ಬಸ್‌ ನಿಲ್ದಾಣದ ಸಮೀಪ ಅಕ್ರಮ ಮದ್ಯ ಮಾರಾಟ!

| Published : Jul 09 2025, 12:19 AM IST

ಸಾರಾಂಶ

ಪಟ್ಟಣದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ರಸ್ತೆ ಪಕ್ಕದ ಅನಧಿಕೃತ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ.

ಸಾರ್ವಜನಿಕ ಸ್ಥಳದಲ್ಲೇ ಮದ್ಯ ಸೇವನೆ ಸಾಮಾನ್ಯ । ಮಲ್ಲಿಗೆ ನಾಡಲ್ಲಿ ತ್ಯಾಜ್ಯದ ದುರ್ಗಂಧ

ಚಂದ್ರು ಕೊಂಚಿಗೇರಿ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಪಟ್ಟಣದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ರಸ್ತೆ ಪಕ್ಕದ ಅನಧಿಕೃತ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ಸಾರ್ವಜನಿಕ ಸ್ಥಳದಲ್ಲೇ ಮದ್ಯ ಸೇವನೆ ಸಾಮಾನ್ಯವಾಗಿದ್ದು, ಬಸ್ ನಿಲ್ದಾಣ ಅಕ್ರಮಗಳ ತಾಣವಾಗಿ ಮಾರ್ಪಟ್ಟಿದೆ.

ಹೌದು, ಹೂವಿನಹಡಗಲಿ ಸುಗಂಧ ಬೀರುವ ಮಲ್ಲಿಗೆ ನಾಡು ಎಂದು ಜನ ಭಾವಿಸುತ್ತಾರೆ, ಆದರೆ ಬಸ್‌ ನಿಲ್ದಾಣದ ಬಳಿ ಹೋದರೆ ಎಗ್‌ರೈಸ್‌ನ ಕಮುಟು ವಾಸನೆ, ಗೂಡಂಗಡಿಗಳ ತ್ಯಾಜ್ಯದ ದುರ್ಗಂಧ, ನಿಲ್ದಾಣದ ಸುತ್ತಮುತ್ತ ಬರಿ ಪ್ಲಾಸ್ಟಿಕ್‌ ಮತ್ತು ಮದ್ಯದ ಪೌಚ್‌ಗಳ ರಾಶಿ ರಾಶಿಯಾಗಿ ಬಿದ್ದಿವೆ. ರಸ್ತೆ ಬದಿಯಲ್ಲಿ ಕೆಲವರು ಅನಧಿಕೃತವಾಗಿ ಶಾಶ್ವತ ಶೆಡ್‌ಗಳನ್ನು ಹಾಕಿ ಅವುಗಳನ್ನು ಬಾಡಿಗೆ ನೀಡಿದ್ದಾರೆ. ರಸ್ತೆ ಬದಿಯಲ್ಲಿನ ಫುಟ್‌ಪಾತ್‌ ರಸ್ತೆಯನ್ನು ಅನಧಿಕೃತ ಗೂಡಂಗಡಿಗಳು ಆವರಿಸಿಕೊಂಡಿವೆ. ಇವುಗಳಿಗೆ ಪುರಸಭೆ ಅನುಮತಿ ನೀಡಿಲ್ಲ, ಆದರೆ ಜೆಸ್ಕಾಂ ಸಿಬ್ಬಂದಿ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದಾರೆ. ಈ ಅನಧಿಕೃತ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಸಿಗುವುದು ಅಷ್ಟೇ ಅಲ್ಲದೇ, ಪ್ಲಾಸ್ಟಿಕ್‌ ವಸ್ತುಗಳು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ.

ಡಿಸಿ ಆದೇಶಕ್ಕೂ ಕಿಮ್ಮತ್ತಿಲ್ಲ:

ಹೂವಿನಹಡಗಲಿ, ಹೊಳಗುಂದಿ ಮತ್ತು ಮೈಲಾರ ಬಸ್‌ ನಿಲ್ದಾಣದ ಬಳಿ ಅನಧಿಕೃತ ಗೂಡಂಗಡಿಗಳನ್ನು ಇಟ್ಟಿದ್ದಾರೆ. ಇದರಿಂದ ಬಸ್‌ ನಿಲ್ದಾಣದ ಸೌಂದರ್ಯವನ್ನೇ ಹಾಳು ಮಾಡಿದೆ. ಈ ಅನಧಿಕೃತ ಶೆಡ್‌ಗಳನ್ನು ಕೂಡಲೇ ತೆರವು ಮಾಡಬೇಕೆಂದು ಇಲ್ಲಿನ ಸಾರಿಗೆ ವ್ಯವಸ್ಥಾಪಕರು ಈ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್‌, ತಹಸೀಲ್ದಾರ್‌, ಪುರಸಭೆ ಹಾಗೂ ತಾಲೂಕು ಪಂಚಾಯಿತಿಗಳಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಪುರಸಭೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.

ಬಸ್‌ ನಿಲ್ದಾಣದ ಪಕ್ಕದಲ್ಲಿ ಸಾರಿಗೆ ವ್ಯವಸ್ಥಾಪಕರ ವಸತಿ ಗೃಹವಿದೆ. ಕಾಂಪೌಂಡ್‌ಗೆ ಹೊಂದಿಕೊಂಡು ಅನಧಿಕೃತ ಶೆಡ್‌ಗಳನ್ನು ಇಟ್ಟಿದ್ದಾರೆ. ಇಲ್ಲಿನ ಎಗ್‌ರೈಸ್‌ ಸೆಂಟರ್‌ ಮತ್ತು ಬೀಡಿ ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಜತೆಗೆ ಇದೇ ಅಂಗಡಿಗಳಲ್ಲೇ ಮದ್ಯ ಸೇವನೆ ಮಾಡುತ್ತಿದ್ದಾರೆ. ಅಲ್ಲಿನ ಪ್ಲಾಸ್ಟಿಕ್‌ ತ್ಯಾಜ್ಯ ಬಸ್‌ ನಿಲ್ದಾಣದ ತುಂಬೆಲ್ಲಾ ಹರಿದಾಡುತ್ತಿವೆ.

ಪಟ್ಟಣದ ಬಸ್‌ ನಿಲ್ದಾಣದ ಬಳಿ ಇರುವ ಅನಧಿಕೃತ ಶೆಡ್‌ಗಳಲ್ಲಿ ಅಕ್ರಮ ಮದ್ಯ ಮಾರಾಟ ಕುರಿತು ಪರೀಶಿಲನೆ ಮಾಡಿ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಪಿಎಸ್‌ಐ ವಿಜಯ ಕೃಷ್ಣ ತಿಳಿಸಿದ್ದಾರೆ.

ಬಸ್‌ ನಿಲ್ದಾಣದ ಅಕ್ಕಪಕ್ಕದ ಅನಧಿಕೃತ ಶೆಡ್‌ಗಳನ್ನು ತೆರವು ಮಾಡಬೇಕೆಂದು ಈಗಾಗಲೇ ಜಿಲ್ಲಾಧಿಕಾರಿ, ಜಿಪಂ ಸಿಇಒ, ತಹಸೀಲ್ದಾರ್‌, ತಾಪಂ ಇಒ ಮತ್ತು ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆಯಲಾಗಿದ್ದು, ಈವರೆಗೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರಿಗೆ ಘಟಕ ವ್ಯವಸ್ಥಾಪಕ ವೆಂಟಕಚಲಪತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನಧಿಕೃತ ಶೆಡ್‌ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುವ ಕುರಿತು ಪರಿಶೀಲನೆ ಮಾಡಿ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಅಬಕಾರಿ ನಿರೀಕ್ಷಕ ಸಿದ್ದೇಶ ನಾಯ್ಕ ಹೇಳಿದ್ದಾರೆ.