ಅಕ್ರಮ ಆಸ್ತಿ ಸಂಪಾದನೆ ಪ್ರಕರಣ : ಸಚಿವ ಜಮೀರ್‌ ಅಹ್ಮದ್‌ಗೆ ಲೋಕಾಯುಕ್ತ ಸಮನ್ಸ್‌!

| Published : Nov 16 2024, 12:38 AM IST / Updated: Nov 16 2024, 07:58 AM IST

Zameer Ahmed Khan
ಅಕ್ರಮ ಆಸ್ತಿ ಸಂಪಾದನೆ ಪ್ರಕರಣ : ಸಚಿವ ಜಮೀರ್‌ ಅಹ್ಮದ್‌ಗೆ ಲೋಕಾಯುಕ್ತ ಸಮನ್ಸ್‌!
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ರಾಜ್ಯ ವಸತಿ ಸಚಿವ ಜಮೀರ್ ಅಹಮದ್‌ ಖಾನ್‌ ಅವರಿಗೆ ಡಿ.3ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.

 ಬೆಂಗಳೂರು : ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ರಾಜ್ಯ ವಸತಿ ಸಚಿವ ಜಮೀರ್ ಅಹಮದ್‌ ಖಾನ್‌ ಅವರಿಗೆ ಡಿ.3ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.

ನಗರದಲ್ಲಿರುವ ತಮ್ಮ ಮನೆಗೆ ಬಂದು ಲೋಕಾಯುಕ್ತ ಇನ್ಸ್‌ಪೆಕ್ಟರ್‌ ನೀಡಿದ್ದ ನೋಟಿಸ್ ಅನ್ನು ಸಚಿವ ಜಮೀರ್ ಸ್ವೀಕರಿಸಿದ್ದು, ಸೂಕ್ತ ದಾಖಲೆಗಳೊಂದಿಗೆ ಖುದ್ದು ಹಾಜರಾಗುವಂತೆ ಸಚಿವರಿಗೆ ಪೊಲೀಸರು ಸೂಚಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಜಮೀರ್‌ ವಿರುದ್ಧ ಎಸಿಬಿಯಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ.) ವರದಿ ಆಧರಿಸಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಾಖಲಾಗಿತ್ತು. ತರುವಾಯ ಎಸಿಬಿ ರದ್ದುಗೊಂಡ ನಂತರ ಆ ಪ್ರಕರಣದ ಮುಂದುವರೆದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಕೈಗೆತ್ತಿಕೊಂಡಿದ್ದರು. ಪ್ರಾಥಮಿಕ ಹಂತದ ತನಿಖೆ ಮುಗಿಸಿದ ಪೊಲೀಸರು, ಈಗ ಅಕ್ರಮ ಆಸ್ತಿ ಸಂಪಾದನೆ ಸಂಬಂಧ ವಿಚಾರಣೆಗೆ ಹಾಜರಾಗಲು ಸಚಿವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಯಾವುದೇ ಸಬೂಬು ಹೇಳದೆ ಖುದ್ದು ತಾವೇ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಜಮೀರ್ ಅವರಿಗೆ ಲೋಕಾಯುಕ್ತ ಪೊಲೀಸರು ಹೇಳಿರುವುದಾಗಿ ತಿಳಿದು ಬಂದಿದೆ. ಇದರೊಂದಿಗೆ ಅಕ್ರಮ ಆಸ್ತಿ ಸಂಪಾದನೆ ವಿಚಾರದಲ್ಲಿ ಜಮೀರ್ ಅವರಿಗೆ ಮತ್ತೆ ಪೊಲೀಸರ ತನಿಖೆ ಬಿಸಿ ಎದುರಾಗಿದ್ದು, ತಮ್ಮ ಹಣಕಾಸು ವ್ಯವಹಾರದ ಕುರಿತು ಲೆಕ್ಕವನ್ನು ಲೋಕಾಯುಕ್ತಕ್ಕೆ ಸಚಿವರು ಸಲ್ಲಿಸಬೇಕಿದೆ.

ತಮ್ಮ ಮೇಲಿನ ಆದಾಯಕ್ಕೂ ಅಧಿಕ ಆಸ್ತಿ ಗಳಿಸಿದ ಆರೋಪದ ವಿಚಾರಣೆಗೆ ಪೂರಕ ದಾಖಲೆ ಸಮೇತ ಬರಲು ಸಚಿವರಿಗೆ ಕಾಲಾವಕಾಶ ನೀಡಲಾಗಿದೆ. ಮೂರು ವಾರ ಸಮಯದಲ್ಲಿ ಅವರು ಪುರಾವೆ ಸಂಗ್ರಹಿಸಿ ಬರಲಿ. ವಿಚಾರಣೆ ವೇಳೆ ಅವರು ನೀಡುವ ಹೇಳಿಕೆ ಹಾಗೂ ಸಲ್ಲಿಸುವ ದಾಖಲೆಗಳನ್ನು ಪರಾಮರ್ಶಿಸಿ ಮುಂದಿನ ತನಿಖೆ ನಡೆಸಲಾಗುತ್ತದೆ. ತಪ್ಪು ಮಾಹಿತಿ ನೀಡಿದ್ದರೆ ಲೆಕ್ಕಪರಿಶೋಧನೆ ವೇಳೆ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ಮೂಲಗಳು ಹೇಳಿವೆ.

ಈ ಹಿಂದೆ ಇದೇ ಪ್ರಕರಣ ವಿಚಾರವಾಗಿ ಜಮೀರ್ ಅವರನ್ನು ಕೂಡ ಎಸಿಬಿ ಅಧಿಕಾರಿಗಳು ಸುದೀರ್ಘವಾಗಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದರು. ಅಲ್ಲದೆ ಸಚಿವರಿಗೆ ಸೇರಿದ ಮನೆ ಹಾಗೂ ಕಚೇರಿ ಸೇರಿದಂತೆ ಇನ್ನಿತರ ಸ್ಥಳಗಳ ಮೇಲೆ ಎಸಿಬಿ ದಾಳಿ ಸಹ ನಡೆಸಿ ದಾಖಲೆಗಳನ್ನು ಸಂಗ್ರಹಿಸಿತ್ತು. ಈಗ ಲೋಕಾಯುಕ್ತ ಪೊಲೀಸರ ತನಿಖೆಯನ್ನು ಜಮೀರ್ ಎದುರಿಸಬೇಕಿದೆ.