ಮಳೆ ಇಲ್ಲದೇ ಕೆಲವೆಡೆ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿ ಮರಳು ನಿಕ್ಷೇಪ ತೆಗೆದುಕೊಂಡಿವೆ.
ಚಂದ್ರು ಕೊಂಚಿಗೇರಿ ಹೂವಿನಹಡಗಲಿ
ಇಲ್ಲಿನ ತುಂಗಭದ್ರಾ ನದಿಯ ಮರಳಿನ ಬ್ಲಾಕ್‌ಗಳು ಕಳೆದ 4 ವರ್ಷದಿಂದ ಸರ್ಕಾರ ಗಣಿ ಇಲಾಖೆಯಿಂದ ಟೆಂಡರ್ ಮಾಡಿಲ್ಲ, ಬೊಗಸೆ ಮರಳು ಜನರಿಗೆ ಸಿಗದೇ ಎಲ್ಲ ಲೂಟಿಕೋರರ ಪಾಲಾಗಿದೆ. ಇದರಿಂದ ನದಿಯಲ್ಲಿನ ಮರಳು ಸಂಪೂರ್ಣ ಖಾಲಿ ಹಾಡಹಗಲೇ ಮರಳು ಅಕ್ರಮ ದಂಧೆ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾತ್ರ ಗಪ್‌ಚುಪ್ ಕುಳಿತಿದೆ.ಹೌದು, ತಾಲೂಕಿನ ಹರವಿ, ಕುರುವತ್ತಿ, ಮೈಲಾರ ಇತರೆ ಕಡೆಗಳಲ್ಲಿ ಹಾಡಹಗಲೇ ಮರಳು ಅಕ್ರಮ ದಂಧೆ ನಿರಂತರವಾಗಿದೆ. ಹರವಿ-ಹರನಗಿರಿ ಸೇತುವೆ, ಮೈಲಾರ-ಕಂಚರಗಟ್ಟಿ ಸೇತುವೆಯಿಂದ 1 ಕಿಮೀ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆ ಮಾಡುವಂತಿಲ್ಲ ಮತ್ತು ಆ ಪ್ರದೇಶದಲ್ಲಿ ಮರಳು ಇದ್ದರೂ ಬ್ಲಾಕ್ ರಚನೆ ಮಾಡುವಂತಿಲ್ಲ, ಆದರೂ ಸೇತುವೆ ಬುಡದಲ್ಲೇ ಮರಳು ಲೂಟಿ ಎಗ್ಗಿಲ್ಲದೇ ಸಾಗಿದೆ. ಇದರಿಂದ ಸೇತುವೆಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಮಳೆ ಇಲ್ಲದೇ ಕೆಲವೆಡೆ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿ ಮರಳು ನಿಕ್ಷೇಪ ತೆಗೆದುಕೊಂಡಿವೆ. ಹಗಲು ಹೊತ್ತಿನಲ್ಲಿ ಎತ್ತಿನ ಚಕ್ಕಡಿಯಲ್ಲಿ ಮರಳು ಸಾಗಣೆ ಮಾಡಿ ಕಣಗಳಲ್ಲಿ ಸಂಗ್ರಹಿಸಿ ರಾತ್ರಿ ವೇಳೆ ಲಾರಿಗಳ ಮೂಲಕ ನಗರ ಪ್ರದೇಶಗಳಿಗೆ ಅಕ್ರಮ ಸಾಗಣೆ ಮಾಡುತ್ತಾರೆ.ತಾಲೂಕಿನ ತುಂಗಭದ್ರಾ ನದಿ ತೀರದ ಹರವಿ, ಬನ್ನಿಮಟ್ಟಿ, ಕಂದಗಲ್ಲು, ಹಕ್ಕಂಡಿಯಲ್ಲಿ ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 6 ಮರಳಿನ ಬ್ಲಾಕ್ ಗುರುತಿಸಿತ್ತು. ಮರಳಿನ ಬ್ಲಾಕ್ ಟೆಂಡರ್ ಪ್ರಕ್ರಿಯೆಗೆ ಒಂದಲ್ಲ ಒಂದು ತೊಂದರೆ ಉಂಟಾಗಿ 4 ವರ್ಷದಿಂದ ಟೆಂಡರ್ ಆಗಿಲ್ಲ, ಇದನ್ನೇ ಬಂಡವಾಳ ಮಾಡಿಕೊಂಡ ಮರಳು ಅಕ್ರಮ ದಂಧೆಕೋರರು ಕಬ್ಬಿಣದ ತೆಪ್ಪ ಬಳಸಿ ಲೂಟಿ ಮಾಡಿದ್ದಾರೆ. ಉಳಿದ ಕಡೆ ಎತ್ತಿನ ಚಕ್ಕಡಿಯಲ್ಲಿ ಅಕ್ರಮ ಸಾಗಣೆ ಮಾಡುತ್ತಿದ್ದಾರೆ.
ಹಗಲು ಹೊತ್ತು ನದಿಯಲ್ಲಿ ಮರಳಿನ ರಾಶಿ ಮಾಡುವ ದಂಧೆಕೋರರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ನದಿ ಬಳಿ ಮರಳಿನ ಫೊಟೋ ತೆಗೆಯಲು ಹೋದವರಿಗೆ ಧಮ್ಕಿ ಬೇರೆ ಹಾಕುತ್ತಾರೆ. ರಾತ್ರಿ ಇಡೀ ಮರಳು ಅಕ್ರಮ ಸಾಗಣೆಯಾದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸುಳಿವೇ ಇಲ್ಲ, ಅಕ್ರಮ ದಂಧೆ ತೆಡೆಗೆ ತಾಲೂಕು ಕಾರ್ಯಪಡೆ ಇತ್ತ ಕಡೆಗೆ ತಲೆ ಕೂಡಾ ಹಾಕುತ್ತಿಲ್ಲ. ಸರ್ಕಾರದ ಬೊಕ್ಕಸಕ್ಕೆ ಸೇರಬೇಕಿದ್ದ ಕೋಟ್ಯಂತರ ರಾಜಸ್ವ ಧನ ದಂಧೆಕೋರರ ಜೇಬು ಸೇರಿದೆ.ಜನರು ಮನೆ ಕಟ್ಟಲು ಮರಳಿಗಾಗಿ ಪರದಾಡುತ್ತಿದ್ದು, ವಿಧಿ ಇಲ್ಲದೇ ದುಬಾರಿ ಬೆಲೆಗೆ ಮರಳು ಖರೀದಿಸುತ್ತಾರೆ, ಸರ್ಕಾರ ಮರಳಿನ ಬ್ಲಾಕ್ ಟೆಂಡರ್‌ನ ತೊಂದರೆ ಸರಿಪಡಿಸಿ ಜನರಿಗೆ ಕಡಿಮೆ ಬೆಲೆಯಲ್ಲಿ ಮರಳು ನೀಡಬೇಕು ಎಂದು ನದಿ ತೀರದ ಜನರು ತಿಳಿಸಿದ್ದಾರೆ.
ಹೂವಿನಹಡಗಲಿ ತಾಲೂಕಿನ ನದಿ ತೀರದ ವ್ಯಾಪ್ತಿ ಹೆಚ್ಚಿದೆ, ಎಲ್ಲ ಕಡೆಗೂ ನೋಡಲು ಸಾಧ್ಯವಾಗುತ್ತಿಲ್ಲ, ಮರಳು ಅಕ್ರಮ ದಂಧೆ ತಡೆಗೆ ಕ್ರಮಕ್ಕೆ ಮುಂದಾಗುತ್ತೇವೆ ಎಂದು ವಿಜಯನಗರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಾಗೃತ ದಳದ ಆಸೀಫ್‌ವುಲ್ಲಾ ತಿಳಿಸಿದ್ದಾರೆ.