ಕನ್ನಡಪ್ರಭ ವಾರ್ತೆ ತುರುವೇಕೆರೆ
ಸಹಕಾರ ಸಂಘದ ಸಾಮಾನ್ಯ ಸಭೆಯಲ್ಲಿ ನಡೆದಿದ್ದ ಗಲಾಟೆಗೆ ಸಂಬಂಧಿಸಿದಂತೆ ವಿನಾಕಾರಣ ತಮ್ಮನ್ನು ಪೊಲೀಸ್ ಅಧಿಕಾರಿಗಳು ಕೈಕೋಳ ತೊಡಿಸಿ ಅವಮಾನ ಮಾಡಿದ್ದ ಹಿನ್ನೆಲೆಯಲ್ಲಿ ಅವರುಗಳ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿ ತಲಾ 50 ಲಕ್ಷಕ್ಕೆ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತಿರುವುದಾಗಿ ಅವಮಾನಿತರಾದ ಮುನಿಯೂರಿನ ವೆಂಕಟೇಶ್ (ವಿಕೆ ಗೌಡ), ಶಿವಕುಮಾರ್, ಅಶ್ವತ್ಥ್ ಕುಮಾರ್, ವಸಂತಕುಮಾರ್, ಯೋಗಾನಂದ್ ತಿಳಿಸಿದ್ದಾರೆ.ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಮುನಿಯೂರು ಸಹಕಾರ ಸಂಘದ ಸಾಮಾನ್ಯ ಸಭೆಯು ಅಕ್ಟೋಬರ್ 23ರಲ್ಲಿ ನಡೆದಿತ್ತು. ಆ ವೇಳೆ ಸದಸ್ಯರು ಮತ್ತು ಸಂಘದ ಪದಾಧಿಕಾರಿಗಳು ಮತ್ತು ಸಂಘದ ಆಡಳಿತ ಸಿಬ್ಬಂದಿಯ ನಡುವೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿತ್ತು. ಮಿತಿ ಮೀರಿ ಕೈಕೈ ಮಿಲಾಯಿಸುವ ಹಂತವೂ ಆಗಿತ್ತು. ಆದರೆ ಪ್ರಕರಣ ಆದ ಮೂರು ದಿನಗಳ ಬಳಿಕ ಸಂಘದ ಸಿಇಒ ಆಗಿದ್ದ ಗಿಡ್ಡೇಗೌಡ ಎಂಬುವವರಿಂದ ದೂರು ಕೊಡಿಸಿ ನಮ್ಮನ್ನು ಜೈಲಿಗಟ್ಟುವ ಪ್ರಯತ್ನ ನಡೆಯಿತು. ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಎಸೈಐ ಶಿವಲಿಂಗಪ್ಪ ಈರ್ವರ ನಡುವೆ ರಾಜಿ ಮಾಡಿಸುವುದಾಗಿ ಹೇಳಿ ನಮ್ಮನ್ನು ಅನಧಿಕೃತವಾಗಿ ಬಂಧಿಸಿದರು. ಸಂಘದ ಸಿಇಒ ಸರ್ಕಾರಿ ನೌಕರನಲ್ಲದಿದ್ದರೂ ಸಹ ಆತ ಸರ್ಕಾರಿ ನೌಕರನೆಂದು ಬಣ್ಣಿಸಿ ನಮ್ಮನ್ನು ಸರ್ಕಾರಿ ನೌಕರನ ಮೇಲೆ ಹಲ್ಲೆ ಮತ್ತು ಸರ್ಕಾರಿ ಕೆಲಸಕ್ಕೆ ಅಡಚಣೆ ಮಾಡಿದರೆಂಬ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಯಲಕ್ಕೆ ಕರೆದುಕೊಂಡು ಹೋಗುವ ವೇಳೆ ಉದ್ದೇಶಪೂರ್ವಕವಾಗಿ ನಮಗೆಲ್ಲರಿಗೂ ಕೈಕೋಳ ತೊಡಿಸಿ ಅವಮಾನ ಮಾಡಿದ್ದರು. ನ್ಯಾಯಾಂಗ ಬಂಧನ ವಿಧಿಸಿದ ನಂತರವೂ ನಮಗೆ ಕೈಕೋಳ ತೊಡಿಸಿ ಅವಮಾನ ಮಾಡಿದ್ದರು. ನಮಗೆ ಅವಮಾನ ಮಾಡಿದ್ದ ಸಂಬಂಧ ತಾಲೂಕಿನ ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರದ ಮುಖ್ಯಸ್ಥರಾದ ಮಾವಿನಕೆರೆ ಸಿದ್ದಲಿಂಗೇಗೌಡರ ಮಾರ್ಗದರ್ಶನದಲ್ಲಿ ಮಾನವ ಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಸಿದ್ದೆವು. ನಮ್ಮ ದೂರನ್ನು ಪರಿಶೀಲಿಸಿದ ಮಾನವ ಹಕ್ಕುಗಳ ಆಯೋಗವು ಎಎಸೈಐ ಶಿವಲಿಂಗಯ್ಯ, ಸಿಪಿಐ ನವೀನ್ ಮತ್ತು ಪೊಲೀಸ್ ಪೇದೆ ಶಿವಕುಮಾರ್ ರವರು ಕೈಕೋಳ ಹಾಕಿದ್ದು ತಪ್ಪು ಎಂದು ತೀರ್ಪು ನೀಡಿ ಅವರಿಗೆ ಆಗಿರುವ ಅವಮಾನಕ್ಕೆ ಮುಖ್ಯ ಆರೋಪಿಯಾಗಿರುವ ಎಎಸ್ ಐ ಶಿವಲಿಂಗಯ್ಯ ನವರು ಅವಮಾನಿತರಾದ ಐದು ಮಂದಿಗೆ ತಲಾ 10 ಸಾವಿರದಂತೆ ಪರಿಹಾರ ನೀಡಬೇಕೆಂದು ಕಳೆದ ನವೆಂಬರ್ ನಲ್ಲೇ ಆದೇಶಿಸಿತ್ತು. ಆದರೆ ಮಾನವ ಹಕ್ಕುಗಳ ಆಯೋಗದ ಆದೇಶಕ್ಕೂ ಕವಡೆ ಕಿಮ್ಮತ್ತು ನೀಡದ ಪೊಲೀಸ್ ಅಧಿಕಾರಿಗಳು ಪರಿಹಾರದ ಮೊತ್ತವನ್ನೂ ಸಹ ನೀಡಿರಲಿಲ್ಲ. ಇದನ್ನು ಖಂಡಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿತ್ತು. ಪೊಲೀಸ್ ಮಹಾನಿರ್ದೇಶಕರ ಕಚೇರಿಯು ಕೂಡಲೇ ಸಂತ್ರಸ್ಥರಿಗೆ ಹಣ ಮಂಜೂರು ಮಾಡಬೇಕೆಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಲಾಗಿತ್ತು. ಕಳೆದ ಒಂದು ವಾರದ ಹಿಂದೆ ಅವಮಾನಕ್ಕೀಡಾಗಿದ್ದ ವೆಂಕಟೇಶ್ (ವಿಕೆ ಗೌಡ), ಶಿವಕುಮಾರ್, ಅಶ್ವತ್ಥ್ ಕುಮಾರ್, ವಸಂತಕುಮಾರ್, ಯೋಗಾನಂದ್ ರವರಿಗೆ ತಲಾ ಹತ್ತು ಸಾವಿರ ರು.ಗಳ ಪರಿಹಾರ ಧನವನ್ನು ಅವರ ಖಾತೆಗೆ ನೀಡಲಾಗಿದೆ. ಅಕ್ರಮವಾಗಿ ಕೈಕೋಳ ತೊಡಿಸಿ ಅವಮಾನ ಮಾಡಿದ್ದ ಹಿನ್ನೆಲೆಯಲ್ಲಿ ಮಾನವಹಕ್ಕುಗಳ ಆಯೋಗ ನಮಗೆ ಹೆಚ್ಚು ನ್ಯಾಯ ದೊರಕಿಸುಕೊಡುವುದೆಂದು ನಿರೀಕ್ಷಿಸಿದ್ದವು. ಆದರೆ ಕೇವಲ ಹಣದ ಪರಿಹಾರ ದೊರಕಿಸಿಕೊಟ್ಟಿತೇ ವಿನಃ ತಮ್ಮನ್ನು ಅವಮಾನ ಮಾಡಿರುವ ಅಧಿಕಾರಿಗಳಿಗೆ ಸೂಕ್ತ ಶಿಕ್ಷೆ ವಿಧಿಸಿಲ್ಲ. ಹಾಗಾಗಿ ನಮ್ಮನ್ನು ಅವಮಾನಿಸಿದವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಮಾನಹಾನಿ ಆಗಿರುವ ಸಂಬಂಧ ಪ್ರತಿಯೊಬ್ಬರಿಗೆ 50 ಲಕ್ಷ ರು ಪರಿಹಾರ ನೀಡಬೇಕೆಂದು ಒತ್ತಾಯಿಸಿ ವಕೀಲರ ಮೂಲಕ ನ್ಯಾಯಾಲಯದ ಮೊರೆ ಹೋಗುತ್ತಿರುವುದಾಗಿ ಅವಮಾನಿತರಾದ ವೆಂಕಟೇಶ್ (ವಿಕೆ ಗೌಡ), ಶಿವಕುಮಾರ್, ಅಶ್ವತ್ಥ್ ಕುಮಾರ್, ವಸಂತಕುಮಾರ್, ಯೋಗಾನಂದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುನಿಯೂರು ಗ್ರಾಮದ ಮುಖಂಡರಾದ ಸಾಗರ್, ಶಶಿಧರ್, ದಯಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.