ಕನ್ನಡಪ್ರಭ ವಾರ್ತೆ ಸಿಂಧನೂರು

ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪಡಿತರ ಅಕ್ಕಿ ಅಕ್ರಮ ಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಭೀಮವಾದ) ಸೋಮವಾರ ಸ್ಥಳೀಯ ಮಿನಿ ವಿಧಾನಸೌಧ ಕಚೇರಿಯ ಮುಂದೆ ಧರಣಿ ನಡೆಸಿತು.

ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಕುರಿತು ಜೂ.26 ಮತ್ತು ಜು.16 ರಂದು ಮನವಿ ಸಲ್ಲಿಸಿದಾಗ್ಯೂ ತಹಸೀಲ್ದಾರರು ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಆಹಾರ ಇಲಾಖೆಯ ಅಧಿಕಾರಿಗಳು ಅವ್ಯವಹಾರ ಬಗ್ಗೆ ಪರಿಶೀಲನೆಯನ್ನೂ ನಡೆಸಿಲ್ಲ. ಈ ದಂಧೆಗೆ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆಂಬ ಅನುಮಾನ ಮೂಡಿದೆ. ತಕ್ಷಣವೇ ಎಚ್ಚೆತ್ತುಕೊಂಡು ಅಕ್ರಮ ಪಡಿತರ ಮಾರಾಟವನ್ನು ತಡೆ ಹಿಡಿಯಬೇಕು. ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕು. ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಗುಣಮಟ್ಟದ ಪಡಿತರ ವಿತರಣೆ ಮಾಡಬೇಕು ಎಂದು ತಾಲ್ಲೂಕು ಘಟಕದ ಸಂಚಾಲಕರಾದ ಸಾದೇವಪ್ಪ ಹಾಗೂ ಆನಂದ ತುರ್ವಿಹಾಳ ಒತ್ತಾಯಿಸಿದರು.

ಶಿರಸ್ತೇದಾರ್ ಅಂಬಾದಾಸ್ ಮನವಿ ಪತ್ರ ಸ್ವೀಕರಿಸಿದರು. ಸದಸ್ಯರಾದ ಹುಲುಗಪ್ಪ ಪೂಜಾರಿ, ಯಮನೂರ ನವಲಹಳ್ಳಿ, ದುರುಗಪ್ಪ, ರಮೇಶ ತುರ್ವಿಹಾಳ, ಹುಸೇನಪ್ಪ ಪೂಜಾರಿ, ಸಿದ್ದಪ್ಪ ಸಾಸಲಮರಿ, ಹನುಮಂತ ಇ.ಜೆ.ಬೊಮ್ಮನಾಳ, ಹನುಮಂತ ತಿಡಿಗೋಳ, ಉಮೇಶ, ವೀರೇಶ ವೆಂಕಟೇಶ್ವರ ಕ್ಯಾಂಪ್, ಹುಸೇನಪ್ಪ ಅರಳಹಳ್ಳಿ, ಈರಪ್ಪ, ಹನುಮಂತ, ದುರುಗಪ್ಪ ಭಾಗವಹಿಸಿದ್ದರು.