ಪಪಂಗೆ ತಲೆನೋವಾದ ಅಕ್ರಮ ನಳ ಸಂಪರ್ಕ

| Published : Feb 12 2025, 12:32 AM IST

ಸಾರಾಂಶ

ಲೋಕಾಪುರ ಪಟ್ಟಣದ ಜನತೆಗೆ ಸಮರ್ಪಕ ನೀರು ಪೂರೈಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೆಣಗಾಟ ನಡೆಸಿರುವ ಮಧ್ಯೆಯೇ ಪಟ್ಟಣದ ಜನತೆ ಕೈಚಳಕ ತೋರಿ ಅನಧಿಕೃತ ನಳ ಅಳವಡಿಸಿಕೊಂಡಿರುವುದು ಅಧಿಕಾರಿಗಳು, ಸಿಬ್ಬಂದಿಗೆ ತಲೆನೋವು ತಂದಿದೆ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣದ ಜನತೆಗೆ ಸಮರ್ಪಕ ನೀರು ಪೂರೈಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೆಣಗಾಟ ನಡೆಸಿರುವ ಮಧ್ಯೆಯೇ ಪಟ್ಟಣದ ಜನತೆ ಕೈಚಳಕ ತೋರಿ ಅನಧಿಕೃತ ನಳ ಅಳವಡಿಸಿಕೊಂಡಿರುವುದು ಅಧಿಕಾರಿಗಳು, ಸಿಬ್ಬಂದಿಗೆ ತಲೆನೋವು ತಂದಿದೆ.

ಪಟ್ಟಣದ ೧೨ ವಾರ್ಡ್‌ಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಲು ಪಪಂ ಮುಂದಾಗುತ್ತಿದೆ. ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಪಪಂ ವ್ಯಾಪ್ತಿಯಲ್ಲಿ ೧೮೧೬ ನಳ ಅಳವಡಿಸಲಾಗಿದೆ. ಅನಧಿಕೃತವಾಗಿ ಲೆಕ್ಕವಿಲ್ಲದಷ್ಟು ನಳಗಳು ಅಳವಡಿಕೆ ಆಗಿವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಅನಧಿಕೃತ ನಳ ಹಾಗೂ ಅಧಿಕೃತ ನಳಗಳಿಗೆ ವಿದ್ಯುತ್‌ ಮೋಟಾರ್ ಬಳಕೆಯಿಂದ ಮಧ್ಯಮ ವರ್ಗದವರಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ವಿದ್ಯುತ್‌ ಮೋಟಾರ್‌ ಬಳಸುವವರ ವಿರುದ್ಧ ಸೂಕ್ತ ಕ್ರಮಕ್ಕೂ ಆಗ್ರಹಿಸಲಾಗುತ್ತಿದೆ.

ಪಟ್ಟಣದಲ್ಲಿ ಬಹುತೇಕ ಮನೆಗಳಲ್ಲಿ ಅನಧಿಕೃತ ನಳಗಳು ಪತ್ತೆಯಾಗಿದ್ದು, ಇವುಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಪಟ್ಟಣ ಪಂಚಾಯತಿ ಆದಾಯಕ್ಕೆ ಕತ್ತರಿ ಬೀಳುತ್ತಿದೆ.ಲಕ್ಷಾಂತರ ಲೀಟರ್‌ ನೀರು ಸೋರಿಕೆ:

ಅನೇಕರು ಅನಧಿಕೃತ ನಳ ಬಳಕೆ ಮಾಡುವುದರಿಂದ ನಿಯಮಿತವಾಗಿ ಕರ ಪಾವತಿಸುವ ನಮಗೆ ಕುಡಿಯುವ ನೀರು ಸರಿಯಾಗಿ ಬರುವುದಿಲ್ಲ. ನೀರು ಬಿಡುವ ಅವಧಿಗೂ ಕಾಯುತ್ತ ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಅನಧಿಕೃತ ನಳಗಳಿಂದ ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ. ಅನಧಿಕೃತ ಹಾಗೂ ವಿದ್ಯುತ್ ಮೊಟಾರ್ ಬಳಕೆ ಮಾಡುತ್ತಿರುವುದು ಗೊತ್ತಿದ್ದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜಾಣ ಮೌನವಹಿಸಿದ್ದಾರೆ.

ಪಟ್ಟಣದಲ್ಲಿ ಅನಧಿಕೃತ ನಳ ಜೋಡಣೆ ವಿಪರೀತವಾಗಿದೆ. ಇದರಿಂದಾಗಿ ಅಧಿಕೃತವಾಗಿ ಸಂಪರ್ಕ ಪಡೆದುಕೊಂಡ ಸಾರ್ವಜನಿಕರಿಗೆ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಅಭಾವ ಎದುರಿಸುವಂತಾಗಿದೆ.

ಬಾಗಲಕೋಟೆ ರಸ್ತೆಯಿಂದ ಲೋಕೇಶ್ವರ ದೇವಸ್ಥಾನದವರೆಗೂ, ಅನಧಿಕೃತ ವಾಣಿಜ್ಯ ಕಟ್ಟಡಗಳು ಸೇರಿ ಹಲವಡೆ ಅನಧಿಕೃತ ನಳಗಳು ಹಾಗೂ ವಾಣಿಜ್ಯ ಮಳಿಗೆಗಳಿಗೆ ನೀರು ಪೂರೈಸಲಾಗುತ್ತಿದೆ. ಇದರಿಂದಾಗಿ ನಿಯಮಿತವಾಗಿ ನೀರಿನ ಕರ ನೀಡುವ ನಿವಾಸಿಗಳಿಗೆ ನೀರಿನ ಕೊರತೆ ಎದುರಾಗುತ್ತಿದೆ. ಮೂರು ದಿನಗಳಿಗೊಮ್ಮೆ ನೀರು ಪೂರೈಸಿದರೂ ಜನರ ಮನೆಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಅನಧಿಕೃತ ನಳಗಳಿಂದಾಗಿ ಹಲವು ಮನೆಗಳವರು ನಲ್ಲಿ ನೀರಿಗಾಗಿ ಚಾಚಕಪಕ್ಷಿಯಂತೆ ಕಾಯಬೇಕಾದ ಪರಿಸ್ಥಿತಿ ಉದ್ಭವಿಸಿದೆ.ಹಲವು ವರ್ಷಗಳಿಂದ ಬೇಸಿಗೆ ಸಂದರ್ಭದಲ್ಲಿ ವಾರಕ್ಕೊಮ್ಮೆ ನೀರು ಸರಬರಾಜು ಮಾಡುವ ಸ್ಥಿತಿ ಎದುರಾಗುತ್ತಿದೆ. ಪ್ರಸಕ್ತ ತಿಂಗಳು ಲೋಕೇಶ್ವರ ಜಾತ್ರೆಯಿದ್ದು, ಹೆಚ್ಚಿನ ನೀರಿನ ಅಗತ್ಯವಿದೆ. ಪಪಂ ಮುಖ್ಯಾಧಿಕಾರಿಗಳು ಅಕ್ರಮ ನಳ ಸಂಪರ್ಕ ಗುರುತಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ದಂಡ ವಿಧಿಸಬೇಕು, ಸಂಪರ್ಕ ತಡೆಹಿಡಿದು ಸಕ್ರಮವಾಗಿ ನಳ ಸಂಪರ್ಕ ಪಡೆಯುವಂತೆ ಜನರ ಮನವೊಲಿಸಬೇಕಿದೆ.

-ಅರುಣ ನರಗುಂದ, ಸ್ಥಳೀಯರು ಲೋಕಾಪುರ ಪಟ್ಟಣದಲ್ಲಿ ಅನೇಕರು ಅಕ್ರಮವಾಗಿ ನಳ ಸಂಪರ್ಕ ಪಡೆದಿರುವ ಹಾಗೂ ನೀರಿನ ಕರ ಬಾಕಿ ಉಳಿಸಿಕೊಂಡಿರುವುದು ಪಟ್ಟಣ ಪಂಚಾಯಿತಿ ಗಮನಕ್ಕೆ ಬಂದಿದೆ. ಅಕ್ರಮ ನಳ ಸಂಪರ್ಕ ಪಡೆದ ಗ್ರಾಹಕರು ಪಪಂ ಕಚೇರಿಗೆ ಬಂದು ಅರ್ಜಿ ಸಲ್ಲಿಸಿ ವೆಚ್ಚ ಪಾವತಿಸಿ ಸಕ್ರಮಗೊಳಿಸಿಕೊಳ್ಳಬೇಕು.

- ಜ್ಯೋತಿ ಉಪ್ಪಾರ ಮುಖ್ಯಾಧಿಕಾರಿ ಪಪಂ ಲೋಕಾಪುರ