ಅನಧಿಕೃತ ಪಟಾಕಿ ಅಂಗಡಿಗಳ ಮೇಲೆ ದಾಳಿ
KannadaprabhaNewsNetwork | Published : Oct 12 2023, 12:00 AM IST
ಅನಧಿಕೃತ ಪಟಾಕಿ ಅಂಗಡಿಗಳ ಮೇಲೆ ದಾಳಿ
ಸಾರಾಂಶ
ಅನಧಿಕೃತ ಪಟಾಕಿ ಅಂಗಡಿಗಳ ಮೇಲೆ ದಾಳಿಸುರಪುರದಲ್ಲಿ ಅನಧಿಕೃತವಾಗಿ ಪಟಾಕಿ ಮಾರುತ್ತಿದ್ದ 3 ಅಂಗಡಿಗಳ ಸೀಜ್! । ಕಂದಾಯ, ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳಿಂದ ದಾಳಿ
- ಸುರಪುರದಲ್ಲಿ ಅನಧಿಕೃತವಾಗಿ ಪಟಾಕಿ ಮಾರುತ್ತಿದ್ದ 3 ಅಂಗಡಿಗಳ ಸೀಜ್! । ಕಂದಾಯ, ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳಿಂದ ದಾಳಿ ಕನ್ನಡಪ್ರಭ ವಾರ್ತೆ ಸುರಪುರ ಬೆಂಗಳೂರಿನ ಹೊರವಲಯದಲ್ಲಿ ಇತ್ತೀಚೆಗೆ ನಡೆದ ಪಟಾಕಿ ಗೋಡಾನ್ ಅವಘಡದಿಂದ 14 ಜನರು ಸಜೀವ ದಹನವಾಗಿದ್ದು, ಇಂಥಹ ಘಟನೆಗಳು ಮರುಕಳಿಸಿದಂತೆ ರಾಜ್ಯ ಸರಕಾರದ ಆದೇಶದಂತೆ ತಾಲೂಕಿನಲ್ಲಿ ಪರವಾನಗಿ ಹೊಂದಿಲ್ಲದ ಪಟಾಕಿ ಅಂಗಡಿಗಳ ಮೇಲೆ ಕಂದಾಯ ಮತ್ತು ಪೊಲೀಸ್, ಅಗ್ನಿಶಾಮಕ ದಳದ ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಾಳಿ ನಡೆಸಿ 3 ಅಂಗಡಿಗಳನ್ನು ಸೀಜ್ ಮಾಡಲಾಯಿತು. ಕಂದಾಯ ಮತ್ತು ಪೊಲೀಸ್, ಅಗ್ನಿಶಾಮಕ ದಳದ ಅಧಿಕಾರಿಗಳು ತರಕಾರಿ ಮಾರುಕಟ್ಟೆ ಸಮೀಪದ ಪಟಾಕಿ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಪಟಾಕಿ ಮಾರುವ ಪರವಾನಗಿಯನ್ನು ಕೇಳಿದಾಗ ಇಲ್ಲವೆಂದು ಉತ್ತರಿಸಿದ ಕೆಲವರ ಅಂಗಡಿಗಳ ತುಂಬೆಲ್ಲ ಪಟಾಕಿಗಳೇ ಇದ್ದವು. ಅಲ್ಲದೆ ಅಪಾರ ಜನಸಂದಣಿಯುಳ್ಳ ಪ್ರದೇಶದಲ್ಲಿ ಅಂಗಡಿಗಳು ಇದ್ದಿದ್ದರಿಂದ ಮುಲಾಜಿಲ್ಲದೆ ಎರಡು ಅಂಗಡಿಗಳನ್ನು ಸೀಜ್ ಮಾಡಿ ಸರಕಾರದ ಮುದ್ರೆ ಒತ್ತಿದರು. ಅಲ್ಲಿಂದ ದರಬಾರ್ ರಸ್ತೆ ಮಾರ್ಗವಾಗಿ ರಾಘವೇಂದ್ರ ದೇಗುಲದ ಹತ್ತಿರದ ಲಕ್ಷ್ಮೀ ಸ್ಟೋರ್ಸ್ ಅಂಗಡಿ ಮೇಲೆ ದಾಳಿ ನಡೆಸಿ ಪಟಾಕಿ ಪರವಾನಗಿ ಕೇಳಿದಾಗ ಅಂಗಡಿ ಮಾಲೀಕ ಉತ್ತರಿಸಲು ತಡಬಡಾಯಿಸಿದರು. ಪಟಾಕಿ ಇರುವುದರಿಂದ ಅಂಗಡಿಯ ಮುಂಭಾಗ ಇರುವ ಎಲ್ಲ ವಸ್ತುಗಳನ್ನು ಎತ್ತಿಟ್ಟುಕೊಳ್ಳಲು 10 ನಿಮಿಷ ನೀಡಿದ ಬಳಿಕ ಅಂಗಡಿಯನ್ನು ಸೀಜ್ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಕೆ. ವಿಜಯಕುಮಾರ, ಭವಿಷ್ಯತ್ತಿನಲ್ಲಿ ಪಟಾಕಿಯ ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ತಾಲೂಕಿನಲ್ಲಿ ಪಟಾಕಿ ಮಾರಾಟ ಮಾಡುವ ಅಂಗಡಿಗಳ ಮೇಲೆ ಮೂರು ದಿನಗಳ ಕಾಲ ದಾಳಿ ನಡೆಯುತ್ತದೆ. ಬಳಿಕ ಸಮಗ್ರ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುತ್ತದೆ. ಪಟಾಕಿಗಳನ್ನು ಸಂಗ್ರಹಿಸುವ, ಸಾಗಣೆ ಮಾಡುವ ಹಾಗೂ ಮಾರಾಟ ಮಾಡುವ ಸಂದರ್ಭದಲ್ಲಿ ಅನುಮತಿಯನ್ನು ಸಮಕ್ಷಮ ಪ್ರಾಧಿಕಾರದಿಂದ ಪಡೆದಿರುವುದನ್ನು ಸ್ಥಳದಲ್ಲೇ ದೃಢೀಕರಿಸಿಕೊಳ್ಳಲಾಗಿದೆ ಎಂದರು. ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳ ಅಧಿಕಾರಿಗಳು ತಪಾಸಣೆಗೆ ಸಹಕಾರ ನೀಡಿದ್ದಾರೆ. ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಪಟಾಕಿಗಳಿಂದ ಯಾವುದೇ ಅವಘಡಗಳು ತನ್ಮೂಲಕ ಜೀವ ಹಾನಿ ಸಂಭವಿಸದಂತೆ ಸಂಪೂರ್ಣ ಎಚ್ಚರಿಕೆ ವಹಿಸಲಾಗುತ್ತದೆ. ನಿಯಮ ಮೀರಿದರೆ ಯಾರೇ ಆದರೂ ಮುಲಾಜಿಲ್ಲದೆ ಕ್ರಮಕ್ಕೆ ಮುಂದಾಗಲಾಗುವುದು ಎಂದು ತಿಳಿಸಿದರು. ದಾಳಿ ಸಂದರ್ಭದಲ್ಲಿ ಸಿಪಿಐ ಆನಂದ ವಾಗ್ಮೋಡೆ, ಪೊಲೀಸ್ ಪೇದೆಗಳಾದ ಶಿವರಾಜ್ ಪಾಣೆಂಗಾವ್, ನಂದಪ್ಪ, ದಯಾನಂದ ಜಮಾದಾರ, ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ್, ಗ್ರಾಮ ಆಡಳಿತ ಅಧಿಕಾರಿಗಳಾದ ದುಷಂತ್ ಕಮ್ಮಾರ್, ಪ್ರದೀಪಕುಮಾರ ನಲವಾಡೆ, ಸರ್ವೇ ಅಧಿಕಾರಿ ಶಿವಾನಂದ ಗೋಗಿ, ಇತರರಿದ್ದರು. = = =ಬಾಕ್ಸ್= = = ಮಾಹಿತಿ ಇಲ್ಲದೆ ದಾಳಿ, ಮಾಲೀಕರಿಗೆ ದಿಗಿಲು ಯಾವುದೇ ಮಾಹಿತಿಯಿಲ್ಲದೇ ಪಟಾಕಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, ಮಾಲೀಕರಲ್ಲಿ ದಿಗಿಲು ಹುಟ್ಟಿಸಿತ್ತು. ಅಧಿಕಾರಿಗಳ ಕೇಳುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವೇ ಇರಲಿಲ್ಲ. ಒಂದು ಅಂಗಡಿಯವರಂತೂ ಬೀಗದ ಕೈ ಕೊಡದೇ ತಾಲೂಕಾಡಳಿತ ಬಿಳಿ ಬಟ್ಟೆಯನ್ನು ಕಟ್ಟಿ ಸೀಜ್ ಮಾಡಿದ ಘಟನೆಯೂ ನಡೆಯಿತು. ಸಾರ್ವಜನಿಕರು ತಾಲೂಕಾಡಳಿತ ಮತ್ತು ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳ ಅಧಿಕಾರಿಗಳು ಒಟ್ಟಿಗೆ ಆಗಮಿಸಿದ್ದನ್ನು ಕಂಡು ಜನರು ಆಶ್ಚರ್ಯ ಚಕಿತರಾಗುತ್ತಿರುವುದು ಕಂಡು ಬಂದಿತು. - - - 11ವೈಡಿಆರ್3: ಸುರಪುರ ನಗರದಲ್ಲಿ ಪರವಾನಗಿ ಇಲ್ಲದ ಪಟಾಕಿ ಮಾರುತ್ತಿದ್ದ ಆರೋಪದಡಿ ಅಂಗಡಿಗಳ ಪರಿಶೀಲನೆ ನಡೆಸಿದ ತಹಸೀಲ್ದಾರ್ ಮತ್ತು ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. - - - 11ವೈಡಿಆರ್4 : ಸುರಪುರ ನಗರದಲ್ಲಿ ಪರವಾನಗಿ ಇಲ್ಲದ ಪಟಾಕಿ ಮಾರುತ್ತಿದ್ದ ಆರೋಪದಡಿ ಅಂಗಡಿಗಳ ಪರಿಶೀಲನೆ ನಡೆಸಿದ ತಹಸೀಲ್ದಾರ್ ಮತ್ತು ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ---000---