ಅಕ್ರಮ ಮರಳು ಸಾಗಾಟ: 5 ಲಾರಿ ವಶ, ಪ್ರಕರಣ ದಾಖಲು

| Published : Sep 09 2025, 01:01 AM IST

ಅಕ್ರಮ ಮರಳು ಸಾಗಾಟ: 5 ಲಾರಿ ವಶ, ಪ್ರಕರಣ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಇಟ್ಟಿಗಿ ಪೊಲೀಸ್‌ ಠಾಣೆ ವ್ಯಾಪ್ತಿಯ ಅಲಬೂರು ಗ್ರಾಮದಿಂದ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಹೊಸಪೇಟೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.

ಕನ್ನಡಪ್ರಭ ಪತ್ರಿಕೆ ವರದಿಯ ಪರಿಣಾಮ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನ ಇಟ್ಟಿಗಿ ಪೊಲೀಸ್‌ ಠಾಣೆ ವ್ಯಾಪ್ತಿಯ ಅಲಬೂರು ಗ್ರಾಮದಿಂದ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಹೊಸಪೇಟೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.

ಈ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ಸಾಮರ್ಥ್ಯ ಮೀರಿ ಮರಳು ಸಾಗಾಟ ಕಣ್ಮುಚ್ಚಿ ಕುಳಿತ ತಾಲೂಕು ಕಾರ್ಯಪಡೆ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದ ಬೆನ್ನಲ್ಲೆ ಅಧಿಕಾರಿಗಳು ದಾಳಿಗೆ ಮುಂದಾಗಿದ್ದಾರೆ.

ವಿಜಯನಗರ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ್‌ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮರಳು ಅಕ್ರಮ ಸಾಗಾಣೆ ಹಿನ್ನೆಲೆ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಲಾರಿಗಳಿಗೆ ಸಾರಿಗೆ ಇಲಾಖೆ ಅನುಮತಿಯೇ ಪಡೆದಿಲ್ಲ. ಜತೆಗೆ ಪಾಸ್‌ನಲ್ಲಿ ನಿಗದಿಪಡಿಸಿದಷ್ಟು ಮರಳಿಗಿಂತ, ಹೆಚ್ಚಿನ ಮಟ್ಟದ ಮರಳು ಸಾಗಿಸುತ್ತಿದ್ದಾರೆಂಬ ದೂರು ಕೇಳಿ ಬಂದಿತ್ತು. ಸ್ಥಳೀಯರ ಮಾಹಿತಿ ಆದರಿಸಿ ಹೊಸಪೇಟೆ ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ್ ಹಾಗೂ ಸಿಬ್ಬಂದಿ ಸತ್ಯನಾರಾಯಣ ರೆಡ್ಡಿ, ಮೊಹಮ್ಮದ್ ಶರೀಫ್ ಸಾಬ್ ಸಹಭಾಗಿತ್ವದಲ್ಲಿ ಇಟ್ಟಿಗಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 3 ಲಾರಿ ಮತ್ತು ಕೂಡ್ಲಿಗಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2 ಸೇರಿ ಒಟ್ಟು 5 ಲಾರಿಗಳನ್ನು ವಶಪಡಿಸಿ ಕೊಂಡಿದ್ದಾರೆ. ಈ ಲಾರಿಗಳು ಮರಳು ಸಾಗಾಟಕ್ಕೆ ಯಾವುದೇ ಪರವಾನಿಗೆ ಪಡೆದಿಲ್ಲ. 8 ಟನ್‌ ಸಾಮರ್ಥ್ಯದ ಲಾರಿಯಲ್ಲಿ 12 ಟನ್‌ ಮರಳು ಸಾಗಾಟ ಮಾಡುತ್ತಿದ್ದರು. ಅಲಬೂರು ಗ್ರಾಮದ ಹತ್ತಿರ ಇರುವ ಮರಳು ಸಂಗ್ರಹ ಕೇಂದ್ರದಿಂದ ಮರಳು ಸಾಗಿಸಲಾಗುತ್ತಿರುವುದು ಗಮನಕ್ಕೆ ಬಂದಿದೆ, ಇನ್ನೂ ಲಾರಿಗಳು ಇದೇ ರೀತಿ ಮರಳು ಸಾಗಿಸುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಆರ್‌ಟಿಒ ಅಧಿಕಾರಿಗಳು ತಿಳಿಸಿದ್ದಾರೆ.