ನೇಮಕಾತಿ ಅಕ್ರಮ: ಅಧ್ಯಯನ ಸಮಿತಿ ರಚನೆಗೆ ತಾರಾದೇವಿ ಆಗ್ರಹ

| Published : Nov 14 2023, 01:16 AM IST

ನೇಮಕಾತಿ ಅಕ್ರಮ: ಅಧ್ಯಯನ ಸಮಿತಿ ರಚನೆಗೆ ತಾರಾದೇವಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ನೇಮಕಾತಿ ಅಕ್ರಮ: ಅಧ್ಯಯನ ಸಮಿತಿ ರಚನೆಗೆ ತಾರಾದೇವಿ ಆಗ್ರಹ

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವ್ಯವಸ್ಥೆ ಆಗಬೇ । ಪರೀಕ್ಷೆಗಳಲ್ಲಿ ಪಾರದರ್ಶಕತೆ ಕಾಪಾಡಬೇಕು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಪದೇ ಪದೇ ಅಕ್ರಮಗಳು ನಡೆಯುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ, ಈ ಬಗ್ಗೆ ಅಧ್ಯಯನ ಸಮಿತಿಯೊಂದನ್ನು ರಚಿಸಿ ಲೋಪ ದೋಷಗಳು ನಡೆದಾಗ ಕಠಿಣ ಕ್ರಮ ಕೈಗೊಳ್ಳುವ ವ್ಯವಸ್ಥೆಯಾಗಬೇಕೆಂದು ಕೇಂದ್ರದ ಮಾಜಿ ಸಚಿವೆ ಡಿ.ಕೆ ತಾರಾದೇವಿ ಒತ್ತಾಯಿಸಿದ್ದಾರೆ.

ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಅಕ್ರಮಗಳು ಆಗಿಂದಾಗ್ಗೆ ನಡೆಯುತ್ತಲೇ ಇದ್ದು ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದವರು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಾ ಚರ್ಚೆ ನಡೆಸುತ್ತಿದ್ದಾರೆ ಹೊರತು ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಹೇಳಿದರು.

ಈ ರೀತಿ ಪರೀಕ್ಷಾ ಅಕ್ರಮಗಳು ನಡೆದರೆ ಕಷ್ಟಪಟ್ಟು ಓದಿ ಪರೀಕ್ಷೆ ಬರೆದ ಬುದ್ಧಿವಂತರಿಗೆ ಅನ್ಯಾಯ ವಾಗುವ ಜೊತೆಗೆ ಅಕ್ರಮದ ಮೂಲಕ ಆಯ್ಕೆಯಾದ ದಡ್ಡರು ಆಡಳಿತ ವ್ಯವಸ್ಥೆಗೆ ಬರುತ್ತಾರೆ. ನಿಷ್ಠಾವಂತರು ದಕ್ಷ ಮತ್ತು ಪ್ರಾಮಾಣಿಕ ನೌಕರರನ್ನು ಆಯ್ಕೆ ಮಾಡಬೇಕಾದರೆ ಪರೀಕ್ಷೆಗಳಲ್ಲಿ ಅಕ್ರಮ ನಡೆಯದಂತೆ ಪಾರದರ್ಶಕತೆ ಕಾಪಾಡುವ ಜೊತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಹಿಂದಿನ ಸರ್ಕಾರದಲ್ಲಿ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿಯೇ ಅಕ್ರಮ ನಡೆದಿದೆ ಎಂಬುದು ರಾಜ್ಯದಲ್ಲಿ ತುಂಬಾ ಚರ್ಚೆ ಆಯಿತು, ಈಗ ಪುನಃ ಅದೇ ರೀತಿಯ ಪ್ರಕರಣ ನಡೆದು ಆರೋಪಿಯನ್ನು ಬಂಧಿಸಿರುವುದಾಗಿ ಹೇಳಿ ಸುಮ್ಮನಾಗಿದ್ದಾರೆ ಎಂದರು. ಮತ್ತೆ ಮತ್ತೆ ಇಂತಹ ಪ್ರಕರಣ ನಡೆಯುತ್ತಿರುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿಲ್ಲ. ಈ ಪ್ರಕರಣಗಳಲ್ಲಿ ಭಾಗಿಯಾಗಿರುವ ಕಿಂಗ್‌ಪಿನ್‌ಗಳು ಹೊರಗೆ ಬರಲು ಜಾಮೀನು ಸಿಗದಂತೆ ನೋಡಿಕೊಳ್ಳಬೇಕು. ಈ ರೀತಿ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಎಲ್ಲಿ ಲೋಪದೋಷ ಇದೆ ಎಂಬುದನ್ನು ಪತ್ತೆ ಹಚ್ಚಲು ಅಧ್ಯಯನ ಸಮಿತಿ ರಚಿಸಿ ಮುಂದೆ ಇಂತಹ ಪರೀಕ್ಷಾ ಅಕ್ರಮಗಳು ನಡೆಯದಂತೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

ಶಾಶ್ವತ ಯೋಜನೆ: ಮಲೆನಾಡು ಭಾಗದಲ್ಲಿ ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷ ಹೆಚ್ಚಾಗಿದೆ ಮೊನ್ನೆ ತಾನೆ ಯುವತಿ ಒಬ್ಬಳು ಕಾಡಾನೆ ತುಳಿತಕ್ಕೆ ಬಲಿಯಾಗಿದ್ದಾಳೆ. ಇಂತಹ ಘಟನೆಗಳು ನಡೆದಾಗ ಕೇವಲ ಪರಿಹಾರ ಕೊಟ್ಟು ಸುಮ್ಮನಿರಲಾಗುತ್ತಿದೆ. ಈ ಸಂಘರ್ಷ ತಡೆಯಲು ಶಾಶ್ವತ ಯೋಜನೆ ರೂಪಿಸಬೇಕು ಎಂದು ಹೇಳಿದರು.

ಅರಣ್ಯ ಸಚಿವರು ಈ ಜಿಲ್ಲೆಗೆ ಬಂದು ರೈತರು ಸಂಘ ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು ಸಾರ್ವಜನಿಕ ಮುಖಂಡರನ್ನು ಒಳಗೊಂಡಂತೆ, ಕೂಲಂಕಷವಾಗಿ ಚರ್ಚೆ ನಡೆಸಿ ಮುಂದೆ ವನ್ಯ ಪ್ರಾಣಿಗಳ ಹಾವಳಿ ತಡೆಯುವ ಬಗ್ಗೆ ಹಾಗೂ ನಷ್ಟಕ್ಕೊಳಗಾದ ರೈತರಿಗೆ, ಜೀವ ಕಳೆದುಕೊಂಡ ಸಂತ್ರಸ್ತರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಕೊಡಿಸಲು ಶಾಶ್ವತ ಯೋಜನೆ ರೂಪಿಸುವಂತೆ ಆಗ್ರಹಿಸಿದರು. ಜಿಲ್ಲೆಯಲ್ಲಿ ಮಳೆ ಇಲ್ಲದೆ ಮಲೆನಾಡು ಮತ್ತು ಬಯಲು ಭಾಗದಲ್ಲಿ ರೈತರು ತೊಂದರೆಗೀಡಾಗಿದ್ದಾರೆ. ಈ ಸಂದರ್ಭದಲ್ಲಿ ಚಿಕ್ಕಮಗಳೂರು ಸೇರಿದಂತೆ ಬರಗಾಲಕ್ಕೊಳಗಾದ ಬಯಲು ಸೀಮೆಯ ಲಕ್ಯಾ, ಸಖರಾಯ ಪಟ್ಟಣ, ದೇವನೂರು ಹೋಬಳಿಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಹಾಗೂ ಪತ್ರವನ್ನು ಬರೆಯಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ಸಂಬಂಧ ಸಾರ್ವಜನಿಕರಿಂದಲೂ ಹೆಚ್ಚಿನ ಒತ್ತಡ ಹಾಕುವುದು ಅವಶ್ಯಕ ಎಂದು ಹೇಳಿದರು.

13 ಕೆಸಿಕೆಎಂ 1ಡಿ.ಕೆ. ತಾರಾದೇವಿ