ನೇಕಾರ ನಗರದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಲಾಗುತ್ತಿದೆ. ಈ ಬಗ್ಗೆ ನಾಲ್ಕು ತಿಂಗಳ ಹಿಂದಿನಿಂದಲೇ ನೇಕಾರ ನಗರದ ಹಿತ ರಕ್ಷಣಾ ವೇದಿಕೆಯಿಂದ ಹೋರಾಟ ಮಾಡುತ್ತಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ:

ಅಕ್ರಮವಾಗಿ ಮಸೀದಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ, ಹಿಂದೂಪರ ಸಂಘಟನೆಗಳು ಇಲ್ಲಿನ ನೇಕಾರ ನಗರದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದವು. ವಾರದೊಳಗೆ ಅಕ್ರಮ ಮಸೀದಿ ನಿರ್ಮಾಣಕ್ಕೆ ತಡೆ ನೀಡಿ, ಆಗಿರುವ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಮಹಾನಗರ ಪಾಲಿಕೆಗೆ ಗಡುವು ನೀಡಲಾಗಿದೆ.

ಇಲ್ಲಿನ ನೇಕಾರ ನಗರದ ಶಿವನಾಗ ಬಡಾವಣೆಯಲ್ಲಿ ಮನೆ ನಿರ್ಮಾಣ ಮಾಡುವುದಾಗಿ ಪಾಲಿಕೆಯಿಂದ ಅನುಮತಿ ಪಡೆದು ಅಕ್ರಮವಾಗಿ ಮಸೀದಿ ನಿರ್ಮಿಸಲಾಗುತ್ತಿದೆ ಎಂಬುದು ಪ್ರತಿಭಟನಾಕಾರರ ಆರೋಪ. ತೆರವುಗೊಳಿಸಲು ಆಗ್ರಹಿಸಿ ನೇಕಾರ ನಗರ ಹಿತರಕ್ಷಣಾ ವೇದಿಕೆ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ನೇಕಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾ ಸಮಾವೇಶ ನಡೆಸಿದರು.

ರಾಜ್ಯ ಸರ್ಕಾರ, ಮಹಾನಗರ ಪಾಲಿಕೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಹಿಂದೂ ಕಾರ್ಯಕರ್ತರು, ಮಹಿಳೆಯರು ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಜೈ ಶ್ರೀರಾಮ, ಛತ್ರಪತಿ ಶಿವಾಜಿ ಮಹಾರಾಜಕೀ, ಬೊಲೋ ಭಾರತ್ ಮಾತಾಕೀ ಎಂಬ ಘೋಷಣೆ ಮುಗಿಲು ಮುಟ್ಟಿದ್ದವು. ಮುಂಜಾಗ್ರತಾ ಕ್ರಮವಾಗಿ ಮಸೀದಿ ಹತ್ತಿರ ಹೋಗದಂತೆ ನಾಲ್ಕು ದಿಕ್ಕುಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಸುತ್ತಲು ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಮಾತನಾಡಿ, ನೇಕಾರ ನಗರದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಲಾಗುತ್ತಿದೆ. ಈ ಬಗ್ಗೆ ನಾಲ್ಕು ತಿಂಗಳ ಹಿಂದಿನಿಂದಲೇ ನೇಕಾರ ನಗರದ ಹಿತ ರಕ್ಷಣಾ ವೇದಿಕೆಯಿಂದ ಹೋರಾಟ ಮಾಡುತ್ತಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿಲ್ಲ. ಹೋರಾಟ ಮಾಡುವುದಾಗಿ ಗಡುವು ನೀಡಿದ ಬಳಿಕ ಮೇಯರ್, ಉಪಮೇಯರ್, ತಹಸೀಲ್ದಾರ್‌ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಲು ಮುಂದಾಗಿದ್ದಾರೆ. ವಾರದಲ್ಲಿ ಸಂಪೂರ್ಣವಾಗಿ ಮಸೀದಿ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರ ಹಾಗೂ ಪಾಲಿಕೆಯೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಡಾವಣೆಯಲ್ಲಿ ಶೇ.98ರಷ್ಟು ಹಿಂದೂಗಳಿದ್ದಾರೆ. ನೂರು ಮೀಟರ್ ಅಂತರದಲ್ಲಿ ನಾಲ್ಕು ಮಸೀದಿಗಳಿವೆ. ಇನ್ನೊಂದು ಮಸೀದಿ ನಿರ್ಮಿಸುತ್ತಿದ್ದಾರೆ. ಹಿಂದೂಗಳಿಗೆ ತೊಂದರೆ ಕೊಡಬೇಕು ಎನ್ನುವುದು ಇವರ ಉದ್ದೇಶವಾಗಿದೆ. ಅಧಿಕಾರಿಗಳು ಹನುಮಾನ ಚಾಲಿಸ್ ಅಭಿಯಾನ ಮಾಡಿದರೆ ಅಪರಾಧವೆಂದು ನೋಟಿಸ್ ಕೊಡುತ್ತಾರೆ. ಆದರೆ, ಅಕ್ರಮವಾಗಿ ಮಸೀದಿ ನಿರ್ಮಿಸಿದರೂ ಯಾಕೆ ಸುಮ್ಮನಿದ್ದಾರೆ? ಎಂದು ಪ್ರಶ್ನಿಸಿದರು.

ಹಿಂದೂಪರ ಸಂಘಟನೆಯ ಮುಖಂಡರಾದ ಶಿವಯ್ಯ ಹಿರೇಮಠ, ಶ್ರೀಧರ ಕಲಬುರಗಿ, ಮಂಜು ತೇರದಾಳ, ಮಂಜು ಕಾಟಕರ, ಅಣ್ಣಪ್ಪ ದಿವಟಗಿ, ಮಾಲತೇಶ ಉಮ್ಮನವರ್, ಬಸು ದುರ್ಗದ, ಯಶೋಧ ತಾಂಬೆ, ಪೂರ್ಣಿಮಾ ಸೇರಿದಂತೆ ಹಲವರಿದ್ದರು.

ಕೋಗಿಲು ಬಡಾವಣೆಯಲ್ಲಿ ಬಾಂಗ್ಲಾ ದೇಶಿ ಮುಸ್ಲಿಮರು ವಾಸ ಮಾಡುತ್ತಿದ್ದಾರೆ. ಸರ್ಕಾರ ಅವರಿಗೆ ಸ್ಪಂದಿಸುತ್ತಿದೆ. ಎರಡನೇ ಟಿಪ್ಪು ಸುಲ್ತಾನ ಜಮೀರ್ ಅಹ್ಮದ್ ಅವರಿಗೆ ವಸತಿ ನಿರ್ಮಿಸುವುದಾಗಿ ಭರವಸೆ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಏನು ಮಾಡಲು ಹೊರಟಿದೆ.

ಪ್ರಮೋದ ಮುತಾಲಿಕ್, ಅಧ್ಯಕ್ಷ ಶ್ರೀರಾಮಸೇನೆ