯ ಇಲಾಖೆಯವರು ಕ್ರಮ ಕೈಗೊಂಡರೆ ಮುಂದಾಗಬಹುದಾದ ಅವಘಡಗಳನ್ನು ತಪ್ಪಿಸಬಹುದು ಎಂಬ ಅಭಿಪ್ರಾಯ ಗ್ರಾಮಸ್ಥರಿಂದ ಕೇಳಿಬಂದಿದೆ.ಅಸಹಾಯಕರು: ಸಾಣಾಪುರ ಬಳಿ ಇರುವ ತುಂಗಭದ್ರಾ ಸಮಾನಾಂತರ ಜಲಾಶಯ, ಹಳೇ ಪ್ರವಾಸಿ ಮಂದಿರ ಹಾಗೂ ವಾಟರ್‌ಫಾಲ್ಸ್ ಬಳಿ ತೆಪ್ಪಗಳನ್ನು ಹಾಕುತ್ತಿದ್ದಾರೆ. ಹಲವಾರು ಬಾರಿ ನೋಟಿಸ್ ನೀಡಿದ್ದರೂ ಎಚ್ಚೆತ್ತುಕೊಂಡಿಲ್ಲ. ಇದರಿಂದ ನಾವು ನಿಸ್ಸಹಾಯಕರಾಗಿದ್ದೇವೆ ಎಂದು ನೀರಾವರಿ ಇಲಾಖೆ ಎಇಇ ಅಮರೇಶ ಕಂಪ್ಲಿ ಹೇಳಿದರು.ಹಲವಾರು ಬಾರಿ ತೆಪ್ಪಗಳ ಮಾಲೀಕರಿಗೆ ನೋಟಿಸ್ ನೀಡಿದ್ದರೂ ಮಾಲೀಕರು ಎಚ್ಚೆತ್ತುಕೊಂಡಿಲ್ಲ. ಕೂಡಲೇ ಕಂದಾಯ, ಅರಣ್ಯ ಇಲಾಖೆ ಹಾಗೂ ನೀರಾವರಿ ಇಲಾಖೆ, ತಾಲೂಕು ಪಂಚಾಯಿತಿಯಿಂದ ಕಾರ್ಯಾಚರಣೆ ನಡೆಸಿ ತೆಪ್ಪಗಳ ಮಾಲೀಕರ ವಿರುದ್ಧ ದೂರು ದಾಖಲಿಸುತ್ತೇವೆ ತಾಲೂಕು ಪಂಚಾಯಿತಿ ಇಒ ರಾಮರೆಡ್ಡಿ ಪಾಟೀಲ್ ಹೇಳಿದರು.
ಈಗಾಗಲೇ ನದಿಯಲ್ಲಿ ತೆಪ್ಪ ಹಾಕುವವರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೂ ಅವರು ಅಧಿಕಾರಿಗಳ ಕಣ್ಣು ತಪ್ಪಿಸಿ ತೆಪ್ಪಗಳನ್ನು ಹಾಕುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ತೆಪ್ಪಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ಗಂಗಾವತಿ ವಲಯ ಅರಣ್ಯಾಧಿಕಾರಿ ಬಸವರಾಜ್ ಹೇಳಿದರು.