ಎಲ್‌ಟಿ ಲೈನ್‌ಗೆ ಕೊಕ್ಕೆ ಹಾಕಿಕೊಂಡು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದ ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿಯಲ್ಲಿ ಕಾರ್ಯಾಚರಣೆ ನಡೆಸಿದ ಸೆಸ್ಕಾಂ ಜಾಗೃತ ದಳದ ಅಧಿಕಾರಿಗಳು, ಸಿಬ್ಬಂದಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಎಲ್‌ಟಿ ಲೈನ್‌ಗೆ ಕೊಕ್ಕೆ ಹಾಕಿಕೊಂಡು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದ ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿಯಲ್ಲಿ ಕಾರ್ಯಾಚರಣೆ ನಡೆಸಿದ ಸೆಸ್ಕಾಂ ಜಾಗೃತ ದಳದ ಅಧಿಕಾರಿಗಳು, ಸಿಬ್ಬಂದಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಾಲೋನಿಯಲ್ಲಿರುವ ಗುಡಿಸಲುಗಳು, ನಾಲ್ಕೈದು ಆರ್‌ಸಿಸಿ ಮನೆಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದಿದ್ದ ೨೩ ನಿವಾಸಿಗಳು ಹಾಗೂ ಕಾಲೋನಿಯ ಸುತ್ತಮುತ್ತ ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದ ೧೧ ಜನರು ಸೇರಿ ಒಟ್ಟು ೩೪ ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸೆಸ್ಕಾಂ ಜಾಗೃತದಳದ ಅಧೀಕ್ಷಕಿ ಸವಿತಾ ಹೂಗಾರ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಪೃಥ್ವಿರಾಜ್ ನೇತೃತ್ವದಲ್ಲಿ ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು ಜಿಲ್ಲೆಗಳ ಸೆಸ್ಕಾಂ ಜಾಗೃತದಳದ ಎಲ್ಲಾ ಇನ್ಸ್‌ಪೆಕ್ಟರ್‌ಗಳು, ಸಬ್ ಇನ್ಸ್‌ಪೆಕ್ಟರ್‌ಗಳು, ಅಸಿಸ್ಟೆಂಟ್ ಇಂಜಿನಿಯರ್‌ಗಳು, ಜೂನಿಯರ್ ಇಂಜಿನಿಯರ್‌ಗಳು, ಪವರ್‌ಮನ್‌ಗಳು ಸೇರಿ ಎಂಟು ತಂಡಗಳು ಬುಧವಾರ ತಮಿಳು ಕಾಲೋನಿ ಪ್ರವೇಶಿಸಿ ಕಾರ್ಯಾಚರಣೆಗೆ ಇಳಿದರು.ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ತಮಿಳು ಕಾಲೋನಿಯಲ್ಲಿ ಕಾರ್ಯಾಚರಣೆ ನಡೆಸಿ ಎಲ್‌ಟಿ ಲೈನ್‌ಗಳಿಗೆ ಕೊಕ್ಕೆ ಹಾಕಿಕೊಂಡಿದ್ದ ವೈರ್‌ಗಳನ್ನು ಕಟ್ ಮಾಡಿ ಸಂಪರ್ಕ ಕಡಿತಗೊಳಿಸಿದರು. ನಂತರ ಸಂಜೆ ೪ ಗಂಟೆಯವರೆಗೂ ಕಾರ್ಯಾಚರಣೆ ನಡೆಸಿ ಕಾಲೋನಿಯ ಪ್ರದೇಶ ವ್ಯಾಪ್ತಿಯಲ್ಲಿ ಅಕ್ರಮವಾಗಿ ವಿದ್ಯುತ್ ಪಡೆದಿದ್ದ ೧೧ ಸಂಪರ್ಕಗಳನ್ನು ಕಡಿತಗೊಳಿಸಿದರು.
ತಮಿಳು ನಿವಾಸಿಗಳ ವಿರೋಧ:ಅನಧಿಕೃತ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಆಗಮಿಸಿದ ಸೆಸ್ಕಾಂ ಜಾಗೃತ ದಳದವರನ್ನು ಕಂಡು ತಮಿಳು ನಿವಾಸಿಗಳು ಅವರನ್ನು ಸುತ್ತುವರಿದರು. ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ನಾವು ಪುಟ್ಟ ಮಕ್ಕಳೊಂದಿಗೆ ಬದುಕುವುದು ಹೇಗೆ. ಏಕೆ ಹೀಗೆಲ್ಲಾ ಮಾಡುತ್ತಿದ್ದೀರಿ. ನಾವು ಎಲ್ಲಿಗೆ ಹೋಗೋಣ ಎಂದು ಮಹಿಳೆಯರು ಪ್ರಶ್ನಿಸಿದರು.
ನಾವು ೪೦-೫೦ ವರ್ಷದಿಂದ ಇಲ್ಲಿ ಬದುಕುತ್ತಿದ್ದೇವೆ. ನಾವು ಇಲ್ಲಿ ವಾಸಿಸಲು ನಗರಸಭೆಯಿಂದ ಹಕ್ಕುಪತ್ರಗಳನ್ನು ನೀಡಲಾಗಿದೆ. ನ್ಯಾಯಾಲಯದ ತಡೆಯಾಜ್ಞೆ ಇದೆ. ಹಾಗಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತಿಲ್ಲ. ಯಾವುದೇ ನೋಟೀಸ್‌ಗಳನ್ನು ನೀಡದೆ ಹೀಗೆ ಮಾಡುವುದು ಸರಿಯಲ್ಲವೆಂದು ಸ್ಥಳೀಯ ನಿವಾಸಿಗಳು ದೂಷಿಸಿದರು.ಆದರೂ ಇದಾವುದನ್ನೂ ಲೆಕ್ಕಿಸದೆ ಸೆಸ್ಕಾಂ ಜಾಗೃತ ದಳದ ತಂಡ ಪವರ್‌ಮ್ಯಾನ್‌ಗಳನ್ನು ಮನೆಗಳನ್ನು ಹತ್ತಿಸಿ ಎಲ್‌ಟಿ ಲೈನ್‌ಗೆ ಸಿಕ್ಕಿಸಿಕೊಂಡಿದ್ದ ವಿದ್ಯುತ್ ವೈರ್‌ಗಳನ್ನು ಕಡಿತಗೊಳಿಸಿದರು. ಮುನ್ನೆಚ್ಚರಿಕೆಯಾಗಿ ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಖಾಕಿ ಪಡೆಯನ್ನು ಕರೆಸಿಕೊಂಡು ಕಾರ್ಯಾಚರಣೆ ಮುಂದುವರೆಸಿದರು. ನಂತರ ನಿವಾಸಿಗಳೆಲ್ಲರೂ ವಿರೋಧದಿಂದ ದೂರ ಸರಿದು ಸುಮ್ಮನಾದರು ಎನ್ನಲಾಗಿದೆ.
ಬಲಾಢ್ಯರನ್ನೂ ತೆರವುಗೊಳಿಸುವಂತೆ ಆಗ್ರಹಕನ್ನಡಪ್ರಭ ವಾರ್ತೆ ಮಂಡ್ಯಮಿಮ್ಸ್‌ಗೆ ಸೇರಿದ ಜಾಗವನ್ನು ಬಲಾಢ್ಯ ಒತ್ತುವರಿದಾದರಿಂದ ತೆರವುಗೊಳಿಸಿದಲ್ಲಿ ತಮಿಳು ಕಾಲೋನಿಯನ್ನೂ ತೆರವುಗೊಳಿಸಲು ಬದ್ಧ ಎಂದು ಜಿಲ್ಲಾ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಗುರುಪ್ರಸಾದ್ ಕೆರಗೋಡು ತಿಳಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಹಲವಾರು ದಶಕಗಳಿಂದಲೂ ಜಿಲ್ಲಾಡಳಿತ, ನಗರಸಭೆಯ ತಪ್ಪುಗಳಿಂದ ತೊಂದರೆ ಅನುಭವಿಸಿ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಬದುಕುತ್ತಿರುವ ಜಿಲ್ಲಾ ಆಸ್ಪತ್ರೆ ಪಕ್ಕದ ತಮಿಳು ಕಾಲೋನಿ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ. ಅವರ ಪರವಾಗಿ ನ್ಯಾಯಾಲಯ ತೀರ್ಪು ನೀಡಿದೆ. ಆದರೆ ಕೆಲವು ಹೋರಾಟಗಾರರು ಅವರನ್ನು ಒಕ್ಕಲೆಬ್ಬಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆಸ್ಪತ್ರೆ ವಿಸ್ತರಣೆ ದೃಷ್ಠಿಯಿಂದ ಮಿಮ್ಸ್‌ನ ಜಾಗವನ್ನು ಬಲಾಢ್ಯರಿಂದ ಒತ್ತುವರಿ ತೆರವುಗೊಳಿಸಿದಲ್ಲಿ ತಮಿಳು ನಿವಾಸಿಗಳೂ ಸಹ ಖಾಲಿ ಮಾಡುತ್ತಾರೆ ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸ್ಪಷ್ಟಪಡಿಸಿದರು.ನಮಗೆ ಆಸ್ಪತ್ರೆ ವಿಸ್ತರಣೆ ಬಗ್ಗೆ ವಿರೋಧ ಇಲ್ಲ. ಆದರೆ, ಬಡವರು ಬದುಕುತ್ತಿರುವ ತಮಿಳು ಕಾಲೋನಿ ನಿವಾಸಿಗಳನ್ನೇ ಏಕೆ ಗುರಿಯಾಗಿಸಿಕೊಂಡಿದ್ದಿರಿ. ಪಕ್ಕದ ಸುಮಾರು ೧೪ ಎಕರೆಗೂ ಹೆಚ್ಚಿನ ಜಾಗವನ್ನು ಹಲವು ಬಲಾಢ್ಯರು ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಾರೆ. ಮೊದಲು ಅವುಗಳನ್ನು ತೆರವುಗೊಳಿಸಿ. ಅದನ್ನು ಬಿಟ್ಟು ತಮಿಳುಕಾಲೋನಿ ನಿವಾಸಿಗಳನ್ನೇ ಗುರಿಯಾಗಿಸಿಕೊಂಡು ಹೋರಾಟ ಮಾಡುವುದು ಹೋರಾಟಗಾರರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.ಒಕ್ಕಟದ ಮುಖಂಡರಾದ ಕೃಷ್ಣೇಗೌಡ, ಸಿ.ಕುಮಾರಿ, ದ್ಯಾವಯ್ಯ, ಗುರುಮೂರ್ತಿ, ಹನುಮೇಶ್ ಇತರರಿದ್ದರು.