ಸಾರಾಂಶ
ಚಾಮರಾಜನಗರದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಬಸವಣ್ಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ವಿಜಯಕುಮಾರ್, ಗೌಡಿಕೆ ಮಾದಪ್ಪ ಕಲ್ಪುರ ಮಾದಪ್ಪ, ಮುತ್ತಿಗೆ ಶಿವಲಿಂಗೇಗೌಡ, ಸ್ವಾಮಿ, ಮಹೇಶ್ ಇದ್ದಾರೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಹೆಗ್ಗೋಠಾರದ ಗುಡ್ಡದಲ್ಲಿ ಇರುವ 4 ಗ್ರಾಮಗಳಿಗೆ ಸೇರಿದ ಗೋಮಾಳದಲ್ಲಿ ಗಣಿಗಾರಿಕೆಗೆ ಲೈಸನ್ಸ್ ಕೊಟ್ಟಿರುವುದೇ ಅಕ್ರಮ. ಅಂತಹದರಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಸುನೀಲ್ ಬೋಸ್ ಹೆಗ್ಗೋಠಾರ ಸೇರಿದಂತೆ ವಿವಿಧೆಡೆ ಲೈಸೆನ್ಸ್ ಗಣಿ ಮಾಲೀಕರಿಗೆ ಗ್ರಾಮಸ್ಥರು ತಡೆಯೊಡ್ಡುತ್ತಿರುವುದು ಸರಿಯಲ್ಲ ಅವರಿಗೆ ರಕ್ಷಣೆ ಕೊಟ್ಟು ಮೂಲಸೌಕರ್ಯ ಒದಗಿಸಿ ಕೊಡಿ ಎಂದು ಸೂಚನೆ ನೀಡಿರುವುದು ಖಂಡನೀಯ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಬಸವಣ್ಣ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಗ್ಗೋಠಾರ, ಕಾಳನಹುಂಡಿ, ಕಲ್ಪುರ, ಮುತ್ತಿಗೆ ನಾಲ್ಕು ಗ್ರಾಮಗಳಲ್ಲಿ ಇರುವ ಜಾನುವಾರುಗಳ ಅಂದಾಜಿನಂತೆ ೯೩೬ ಎಕರೆ ಗೋಮಾಳ ಇರಬೇಕು. ಈಗ ಈ ಗುಡ್ಡದಲ್ಲಿ ೬೧೮ ಎಕರೆ ಗೋಮಾಳವಿದ್ದು, ಇಲ್ಲಿ ಅಕ್ರಮವಾಗಿ ೧೦ ಮಂದಿಗೆ ಗಣಿಗಾರಿಕೆಗೆ ಅವಕಾಶ ನೀಡಿರುವುದು ಕಾನೂನು ಬಾಹಿರ. ಈ ಕಾನೂನು ಜ್ಞಾನವು ಇಲ್ಲದೇ ಸಂಸದರು ಗಣಿ ಮಾಲೀಕರ ಪರ ನಿಂತಿರುವುದು ಮತದಾರರಿಗೆ ಮಾಡಿದ ದ್ರೋಹ ಎಂದರು.ಶಿಷ್ಟಾಚಾರ ಕಲಿಯಲಿ:
ಸಂಸದ ಸುನೀಲ್ ಬೋಸ್ ಯಾವ ರೀತಿ ಸಭೆ ನಡೆಸಬೇಕು ಎಂಬ ಶಿಷ್ಟಾಚಾರ ಕಲಿಯಬೇಕು. ದಿನವೀಡಿ ಸಭೆ ನಡೆಸಿದರೂ ಜಿಲ್ಲೆಯ ಸಮಸ್ಯೆ ಚರ್ಚಿಸಲು ಸಮಯ ಸಾಲದು ಅಂತಹರಲ್ಲಿ, ಮಧ್ಯಾಹ್ನದ ನಂತರ ಬಂದು ಯಾವ ಸಭೆ ನಡೆಸುತ್ತಾರೆ. ಇವರು ಸಭೆ ನಡೆಸುವುದು ಅಕ್ರಮ ಚಟುವಟಿಕೆಗಳಿಗೆ ಅನುಮತಿ ಕೊಡಿಸಲಿಕ್ಕಾ ಅಥವಾ ಜಿಲ್ಲೆಯ ಸಮಸ್ಯೆ ಬಗೆಹರಿಸಲಿಕ್ಕಾ ಎಂಬುದನ್ನು ಸ್ವಷ್ಟಪಡಿಸಲಿ. ಶಿಷ್ಟಾಚಾರದ ಪ್ರಕಾರ ಬೆಳಗಿನಿಂದ ಸಂಜೆ ತನಕ ಎಲ್ಲಾ ಇಲಾಖೆ ಬಗ್ಗೆ ಚರ್ಚೆ ನಡೆಸುವ ಮೂಲಕ ಶಿಷ್ಟಾಚಾರದ ಪ್ರಕಾರ ಸಭೆ ನಡೆಸಲು ಮುಂದಾಗಲಿ ಎಂದು ತಿಳಿಸಿದರು.ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ಗೋಮಾಳದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಿರುವುದು ತಪ್ಪು. ಸಂಸದರು ಹೆಗ್ಗೋಠಾರ, ಮುತ್ತಿಗೆ ಸೇರಿದಂತೆ ಇತರೆ ಕಡೆಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆಗೆ ಅಡ್ಡಿಪಡಿಸುತ್ತಿರುವ ಗ್ರಾಮಸ್ಥರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿರುವುದು ಖಂಡನೀಯ ಎಂದರು.
ಗೋಮಾಳದಲ್ಲಿ ಗಣಿಗಾರಿಕೆಗೆ ಅವಕಾಶ ಕೊಟ್ಟರೆ ಜಾನುವಾರುಗಳನ್ನು ಜಿಲ್ಲಾಡಳಿತ ಭವನಕ್ಕೆ ತಂದು ಬಿಡಲಾಗುವುದು. ಹೆಗ್ಗೋಠಾರ ವ್ಯಾಪ್ತಿಯಲ್ಲಿ ೧೨ ಗಣಿಗಾರಿಕೆ ನಡೆಯುತ್ತಿದ್ದು ಈಗಾಗಲೇ ೮ ಗಣಿಗಾರಿಕೆಗಳನ್ನು ನಿಲ್ಲಿಸಲಾಗಿದೆ. ಕಲ್ಲು ತುಂಬಿದ ಟಿಪ್ಪರ್ ಲಾರಿಗಳು ಊರಿಗೆ ಒಳಗೆ ಓಡಾಡುತ್ತಿದ್ದು ಧೂಳಿನಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ. ಯಾವುದೇ ಕಾರಣಕ್ಕೂ ಗೋಮಾಳದಲ್ಲಿ ಗಣಿಗಾರಿಕೆ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.ಹೈಕೋರ್ಟ್ ಆದೇಶದ ಪ್ರಕಾರ ಇಲ್ಲಿ ಗಣಿಗಾರಿಕೆ ಮಾಡುವಂತಿಲ್ಲ, ಜಿಲ್ಲಾ ನ್ಯಾಯಾದೀಶರು ಸಹ ಇಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ, ಸಂಸದರು ಕಾನೂನು ಅರಿವು ಪಡೆದುಕೊಳ್ಳಬೇಕು. ಸಂಸದರು ಗಣಿಗಾರಿಕೆ ಪರ ಮಾತನಾಡುವುದನ್ನು ಬಿಟ್ಟು ರೈತರ ಪರ ಮಾತನಾಡಬೇಕು. ಸರ್ಕಾರದಿಂದ ಅನುದಾನ ಹಾಕಿಸಿ ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಸಂಸದರು ಮುಂದಾಗಬೇಕು ಯಾವುದೇ ಕಾರಣಕ್ಕೂ ನಾವು ಇಲ್ಲಿ ಗಣಿಗಾರಿಕೆ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದರು.ಗೌಡಿಕೆ ಮಾದಪ್ಪ ಮಾತನಾಡಿ, ತಲೆ ತಲಾಂತರದಿಂದಲು ನಾಲ್ಕು ಗ್ರಾಮಗಳ ಜನರು ತಮ್ಮ ಜಾನುವಾರುಗಳಿಗೆ ಈ ಗೋಮಾಳವನ್ನು ಉಪಯೋಗಿಸುತ್ತಿದ್ದಾರೆ, ಈ ಗೋಮಾಳವನ್ನು ನಾಶ ಮಾಡಿದರೆ ಎಲ್ಲಿಗೆ ಹೋಗುವುದು, ಗ್ರಾಮದಲ್ಲಿ ೨ ಗಣಿಗಾರಿಕೆ ಪಟ್ಟಾ ಲ್ಯಾಂಡಿನಲ್ಲಿ ಕಾನೂನು ರೀತ್ಯಾ ನಡೆಯುತ್ತಿದೆ ಇದನ್ನು ನಾವು ಕೇಳಲು ಸಾಧ್ಯವೇ ಎಂದರು. ಪತ್ರಿಕಾಗೋಷ್ಟಿಯಲ್ಲಿ ಕಲ್ಪುರ ಮಾದಪ್ಪ, ಮುತ್ತಿಗೆ ಶಿವಲಿಂಗೇಗೌಡ, ಸ್ವಾಮಿ, ಮಹೇಶ್ ಇದ್ದರು.