ಶಾಖೋತ್ಪನ್ನ ಕೇಂದ್ರಗಳ ಕಲ್ಲಿದ್ದಲು ಅಕ್ರಮ ಮಾರಾಟ?

| Published : Nov 22 2023, 01:00 AM IST

ಶಾಖೋತ್ಪನ್ನ ಕೇಂದ್ರಗಳ ಕಲ್ಲಿದ್ದಲು ಅಕ್ರಮ ಮಾರಾಟ?
Share this Article
  • FB
  • TW
  • Linkdin
  • Email

ಸಾರಾಂಶ

ಶಾಖೋತ್ಪನ್ನ ಕೇಂದ್ರಗಳ ಕಲ್ಲಿದ್ದಲು ಅಕ್ರಮ ಮಾರಾಟ? ಕೇಂದ್ರಗಳ ಹತ್ತಿರದ ಜಮೀನಿನಲ್ಲಿ ಕಲ್ಲಿದ್ದಲು ಸಂಗ್ರಹಿಸಿದ್ದು ಅನುಮಾನಕ್ಕೆ ಪುಷ್ಟಿ । ಸ್ವಚ್ಛತೆ ಹೆಸರಲ್ಲಿ ದುರ್ಬಳಕೆ

ಕೇಂದ್ರಗಳ ಹತ್ತಿರದ ಜಮೀನಿನಲ್ಲಿ ಕಲ್ಲಿದ್ದಲು ಸಂಗ್ರಹಿಸಿದ್ದು ಅನುಮಾನಕ್ಕೆ ಪುಷ್ಟಿ । ಸ್ವಚ್ಛತೆ ಹೆಸರಲ್ಲಿ ದುರ್ಬಳಕೆ

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆಯ ಶಾಖೋತ್ಪನ್ನ ಕೇಂದ್ರಗಳಿಗೆ ಸರಬರಾಜಾಗುವ ಕಲ್ಲಿದ್ದಲು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆಯೇ ಎನ್ನುವ ಶಂಕೆ ಎದುರಾಗಿದೆ. ಇಲ್ಲಿನ ರಾಯಚೂರು ಬೃಹತ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್ಟಿಪಿಎಸ್‌) ಹಾಗೂ ಯರಮರಸ್ ಅತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ವೈಟಿಪಿಎಸ್)ಗಳಿಗೆ ದೇಶದ ವಿವಿಧ ಕಲ್ಲಿದ್ದಲು ಗಣಿಗಳಿಂದ ರೈಲಿನಲ್ಲಿ ನಿತ್ಯ ಸರಬರಾಜಾಗುವ ಕಲ್ಲಿದ್ದಲು ವ್ಯಾಗನ್ ಸ್ವಚ್ಛತೆಯ ಹೆಸರಿನಲ್ಲಿ ಗುಣಮಟ್ಟದ ಕಲ್ಲಿದ್ದಲಿನ ದುರ್ಬಳಕೆ ಆಗುತ್ತಿರುವ ಅನುಮಾನುಗಳು ಎದುರಾಗಿವೆ.

ಕಲ್ಲಿದ್ದಲು ರೈಲಿನ ವ್ಯಾಗನ್ ಸ್ವಚ್ಛತೆ ಮಾಡಲು ಟೆಂಡರ್ ನೀಡಿದ್ದು, ಖಾಲಿ ವ್ಯಾಗನ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಗುಣಮಟ್ಟದ ಕಲ್ಲಿದ್ದಲನ್ನು ಕದಿಯಲಾಗುತ್ತಿದೆ ಎನ್ನುವ ಆರೋಪಗಳು ದಟ್ಟಗೊಂಡಿವೆ. ರಾಯಚೂರು ತಾಲೂಕಿನ ಶಾಖೊತ್ಪನ್ನ ಕೇಂದ್ರಗಳ ಹತ್ತಿರದ ಜಮೀನಿನಲ್ಲಿ ಕಲ್ಲಿದ್ದಲು ಸಂಗ್ರಹಿಸಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡಿದೆ.

ರೈಲು ಮೂಲಕ ತರಲಾದ ಕಲ್ಲಿದ್ದಲನ್ನು ಕೇಂದ್ರದೊಳಗೆ ಅನ್‌ಲೋಡ್ ಮಾಡಿದ ಬಳಿಕ ವ್ಯಾಗನ್‌ಗಳಲ್ಲಿ ಕಲ್ಲಿದ್ದಲು ಸ್ವಲ್ಪ ಉಳಿದಿರುತ್ತದೆ. ಅದನ್ನು ಸ್ವಚ್ಛಗೊಳಿಸಲು ರೈಲ್ವೆ ಇಲಾಖೆಯವರು ಕರ್ನೂಲ್ ಜಿಲ್ಲೆ ಆದೋನಿ ಮೂಲದ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದ್ದಾರೆ. ಆದರೆ, ವ್ಯಾಗನ್‌ನಲ್ಲಿ ದೊಡ್ಡ ಗಾತ್ರದ ಕಲ್ಲಿದ್ದಲು ಉಳಿಯುತ್ತಿದ್ದು, ವೈಟಿಪಿಎಸ್ ಅಧಿಕಾರಿಗಳ ಗಮನಕ್ಕೆ ಇಲ್ಲದೇ ಸಾಗಿಸಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ.

ಯರಮರಸ್ ರೈಲ್ವೆ ನಿಲ್ದಾಣದ ಬಳಿ ಕಲ್ಲಿದ್ದಲು ಖಾಲಿ ಮಾಡಿದ ರೈಲು ನಿಲ್ಲಲಿದ್ದು, ವ್ಯಾಗನ್ ಸ್ವಚ್ಛಗೊಳಿಸುತ್ತಾರೆ. ಆಗ ಸಾಕಷ್ಟು ಪ್ರಮಾಣದ ಕಲ್ಲಿದ್ದಲು ಸಂಗ್ರಹವಾಗುತ್ತಿದೆ. ಆರ್ರ್ಟಿಪಿಎಸ್ ಇಲ್ಲವೇ ವೈಟಿಪಿಎಸ್‌ನಲ್ಲಿ ವ್ಯಾಗನ್‌ಗಳನ್ನು ಸಂಪೂರ್ಣ ಖಾಲಿ ಮಾಡಿದರೂ ಸಾಕಷ್ಟು ಪ್ರಮಾಣದಲ್ಲಿ ದೊಡ್ಡದಾದ ಗುಣಮಟ್ಟದ ಕಲ್ಲಿದ್ದಲು ಉಳಿಯುತ್ತಿರುವುದು ಹಲವಾರು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರದ ಅಧಿಕಾರಿಗಳು, ವ್ಯಾಗನ್‌ಗಳಲ್ಲಿ ಉಳಿಯುವ ಕಲ್ಲಿದ್ದಲನ್ನು ಸಂಪೂರ್ಣ ಖಾಲಿ ಮಾಡಲಾಗುತ್ತದೆ. ಆದರೆ, ಅದರಲ್ಲಿ ಉಳಿದಿರುವುದನ್ನು ಸ್ವಚ್ಛಗೊಳಿಸಲು ರೈಲ್ವೆ ಇಲಾಖೆ ಟೆಂಡರ್ ನೀಡಿರುವುದು ಗಮನಕ್ಕಿಲ್ಲ ಎಂದು ನುಣಿಚಿಕೊಳ್ಳುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತೀವ್ರ ಕಲ್ಲಿದ್ದಲು ಕೊರತೆ, ಕಳಪೆ ಗುಣಮಟ್ಟದ ಕಲ್ಲಿದ್ದಲು ಪೂರೈಕೆಯ ಸಮಸ್ಯೆಗಳ ನಡುವೆ ಬಂದಿರುವ ಕಲ್ಲಿದ್ದಲನ್ನು ಸ್ವಚ್ಛತೆ ಹೆಸರಿನಲ್ಲಿ ಕದ್ದು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆಯೇ ? ಇದ ಹಿಂದೆ ಕೆಪಿಟಿಸಿಎಲ್‌ ಅಧಿಕಾರಿ, ಗುತ್ತಿಗೆದಾರರ ಕೈವಾಡ ಅಡಗಿದೆಯೇ? ಎನ್ನುವ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ದೊರೆಯಬಹುದಾಗಿದೆ.

------------------------

21ಕೆಪಿಆರ್‌ಸಿಆರ್03:

ರಾಯಚೂರು ತಾಲೂಕಿನ ಶಾಖೊತ್ಪನ್ನ ಕೇಂದ್ರಗಳ ಹತ್ತಿರದ ಜಮೀನಿನಲ್ಲಿ ಕಲ್ಲಿದ್ದಲು ಸಂಗ್ರಹಿಸಿರುವುದು.