ಸಾರಾಂಶ
ಕೃಷ್ಣೆಯಲ್ಲಿ ಅಕ್ರಮ ಮರಳು ದಂಧೆ : ನದಿಯೊಡಲಲ್ಲೇ ಜೆಸಿಬಿಗಳ ಅರ್ಭಟಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಬ್ರಿಟನ್ ರಾಣಿ ಎಲಿಜೆಬತ್ ಕಿರೀಟದಲ್ಲಿರುವ, ವಿಶ್ವ ಪ್ರಸಿದ್ಧ ಕೋಹಿನೂರ್ ವಜ್ರ ದೊರಕಿದ ಸ್ಥಳ ಖ್ಯಾತಿಯ, ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಗ್ರಾಮದ ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆಯ ಭೀತಿ ಎದುರಾಗಿದೆ.
ಅಕ್ರಮ ಮರಳು ದಂಧೆಕೋರರ ಕಣ್ಣಿಗೆ ಇದೀಗ ಕೋಹಿನೂರ್ ಖ್ಯಾತಿಯ ಕೃಷ್ಣೆಯೊಡಲ ಮೇಲೆ ಕಣ್ಣು ಬಿದ್ದಿದೆ. ಇಲ್ಲಿನ ಸರ್ವೆ ನಂಬರ್ 337 ಹಾಗೂ 337 ರಲ್ಲಿ, ಸುಮಾರು 8 ಎಕರೆಯಷ್ಟು ಪ್ರದೇಶದಲ್ಲಿ ವಿಶ್ವ ಪ್ರಸಿದ್ಧಿ ಕೋಹಿನೂರ್ ವಜ್ರ ಸಿಕ್ಕಿರುವ ಸ್ಥಳವಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಯ್ದಿರಿಸಲಾಗಿದೆ ಎಂದು ಪಹಣಿ ದಾಖಲೆಗಳಲ್ಲಿ ಜಿಲ್ಲಾಡಳಿತ ಗುರುತಿಸಿದೆ. ಆದರೀಗ, ಈ ಜಾಗೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಗಾಗಿನ ಚಟುವಟಿಕೆಗಳು ಸದ್ದಿಲ್ಲದೆ ಶುರುವಾಗಿವೆ.ಕೋಟ್ಯಂತರ ರುಪಾಯಿಗಳ ಬೆಲೆ ಬಾಳುವ ಇಲ್ಲಿನ ಮರಳಿಗೆ, ಕೋಹಿನೂರ್ ವಜ್ರದಷ್ಟೇ ಬೆಲೆ ಬಂದಿರುವುದು ದಂಧೆಕೋರರ ಕಾಕದೃಷ್ಟಿಗೆ ಕಾರಣವಾಗಿದೆ. ಮರಳು ಗಣಿಗಾರಿಕೆಗೆ ಇಲ್ಲಿ ಆಡಳಿತ ನಿಷೇಧ ಹೇರಿದೆಯಾದರೂ, 60/40 ಲಾಭದ ಹೊಂದಾಣಿಕೆ ಆಧಾರದ ಮೇಲೆ ಇಲ್ಲಿ (ಅ)ವ್ಯವಹಾರ ಕುದುರಿಸುವ ಪ್ರಯತ್ನಕ್ಕೆ ದಂಧೆಕೋರರು ಮುಂದಾಗಿದ್ದಾರೆನ್ನಲಾಗಿದೆ.
ಕೃಷ್ಣೆಯೊಡಲಲ್ಲೇ ಅಕ್ರಮ ಗಣಿಗಾರಿಕೆ :ಕೃಷ್ಣಾ ನದಿಯೊಡಲಲ್ಲೇ ಜೆಸಿಬಿಗಳ ಅರ್ಭಟ ಶುರುವಾಗಿದೆ. ಸರ್ಕಾರದ ಟೆಂಡರ್ ಇಲ್ಲದಿದ್ದರೂ, ಬೇರೆಡೆಯ ಪರ್ಮಿಟ್ ಟೋರಿಸಿ, ಇಲ್ಲಿನ ಟೊಣ್ಣೂರು ಭಾಗದಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ದಂಧೆ ನಡೆದಿದೆ. ಇದಕ್ಕೆಂದೇ ನದಿಗುಂಟ ಸಾಗಲು ಸುಮಾರು 35 ಲಕ್ಷ ರು.ಗಳ ವೆಚ್ಚದಲ್ಲಿ ಮಣ್ಣಿನ ರಸ್ತೆ ನಿರ್ಮಾಣ ಮಾಡಲಾಗಿದೆ.
ಅಕ್ರಮ ಬಗ್ಗೆ ಅನೇಕ ದೂರುಗಳು ಬಂದಿವೆಯಾದರೂ, ರಾಜಕೀಯ ಪ್ರಭಾವಿಗಳೇ ಇಂತಹ ದಂಧೆ ನಡೆಸುತ್ತಿರುವುದರಿಂದ, ಅಧಿಕಾರಿಗಳು ಮೌನಕ್ಕೆ ಶರಣಾಗುತ್ತಿದ್ದಾರೆ ಎಂಬ ಆರೋಪಗಳಿವೆ.ದಿನವೊಂದಕ್ಕೆ 200 ರಿಂದ 250 ಟಿಪ್ಪರ್‌ಗಳಷ್ಟು ಮರಳು ಇಲ್ಲಿಂದ ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೆ ಕಳುಹಿಸಲಾಗುತ್ತದೆ. ಒಂದು ಟಿಪ್ಪರ್ ಮರಳಿಗೆ 40 ರಿಂದ 50 ಸಾವಿರ ರು.ಗಳಷ್ಟು ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ರಾಬರ್ಟ್ ಸೆವೆಲ್ ಪುಸ್ತಕದಲ್ಲಿ ಕೋಹಿನೂರ್ ಉಲ್ಲೇಖ
ಬ್ರಿಟಿಷ್ ಅಧಿಕಾರಿ, ಇತಿಹಾಸತಜ್ಞ ರಾಬರ್ಟ್ ಸೆವೆಲ್ (1845-1925) ವಿಜಯನಗರ ಸಾಮ್ರಾಜ್ಯದ ಗತವೈಭವದ ಬಗ್ಗೆ ಬರೆದಿರುವ "ಎ ಫಾರಗಟನ್ ಎಂಪಾಯರ್- ವಿಜಯನಗರ " ಎಂಬ ಕೃತಿಯಲ್ಲಿ ಕೊಳ್ಳೂರಿನ ಕೋಹಿನೂರ್ ವಜ್ರದ ಬಗ್ಗೆ ಉಲ್ಲೇಖವಿದೆ.756 ಕ್ಯಾರಟ್ ತೂಕದ, ಕೋಹ್-ಇ-ನೂರ್ ವಜ್ರವು ಕೊಳ್ಳೂರಿನ ಕೃಷ್ಣಾ ನದಿಯಲ್ಲಿ ಸಿಕ್ಕಿದ್ದು, ಇದನ್ನು ಮೀರ್ ಜುಮಲಾ ಎಂಬ ಗಣಿ ಉದ್ಯಮಿ, ಶಹಾ ಜಹಾನ್ ಗೆ ಉಡುಗೊರೆಯಾಗಿ ನೀಡಿದ್ದ ಎಂದು ಬರೆಯಲಾಗಿದೆ. ಸದ್ಯ, ಇದು ಬ್ರಿಟಿನ್ ರಾಣಿ ಎಲಿಜೆಬತ್ ಕಿರೀಟದಲ್ಲಿದೆ. ಕೊಳ್ಳೂರು ಕೃಷ್ಣಾ ನದಿಯಲ್ಲಿ ಕೋಹ್-ಇ-ನೂರ್ ವಜ್ರ ದೊರಕಿದ ಇತಿಹಾಸವಿದೆ. ಇಲ್ಲಿ ಮರಳು ಗಣಿಗಾರಿಕೆ ನಿಷೇಧವಿದೆ. ಅಕ್ರಮ ನಡೆದರೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು: ಭಾಸ್ಕರರಾವ್ ಮುಡಬೂಳ್, ಹಿರಿಯ ಇತಿಹಾಸತಜ್ಞರು, ಶಹಾಪುರ.