ಸರ್ಕಾರಿ ಜಮೀನಿನ ಅಕ್ರಮ ದುರಸ್ತಿ ರದ್ದು

| Published : Jul 07 2025, 11:48 PM IST

ಸಾರಾಂಶ

ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಅಂಬಾರಪುರ ಗ್ರಾಮದಲ್ಲಿ ಅರಣ್ಯ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗೆ ಸೇರಿದ ಸರ್ವೇ ನಂಬರ್ 46 ರ 167.07 ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ದುರಸ್ತಿ ಮಾಡಿಕೊಟ್ಟಿರುವುದನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಅಂಬಾರಪುರ ಗ್ರಾಮದಲ್ಲಿ ಅರಣ್ಯ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗೆ ಸೇರಿದ ಸರ್ವೇ ನಂಬರ್ 46 ರ 167.07 ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ದುರಸ್ತಿ ಮಾಡಿಕೊಟ್ಟಿರುವುದನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ರದ್ದುಪಡಿಸಿದ ಜಮೀನನ್ನು ಪುನಃ ಕ್ರಮವಾಗಿ ಸಂಬಂಧಿಸಿದ ಇಲಾಖೆಗಳಿಗೆ ಹಸ್ತಾಂತರ ಮಾಡಲಾಗಿದೆ. ರದ್ದುಪಡಿಸಿದ 167-07 ಎಕರೆಯಲ್ಲಿ ಅರಣ್ಯ ಇಲಾಖೆಗೆ 77-07 ಎಕರೆ, ತೋಟಗಾರಿಕೆ ಇಲಾಖೆಗೆ 1-20 ಎಕರೆ ಹಾಗೂ ಕಂದಾಯ ಇಲಾಖೆಗೆ 71-21 ಎಕರೆ ಜಮೀನನ್ನು ಖಾತೆ ಪಹಣಿ ಮಾಡಿ ಕೊಡಲಾಗಿದೆ. ಅರಣ್ಯ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗೆ ಸೇರಿದ 167-07 ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ದುರಸ್ತಿ ಮಾಡಿಕೊಟ್ಟಿರುವುದನ್ನು ರದ್ದುಪಡಿಸಲು ೨೦೧೫ರಲ್ಲಿ ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮೈಸೂರು ಮಹಾರಾಜರ ಆದೇಶದಂತೆ 1926ರಲ್ಲಿ ಮುತ್ತುಗದಹಳ್ಳಿ ಮೀಸಲು ಅರಣ್ಯಕ್ಕೆ ಮಂಜೂರಾಗಿದ್ದ ಸರ್ವೇ ನಂಬರ್ 46ರ 300 ಎಕರೆ ಜಮೀನಿಗೆ ಸಂಬಂಧಿಸಿದಂತೆ 1960ರಲ್ಲಿ ಪಹಣಿ ಬಂದಾಗ ಅರಣ್ಯ ಇಲಾಖೆ ಹೆಸರು ಬಿಟ್ಟು ಹೋಗಿರುವುದನ್ನು ಸರಿಪಡಿಸುವಂತೆ ಹಾಗೂ 300 ಎಕರೆ ಜಮೀನಿನ ಪೈಕಿ ಸರ್ಕಾರವು 91 ಎಕರೆಯನ್ನು ತೋಟಗಾರಿಕೆ ಇಲಾಖೆಗೆ ಮಂಜೂರು ಮಾಡಿದ್ದು, ಉಳಿದ 209 ಎಕರೆಯನ್ನು ಅರಣ್ಯ ಇಲಾಖೆ ಹೆಸರಿಗೆ ಖಾತೆ ಪಹಣಿ ಮಾಡುವಂತೆ ಲೋಕಾಯುಕ್ತ ನ್ಯಾಯಾಲಯ ಆದೇಶ ನೀಡಿದೆ. ಈ ಆದೇಶದನ್ವಯ ತಿಪಟೂರು ಉಪವಿಭಾಗಾಧಿಕಾರಿ ವಿಚಾರಣೆ ನಡೆಸಿ ಮಂಜೂರಾತಿಯನ್ನು ರದ್ದುಪಡಿಸಿ 209 ಎಕರೆ ಜಮೀನನ್ನು ಅರಣ್ಯ ಇಲಾಖೆ ಹೆಸರಿಗೆ ಇಂಡೀಕರಿಸಲಾಗಿದೆ. ಲೋಕಾಯುಕ್ತ ನ್ಯಾಯಾಲಯದ ಸೂಚನೆಯಂತೆ 2025ರ ಜುಲೈ 3 ಮತ್ತು 4ರಂದು ಕಂದಾಯ, ಅರಣ್ಯ, ಭೂಮಾಪನ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿ ಸ್ಥಳಕ್ಕೆ ಹಾಜರಾಗಿ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆಗೆ ಒಳಪಡುವ 209 ಎಕರೆ ಜಮೀನನ್ನು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲಾಗಿದೆ. ಅರಣ್ಯ ಇಲಾಖೆಯು ತನ್ನ ವಶಕ್ಕೆ ಪಡೆದ ೨೦೯ ಎಕರೆ ಜಮೀನಿನಲ್ಲಿ ಗಿಡಗಳನ್ನು ನೆಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.