ಸಾರಾಂಶ
ಗೋಪಾಲಸ್ವಾಮಿ ಬೆಟ್ಟದಲ್ಲಿ ಅಕ್ರಮವಾಗಿ ಚಿತ್ರೀಕರಣ ನಡೆಸಿರುವ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಡೀಸಿಗೆ ರೈತಸಂಘ ದೂರು ಸಲ್ಲಿಸಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ನಾಡಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕೇರಳ ಸಿನಿಮಾ ತಂಡ ಅಕ್ರಮವಾಗಿ ಚಿತ್ರೀಕರಣ ನಡೆಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಚಿತ್ರೀಕರಣ ಸಂಬಂಧ ದ್ವಂದ್ವ ಹೇಳಿಕೆ ಹಾಗೂ ಲಂಚ ಪಡೆದು ಅನುಮತಿ ನೀಡಿದ್ದಾರೆ. ಈ ಬಗ್ಗೆ ಬಗ್ಗೆ ತನಿಖೆ ನಡೆಸಬೇಕು ಎಂದು ಜಿಲ್ಲಾ ರೈತಸಂಘ ಜಿಲ್ಲಾಧಿಕಾರಿ ಶಿಲ್ಪಾನಾಗ್‌ಗೆ ಮನವಿ ಸಲ್ಲಿಸಿದೆ.ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್, ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ನೇತೃತ್ವದಲ್ಲಿ ರೈತರ ನಿಯೋಗ ಜಿಲ್ಲಾಧಿಕಾರಿಗೆ ಭೇಟಿ ಮಾಡಿ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ. ಆ ಜಾಗದಲ್ಲಿ ಚಿತ್ರೀಕರಣ ಮಾಡಲು ಮುಜರಾಯಿ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಅರಣ್ಯ ಇಲಾಖೆ ಅನುಮತಿ ಕೊಟ್ಟಿದೆ. ಪತ್ರಿಕೆಗಳಲ್ಲಿ ಸುದ್ದಿ ಬಂದ ಬಳಿಕ ಸುಳ್ಳು ದಾಖಲೆ ಸೃಷ್ಠಿಸಿದ್ದಾರೆ ಎಂದು ದೂರಿನಲ್ಲಿ ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದಾರೆ.
ಕೇರಳ ಚಿತ್ರತಂಡದಲ್ಲಿ ಸ್ಪಾಟ್ ಲೈಟ್, ಜನರೇಟರ್, ಧ್ವನಿವರ್ಧಕ, ಆ್ಯಂಪ್ಲಿಪೇಯರ್, ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟೌವ್ ಸೂಕ್ಷ್ಮ ಪರಿಸರ ವಲಯಕ್ಕೆ ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದಾರೆ. ಈ ಕುರಿತ ಸುತ್ತೋಲೆ ನಮಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಬೆಟ್ಟಕ್ಕೆ ಖಾಸಗಿ ವಾಹನಗಳ ಅವಕಾಶವಿಲ್ಲ. ಆದರೆ ಕೇರಳದ ಖಾಸಗಿ ವಾಹನಗಳಿಗೆ ಅವಕಾಶ ನೀಡಿದ್ದಾರೆ. ನಮ್ಮ ವಾಹನಗಳಿಗೂ ಅವಕಾಶ ನೀಡ್ತಾರಾ? ಗೋಪಾಲಸ್ವಾಮಿ ಬೆಟ್ಟಕ್ಕೆ ಹೆಚ್ಚಿನ ದರ ಕೆಎಸ್‌ಆರ್‌ಟಿಸಿ ನಿಗದಿ ಪಡಿಸಿದೆ. ಮೇಲ್ಕಂಡ ದೂರಿಗೆ ಸ್ಪಂದಿಸಿ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. ತಪ್ಪಿತಸ್ಥರನ್ನು ಅಮಾನತು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.