ಸಾರಾಂಶ
ಕೊಳ್ಳೇಗಾಲ: ಆನೆ ದಂತಗಳನ್ನು ಅಕ್ರಮವಾಗಿ ಬೈಕ್ ನಲ್ಲಿ ಸಾಗಾಣಿಕೆ ಮಾಡುತ್ತಿದ್ದ ಫಾರೆಸ್ಟ್ ವಾಚರ್ ಸೇರಿ ಇಬ್ಬರನ್ನು ಬುಧವಾರ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದವರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ಟಣದ ಮೋಳೆ ಬಡಾವಣೆಯ ವಾಸಿ ಮತ್ತು ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಜಾಗೇರಿ ದೊಡ್ಡ ಮಾಕಳಿ ಕ್ಯಾಂಪ್ ಮತ್ತು ಬೀಟ್ ನಲ್ಲಿ ಕರ್ತವ್ಯದಲ್ಲಿದ್ದ ಚಂದ್ರಶೇಖರ (27), ಎನ್.ಬಸವರಾಜು (36) ಬಂಧಿತರು, ಮತ್ತೋರ್ವ ಆರೋಪಿ ಪುಟ್ಟಸ್ವಾಮಿ (55) ಪರಾರಿಯಾದವನು. ಬಂಧಿತರಿಂದ 13 ಕೆಜಿ 500 ಗ್ರಾಮ್ ತೂಕವುಳ್ಳ ಎರಡು ಆನೆ ದಂತಗಳು ಹಾಗೂ ಸಾಗಾಣಿಕೆ ಬಳಸಿದ್ದ ಕೆಎ-10 ಇಎ 8701 ನಂಬರ್ ಪಲ್ಸರ್ ಬೈಕ್ ನ್ನು ಜಪ್ತಿ ಮಾಡಲಾಗಿದೆ.ಆನೆ ದಂತಗಳನ್ನು ಮಾರಾಟ ಮಾಡುವ ಸಲುವಾಗಿ ತಮ್ಮ ಬೈಕ್ ನಲ್ಲಿ ಸಾಗಾಣಿಕೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಉಪಧೀಕ್ಷಕ ವೆಂಕಟೇಶ್ ಮಾರ್ಗದರ್ಶನದಲ್ಲಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಎಸ್ಐ ವಿಜಯರಾಜ್ ಹಾಗೂ ಸಿಬ್ಬಂದಿ ಕೊಳ್ಳೇಗಾಲದ ಮೋಳೆ ರಿಂಗ್ ರೋಡ್ ಸಮೀಪ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಈ ಸಂಬಂಧ ಎಫ್.ಎಂ.ಎಸ್ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಬಂಧಿತರನ್ನು ನ್ಯಾಯಾಂಗ ಮುಂದೆ ಹಾಜರುಪಡಿಸಿದ್ದಾರೆ. ನಾಪತ್ತೆಯಾದ ಆರೋಪಿ ಪತ್ತೆಗೆ ಕ್ರಮ ವಹಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಬೆಂಗಳೂರು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೊಳ್ಳೇಗಾಲ ಸಿಐಡಿ ಅರಣ್ಯ ಸಂಚಾರಿ ದಳದ ಹೆಡ್ ಕಾನ್‌ಸ್ಟೇಬಲ್‌ಗಳಾದ ಬಸವರಾಜು, ರಾಮಚಂದ್ರ, ಜಮೀಲ್, ಸ್ವಾಮಿ ,ಲತಾ, ಕಾನ್ ಸ್ಟೇಬಲ್ ಬಸವರಾಜು, ಚಾಲಕ ಪ್ರಭಾಕರ್ ಇದ್ದರು.