ಅಕ್ರಮ ಗೋ ಸಾಗಾಟ ಕಾರು ಪಲ್ಟಿ: ಆರೋಪಿಗಳು ಪರಾರಿ

| Published : Mar 26 2024, 01:17 AM IST

ಸಾರಾಂಶ

ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಚರಂಡಿಗೆ ಬಿದ್ದ ಘಟನೆ ಭಾನುವಾರ ರಾತ್ರಿ ಪುತ್ತೂರು ತಾಲೂಕಿನ ಕಬಕ ಗ್ರಾಮದ ಅಡ್ಯಲಾಯ ಎಂಬಲ್ಲಿ ನಡೆದಿದೆ. ಇದರಲ್ಲಿ ಸಾಗಿಸಲಾಗುತ್ತಿದ್ದ ನಾಲ್ಕು ಗೋವುಗಳ ಸಹಿತ ಸಹಿತ ಕಾರನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಸ್ವಿಫ್ಟ್ ಕಾರಿನಲ್ಲಿ ಅಕ್ರಮವಾಗಿ ಗೋ ಸಾಗಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಚರಂಡಿಗೆ ಬಿದ್ದ ಘಟನೆ ಭಾನುವಾರ ರಾತ್ರಿ ಪುತ್ತೂರು ತಾಲೂಕಿನ ಕಬಕ ಗ್ರಾಮದ ಅಡ್ಯಲಾಯ ಎಂಬಲ್ಲಿ ನಡೆದಿದೆ. ಇದರಲ್ಲಿ ಸಾಗಿಸಲಾಗುತ್ತಿದ್ದ ನಾಲ್ಕು ಗೋವುಗಳ ಸಹಿತ ಸಹಿತ ಕಾರನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅರೋಪಿಗಳು ಪರಾರಿಯಾಗಿದ್ದಾರೆ.

ಅಕ್ರಮವಾಗಿ ಕಾರಿನಲ್ಲಿ ಗೋವುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಅರಿತು ಕಬಕದ ಬಜರಂಗದಳ ಕಾರ್ಯಕರ್ತರು ಕಾರನ್ನು ತಡೆಯಲು ಪ್ರಯತ್ನಿಸಿದಾಗ ಕಾರಿನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿತ್ತು. ಈ ಕಾರಿನಲ್ಲಿ ಎರಡು ದನ ಹಾಗೂ ಎರಡು ಕರುಗಳನ್ನು ಕೈ ಕಾಲುಗಳನ್ನು ಹಿಂಸಾತ್ಮಕ ರಿತಿಯಲ್ಲಿ ತುಂಬಿಸಲಾಗಿತ್ತು.

ಬಳಿಕ ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣಾ ಪೊಲೀಸ್ ಅಧಿಕಾರಿಗಳು ೪ ಗೋವುಗಳನ್ನು ಮತ್ತು ಜಖಂಗೊಂಡ ವಾಹನವನ್ನು ಪುತ್ತೂರು ನಗರ ಠಾಣೆಗೆ ತಂದಿದ್ದಾರೆ. ರಕ್ಷಿಸಿದ ಗೋವುಗಳಿಗೆ ನೀರು ಮತ್ತು ಮೇವಿಗೆ ಬಜರಂಗದಳದ ಕಾರ್ಯಕರ್ತರು ವ್ಯವಸ್ಥೆ ಮಾಡಿದರು.

ಪೋಕ್ಸೋ ಆರೋಪಿಗಳ ಖುಲಾಸೆ:

ಬಂಟ್ವಾಳ ತಾಲೂಕಿನ ಪಾಂಡವರ ಕಲ್ಲು ಎಂಬಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗಳಿಬ್ಬರನ್ನು ಜಿಲ್ಲಾ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ನಿವಾಸಿ ನೌಷದ್ ಮತ್ತು ಈತನ ತಾಯಿ ರಹಿಮತ್‌ ಖುಲಾಸೆಗೊಂಡ ಆರೋಪಿಗಳು.2020 ರ ಅ.14 ರಂದು ಆರೋಪಿಗಳು ಸ್ಥಳೀಯ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪುಂಜಾಲಕಟ್ಟೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿ ಸಲ್ಲಿಸಿದ್ದರು.

ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳ ಇಟ್ಟಿ ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿದ ಬಳಿಕ ಆರೋಪಿಗಳು ನಿರ್ದೋಷಿಗಳಾಗಿದ್ದಾರೆ ಎಂದು ತೀರ್ಪು ನೀಡಿ ಬಿಡುಗಡೆಗೊಳಿಸಿರುತ್ತಾರೆ.ಆರೋಪಿಗಳ ಪರವಾಗಿ ಬಿ.ಸಿ.ರೋಡಿನ ನ್ಯಾಯವಾದಿಗಳಾದ ಶ್ರೀಧರ ಪೈ ಮತ್ತು ಶುಭಶ್ರೀ ವಾದಿಸಿದ್ದರು.