ಸಾರಾಂಶ
ಹೇಮ್ಮಡಗ ರಸ್ತೆ ಅಗಲೀಕರಣ ಮತ್ತು ವಿಭಜಿಕರಣ ಕಾಮಗಾರಿಯು ಆಮೆ ಗತಿಯಲ್ಲಿ ಸಾಗಿದ್ದು, ವಾಹನ ದಟ್ಟಣೆಗೆ ಕಾರಣವಾಗಿದೆ. ವಾಹನ ದಟ್ಟಣೆಯಿಂದ ಪಟ್ಟಣದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ತುರ್ವಿಹಾಳ: ಪಟ್ಟಣದಲ್ಲಿನ ಬಸ್ ನಿಲ್ದಾಣದ ಸುತ್ತಲಿನ ಸ್ಥಳದಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆಯಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಯಾಗುತ್ತಿದ್ದು, ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ವಿವಿಧ ಸಂಘಟನೆಗಳ ಮುಖಂಡರು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಇಲ್ಲಿನ ಹೇಮ್ಮಡಗ ರಸ್ತೆ ಅಗಲೀಕರಣ ಮತ್ತು ವಿಭಜಿಕರಣ ಕಾಮಗಾರಿಯು ಆಮೆ ಗತಿಯಲ್ಲಿ ಸಾಗಿದ್ದು, ವಾಹನ ದಟ್ಟಣೆಗೆ ಕಾರಣವಾಗಿದೆ. ವಾಹನ ದಟ್ಟಣೆಯಿಂದ ಪಟ್ಟಣದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ನಿತ್ಯ ಸಂಚರಿಸುವ ಶಾಲಾ ವಾಹನಗಳು ಸರಿಯಾದ ಸಮಯಕ್ಕೆ ತಲುಪಲು ಹರಸಾಹಸ ಪಡಬೇಕಿದೆ. ಬಸ್ ನಿಲ್ದಾಣದ ಮುಂಭಾಗದಲ್ಲಿ ಬಸ್ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದೇ ರಸ್ತೆ ಮಧ್ಯಭಾಗದಲ್ಲಿ ನಿಲ್ಲಿಸುತ್ತಿರುವುದರಿಂದ ಹಿಂಭಾಗದ ವಾಹನಗಳಿಗೆ ಬಹಳ ತೊಂದರೆ ಉಂಟಾಗುತ್ತಿದೆ ಎಂದು ದೂರಿದ್ದಾರೆ.ರಸ್ತೆಯಲ್ಲಿ ಪಾದಚಾರಿಗಳ ಸಂಚಾರವೂ ಕಷ್ಟಕರವಾಗಿದ್ದು, ಸಂಚಾರ ವ್ಯವಸ್ಥೆ ಕೇಳುವವರಿಲ್ಲದಂತಾಗಿದೆ. ವೃದ್ಧರು, ಮಹಿಳೆಯರು ಮಕ್ಕಳು ರಸ್ತೆಗಳಲ್ಲಿ ನಡೆದಾಡಲು ಕಿರಿಕಿರಿಯಾಗುತ್ತಿದ್ದು, ಈಗಲಾದರು ಅಧಿಕಾರಿಗಳು ನಿಗಾ ವಹಿಸಿ ಬಸ್ ನಿಲುಗಡೆ ಸ್ಥಳಾವಕಾಶ ಮಾಡಿಕೊಡಬೇಕು ಹಾಗೂ ಹೇಮ್ಮಡಗ ಕಾಮಗಾರಿ ಶೀಘ್ರ ಗತಿಯಲ್ಲಿ ಮುಗಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.