ಮಲಪ್ರಭಾ ನದಿ ತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ

| Published : Apr 07 2025, 12:31 AM IST

ಸಾರಾಂಶ

ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ವ್ಯಾಪ್ತಿಯಲ್ಲಿ ಹರಿಯುವ ಮಲಪ್ರಭಾ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಮರಳುಗಳ್ಳರ ದಾಹಕ್ಕೆ ಬರಡಾಗಿದೆ.

ಶಿವಕುಮಾರ ಕುಷ್ಟಗಿಕನ್ನಡಪ್ರಭ ವಾರ್ತೆ ಗದಗಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ವ್ಯಾಪ್ತಿಯಲ್ಲಿ ಹರಿಯುವ ಮಲಪ್ರಭಾ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಮರಳುಗಳ್ಳರ ದಾಹಕ್ಕೆ ಬರಡಾಗಿದೆ.ಮಲಪ್ರಭಾ ನದಿ ತೀರದ ಬಲಭಾಗದ ಸರ್ವೆ ನಂಬರ್ 30 ಹಾಗೂ 31/1ರಲ್ಲಿ ನಿಯಮ ಮೀರಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಪಟ್ಟಾ ಜಮೀನಿನಲ್ಲಿ ಬೋಟ್ ಬಳಸಿ ಮರಳು ತೆಗೆಯುತ್ತಿದ್ದು, ಫಲವತ್ತಾದ ಜಮೀನು ಬರಡು ಭೂಮಿಯಾಗುತ್ತಿದೆ.ನಿಯಮ ಬಾಹಿರ:ಪಟ್ಟಾ ಜಮೀನಿನಲ್ಲಿ ಸಂಗ್ರಹವಾದ ನೀರಿನಲ್ಲಿ ಬೋಟ್ ನಿಲ್ಲಿಸಿ, ಮೋಟರ್ ಸಹಾಯದಿಂದ ನೀರು ಪಂಪ್ ಮಾಡಿ, ಸಾಣಿಗೆ ಮೂಲಕ ಮರಳು ಬೇರ್ಪಡಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಮರಳನ್ನು ಯಾವುದೇ ಪಾಸ್ ಇಲ್ಲದೇ ಹುಬ್ಬಳ್ಳಿ, ಬಾಗಲಕೋಟೆಗೆ ಸಾಗಾಟ ಮಾಡುತ್ತಾರೆ. ಅಗತ್ಯ ಕ್ರಮಗಳಿಲ್ಲ: ಸ್ಯಾಂಡ್ ಪಾಯಿಂಟ್‌ನಲ್ಲಿ ಸಿಸಿಟಿವಿ, ವೇಬ್ರಿಡ್ಜ್, ಕಾರ್ಮಿಕರಿಗೆ ಸುರಕ್ಷಾ ಸಾಧನಗಳು, ಮರಳು ಗಣಿಗಾರಿಕೆ ನಡೆಸುವ ಮಾಲೀಕರ ಹೆಸರು ಹಾಗೂ ಪರವಾನಗಿ ಇರುವ ಮಾಹಿತಿ ಫಲಕ ಸಹಿತ ಯಾವುದೇ ನಿಯಮಗಳನ್ನು ಪಾಲನೆ ಮಾಡದೇ ರಾಜಾರೋಷವಾಗಿ ಅಕ್ರಮ ಮಾರ್ಗದಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ.ಅಧಿಕಾರಿಗಳ ಮೌನ: ಹೊಳೆಆಲೂರ ಗ್ರಾಮದ ಕೂಗಳತೆ ದೂರದ ಜಮೀನುಗಳಲ್ಲಿ ಅಕ್ರಮ ದಂಧೆ ನಡೆಯುತ್ತಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಜಾಣ ಮೌನ ಪ್ರದರ್ಶಿಸುತ್ತಿದ್ದಾರೆ. ಆಟಕ್ಕುಂಟು ಲೆಕ್ಕಕ್ಕಿಲ್ಲ: ಇನ್ನು ಹೊಳೆಆಲೂರ ಗ್ರಾಮದ ಮುಂಭಾಗದಲ್ಲಿಯೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ತನಿಖಾ ಠಾಣೆ ಇದೆ. ಆದರೆ ಅಲ್ಲಿ ಸಿಬ್ಬಂದಿಗಳಿಲ್ಲದ ಕಾರಣಕ್ಕೆ ತನಿಖಾ ಠಾಣೆಯ ಕಿಟಕಿ ಬಾಗಿಲುಗಳು ಕಳ್ಳರ ಪಾಲಾಗಿದ್ದು, ತನಿಖಾ ಠಾಣೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.ಪ್ರತ್ಯೇಕ ನಿಯಮ ಅಗತ್ಯ: ನದಿ ಪಾತ್ರದಲ್ಲಿ ನಡೆಸುವ ಮರಳು ಗಣಿಗಾರಿಕೆಗೆ ಕಠಿಣ ನಿಯಮಗಳಿವೆ. ಆದರೆ ಪಟ್ಟಾ ಜಮೀನಿನಲ್ಲಿ ನಡೆಸುವ ಮರಳುಗಾರಿಕೆಗೆ ಯಾವುದೇ ಕಠಿಣ ನಿಯಮಗಳಿಲ್ಲದೇ ಇರುವುದೇ ಅಕ್ರಮಕ್ಕೆ ಕಾರಣವಾಗಿದೆ.ಹೊಳೆಆಲೂರ ಗ್ರಾಮದ ವ್ಯಾಪ್ತಿಯ ಪಟ್ಟಾ ಜಮೀನಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುವ ಮಾಹಿತಿ ಇದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ರೋಣ ತಹಸೀಲ್ದಾರ್‌ ನಾಗರಾಜ ಹೇಳಿದರು.