ಸಾರಾಂಶ
ಕಾಂಡಕೊಲ್ಲಿ ರಸ್ತೆಯ ಚಾಮುಂಡೇಶ್ವರಿ ದೇವಾಲಯದ ಬಳಿಯಲ್ಲಿ ಅಕ್ರಮ ಗಾಂಜಾ ಮಾರಾಟ ಮತ್ತು ಬಳಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸುಂಟಿಕೊಪ್ಪ: ಕಾಂಡಕೊಲ್ಲಿ ರಸ್ತೆಯ ಚಾಮುಂಡೇಶ್ವರಿ ದೇವಾಲಯದ ಬಳಿಯಲ್ಲಿ ಅಕ್ರಮ ಗಾಂಜಾ ಮಾರಾಟ ಮತ್ತು ಬಳಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ ಇಲ್ಲಿನ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸುಂಟಿಕೊಪ್ಪ 2ನೇ ವಿಭಾಗದ ನಿವಾಸಿ ಸತ್ತಾರ್ ರಫೀಕ್ (40) ಮತ್ತು ಗದ್ದೆಹಳ್ಳ ನಿವಾಸಿ ವಿಷ್ಣು (21) ಎಂಬಿಬ್ಬರು ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಬ್ಬರು ಫೆ. 27 ರಂದು ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಟಿಕೊಪ್ಪ ಕಾಂಡನಕೊಲ್ಲಿ ರಸ್ತೆಯಲ್ಲಿರುವ ಚಾಮುಂಡೇಶ್ವರಿ ದೇವಾಲಯದ ಸಮೀಪದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ - ಸರಬರಾಜು ಮಾಡಲು ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 360 ಗ್ರಾಂ ಗಾಂಜಾ ವಶ ಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಾಗಿದೆ.ಸೋಮವಾರಪೇಟೆ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಡಿ.ವಿ. ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕರಾದ ಕೆ. ರಾಜೇಶ್, ಸುಂಟಿಕೊಪ್ಪ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಿ. ಹೆಚ್. ಜಗದೀಶ್ ಮತ್ತು ಸಿಬ್ಬಂದಿ ಜಗದೀಶ್, ಪ್ರವೀಣ್. ನಿಶಾಂತ್, ಸೌಮ್ಯ, ಪುನೀತ್, ಸಂತೋಷ್ ಹಾಗೂ ಶ್ರೀಕಾಂತ್ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿರುವ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.