ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಅಕ್ರಮ ವಲಸೆ ಕಾರ್ಮಿಕರಿಂದ ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟಾಗುವ ಅಪಾಯ ಹೆಚ್ಚಿದ್ದು ಕೂಡಲೇ ವಲಸೆ ಕಾರ್ಮಿಕರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ಎನ್. ರವಿಕುಮಾರ್ ಆಗ್ರಹಿಸಿದರು.ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲೂಕಿಗೆ ಇತ್ತೀಚಿನ ದಿನಗಳಲ್ಲಿ ಅಸ್ಸಾಂ ರಾಜ್ಯದ ಹೆಸರು ಹೇಳಿಕೊಂಡು ವಲಸೆ ಬರುತ್ತಿರುವ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ವಲಸೆ ಕಾರ್ಮಿಕರ ಕೆಲವರು ಹೈದರಾಬಾದ್ ಹೆಸರು ಹೇಳಿದರೆ ಆಧಾರ್ ಕಾರ್ಡಲ್ಲಿ ಬೇರೆ ಊರಿನ ಮಾಹಿತಿ ಇದೆ. ಇನ್ನು ಕೆಲವರು ಅಸ್ಸಾಂ ರಾಜ್ಯದವರೆಂದು ಹೇಳುತ್ತಾರೆ. ಆದರೆ ಅವರ ಬಳಿ ಯಾವುದೇ ಮಾಹಿತಿ ಇಲ್ಲ. ಅಸ್ಸಾಂ ರಾಜ್ಯದ ಹೆಸರು ಹೇಳಿಕೊಂಡು ಬರುತ್ತಿರುವವರು ಬಾಂಗ್ಲಾ ದೇಶದ ಅಕ್ರಮ ವಲಸಿಗರೆಂಬ ಶಂಕೆ ವ್ಯಕ್ತವಾಗಿದೆ. ಅಕ್ರಮ ವಲಸಿಗರ ಕುರಿತು ತನಿಖೆ ನಡೆಸುವಲ್ಲಿ ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.ಅಸ್ಸಾಂ ರಾಜ್ಯದ ವಲಸೆ ಕಾರ್ಮಿಕರು ಬಂದರೆ ಯಾವುದೇ ಅಡ್ಡಿಯಲ್ಲ. ಆದರೆ ವಲಸೆ ಕಾರ್ಮಿಕರ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದ ಕಾರ್ಮಿಕ ಇಲಾಖೆ ಇಲ್ಲಿ ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ವಲಸೆ ಕಾರ್ಮಿಕರನ್ನು ಕರೆತರುತ್ತಿರುವವರು ಯಾರು ಎಂಬುದು ಕೂಡ ಮಾಹಿತಿ ಇಲ್ಲ. ಎಲ್ಲಿಂದ ಬರುತ್ತಿದ್ದಾರೆ ಅವರನ್ನು ಯಾವ ವಾಹನದಲ್ಲಿ ಕರೆತರುತ್ತಿದ್ದಾರೆ ಎನ್ನುವ ಸುಳಿವು ಕೂಡ ಪೊಲೀಸ್ ಇಲಾಖೆಗೆ ಇಲ್ಲದಿರುವುದು ದುರಂತದ ಸಂಗತಿ. ಇದು ಮುಂದೊಂದು ದಿನ ಕೆಟ್ಟ ದಿನಗಳಿಗೆ ಎಡೆಮಾಡಿಕೊಡಲಿದೆ. ಇನ್ನಾದರೂ ಎಚ್ಚೆತ್ತುಕೊಳ್ಳುವುದು ಒಳಿತೆಂದರು.
ಮುಖಂಡರಾದ ಶಶಿಕುಮಾರ್, ನಾಗೇಂದ್ರ ಮಾತನಾಡಿ, ತಾಲೂಕು ಆಡಳಿತ ಸೂಕ್ತ ತನಿಖೆ ಕೈಗೊಂಡು ಅಕ್ರಮ ವಲಸೆ ಕಾರ್ಮಿಕರಿಗೆ ಕಡಿವಾಣ ಹಾಕದಿದ್ದರೆ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಪ್ರವೀಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.