ಕಸಾಯಿಖಾನೆಯಲ್ಲಿ ಅಕ್ರಮವಾಗಿ ಗೋವು ಹತ್ಯೆ-ದೂರು

| Published : Feb 15 2025, 12:30 AM IST

ಕಸಾಯಿಖಾನೆಯಲ್ಲಿ ಅಕ್ರಮವಾಗಿ ಗೋವು ಹತ್ಯೆ-ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲ ಪಟ್ಟಣದ ಹೊರವಲಯದ ಕಸಾಯಿಖಾನೆಯಲ್ಲಿ ಗೋವು ಸೇರಿದಂತೆ ವಿವಿಧ ಜಾನುವಾರುಗಳನ್ನು ಕಾನೂನು ಬಾಹೀರವಾಗಿ ಕತ್ತರಿಸಿ ಬೇರೆಡೆಗೆ ರವಾನಿಸುವ ಸುಳಿವು ಹಿಡಿದ ಯುವಕರ ತಂಡವೊಂದು ಶುಕ್ರವಾರ ನಸುಕಿನಲ್ಲಿ ಕಸಾಯಿಖಾನೆಗೆ ಲಗ್ಗೆ ಇಟ್ಟು ಅಧಿಕಾರಿಗಳನ್ನು ಕರೆಯಿಸಿಕೊಂಡು ತನಿಖೆಗೆ ಒತ್ತಾಯಿಸಿದ ಘಟನೆ ನಡೆದಿದೆ.

ಹಾನಗಲ್ಲ: ಪಟ್ಟಣದ ಹೊರವಲಯದ ಕಸಾಯಿಖಾನೆಯಲ್ಲಿ ಗೋವು ಸೇರಿದಂತೆ ವಿವಿಧ ಜಾನುವಾರುಗಳನ್ನು ಕಾನೂನು ಬಾಹೀರವಾಗಿ ಕತ್ತರಿಸಿ ಬೇರೆಡೆಗೆ ರವಾನಿಸುವ ಸುಳಿವು ಹಿಡಿದ ಯುವಕರ ತಂಡವೊಂದು ಶುಕ್ರವಾರ ನಸುಕಿನಲ್ಲಿ ಕಸಾಯಿಖಾನೆಗೆ ಲಗ್ಗೆ ಇಟ್ಟು ಅಧಿಕಾರಿಗಳನ್ನು ಕರೆಯಿಸಿಕೊಂಡು ತನಿಖೆಗೆ ಒತ್ತಾಯಿಸಿದ ಘಟನೆ ನಡೆದಿದೆ.

ಹಾನಗಲ್ಲ ಪಟ್ಟಣದಿಂದ ಬೈಚವಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಹಲವು ವರ್ಷಗಳಿಂದ ಕಸಾಯಿಖಾನೆಯೊಂದು ಇದ್ದು, ಅಧಿಕೃತವಾಗಿ ದನದ ಮಾಂಸ ಕತ್ತರಿಸಿ ಮಾರುವ ಪರವಾನಗಿ ಹೊಂದಿದೆ. ಇಲ್ಲಿ ೧೩ ವರ್ಷ ವಯಸ್ಸು ದಾಟಿದ ಆರೋಗ್ಯವಂತ ಎಮ್ಮೆ ಹಾಗೂ ಕೋಣಗಳನ್ನು ಕತ್ತರಿಸಿ ಮಾರಬಹುದು ಎಂದು ಪಶುವೈದ್ಯಾಧಿಕಾರಿ ಡಾ. ಗಿರೀಶ ರಡ್ಡೇರ ತಿಳಿಸುತ್ತಾರೆ. ಇಲ್ಲಿ ಕಾನೂನು ಬಾಹೀರವಾಗಿ ಗೋವು ಹಾಗೂ ಎತ್ತುಗಳನ್ನು ಕತ್ತರಿಸಿ ಮಾಂಸವನ್ನು ಸ್ಥಳೀಯವಾಗಿ ಹಾಗೂ ಬೇರೆಡೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ಆದರೆ ಇದಕ್ಕೆ ಸಂಬಂಧಿಸಿದ ಸ್ಥಳೀಯ ಅಧಿಕಾರಿಗಳಿಗೆ ಹಲವು ಬಾರಿ ದೂರು ಸಲ್ಲಿಸಿದರೂ ಕೂಡ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪವೂ ಇದೆ. ಆ ಕಾರಣಕ್ಕಾಗಿಯೇ ಬುಧವಾರ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಈ ಕುರಿತು ಹಿಂದೂ ಜಾಗರಣಾ ವೇದಿಕೆಯ ದೇವರಾಜ ಅರಳಿಹಳ್ಳಿ ಮಾಹಿತಿ ನೀಡಿದ್ದರು. ಶುಕ್ರವಾರ ಬೆಳಗಿನ ೪ ಗಂಟೆಗೆ ಬೈಚವಳ್ಳಿ ರಸ್ತೆಯಲ್ಲಿರುವ ಕಸಾಯಿಖಾನೆಗೆ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಲಗ್ಗೆ ಇಟ್ಟು ಪರೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಗೋಮಾಂಸ ಇರುವುದನ್ನು ಖಾತ್ರಿ ಮಾಡಿಕೊಂಡು ಹಾನಗಲ್ಲ ಪೊಲೀಸ್, ಪಶುವ್ಯದ್ಯಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಫೋನಾಯಿಸಿ ವಿಷಯ ತಿಳಿಸಿ ಸ್ಥಳಕ್ಕೆ ಆಗಮಿಸಲು ಕೋರಿದ್ದಾರೆ.ನಂತರ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳೊಂದಿಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಚರ್ಚಿಸಿ ಈ ಪ್ರಕರಣದಲ್ಲಿ ಸತ್ಯ ವರದಿ ಮೂಲಕ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ ನಿಂಗಪ್ಪ ಹಾನಗಲ್ಲ ಎಂಬುವವರು ಕಾಶೀಫ್‌ಅಹ್ಮದ ಅಬ್ದುಲ್ ಕರೀಮ ಮಸೂತಿಖಾನಿ ಎಂಬವರ ವಿರುದ್ಧ ದೂರು ನೀಡಿದ್ದಾರೆ. ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಸಾಯಿಖಾನೆಗೆ ಭೇಟಿ ನೀಡಿದ ಅಧಿಕಾರಿಗಳು ಹರಿತವಾದ ಆಯುಧಗಳು, ಆಕಳು, ಎಮ್ಮೆಕರು, ಎತ್ತು ಸೇರಿದಂತೆ ೯ ದನಗಳು. ಎರಡು ಟಾಟಾ ಏಸ್ ವಾಹನಗಳು, ಒಂದು ಬೋಲೆರೋ ವಾಹನ ವಶಪಡಿಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸಿಪಿಐ ಎನ್.ಎಚ್. ಆಂಜನೇಯ ಇದ್ದರು.ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ನಾವೇ ಇಂಥ ಕ್ರಮಕ್ಕೆ ಮುಂದಾಗಬೇಕಾಯಿತು. ಎಲ್ಲಿಯೇ ಗೋ ಹತ್ಯೆ ನಡೆದರೂ ನಾವು ಸಹಿಸುವುದಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ದೇವರಾಜ ಅರಳಿಹಳ್ಳಿ ಹೇಳಿದರು.ಹಾನಗಲ್ಲ ಹೊರವಲಯದ ಕಸಾಯಿಖಾನೆಯನ್ನು ಸೀಜ್ ಮಾಡಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ. ಅಲ್ಲದೆ ಅಲ್ಲಿ ಅನಧಿಕೃತವಾಗಿ ಕತ್ತರಿಸಿದ ಮಾಂಸದ ಕಾನೂನುಬದ್ಧ ಪರೀಕ್ಷೆ ನಡೆಸಿ, ಮಾಂಸವನ್ನು ಅನಾರೋಗ್ಯಕ್ಕೆ ಅವಕಾಶವಿಲ್ಲದಂತೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುವುದು ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಹೇಳಿದರು.