ಸಾರಾಂಶ
ವಿಶೇಷ ವರದಿ ಕನ್ನಡಪ್ರಭ ವಾರ್ತೆ ಮುಳಗುಂದಸಮೀಪದ ಹೊಸೂರು ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಎಗ್ಗಿಲ್ಲದೆ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.ಸಾವಿರಾರು ಟ್ರಿಪ್ ಮಣ್ಣನ್ನು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಳಸಿಕೊಂಡು ಸರಕಾರಕ್ಕೆ ಲಕ್ಷಾಂತರ ರು. ಪಂಗನಾಮ ಹಾಕಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೊಸೂರ ಸಮೀಪದ ಗುಡ್ಡದ ಸರ್ವೇ ನಂ. 125/ಬಿ 5 ಎಕರೆಗಳ ಪೈಕಿ 2.20 ಎಕರೆ ವಿಸ್ತೀರ್ಣದ ಕೃಷಿ ಜಮೀನನ್ನು ಅಭಿವೃದ್ಧಿಪಡಿಸುವ ಸಲುವಾಗಿ ಈ ಭೂಮಿಯಲ್ಲಿ 20000 ಮೆ.ಟನ್ ಮುರಂ ಸಾಗಾಣಿಕೆ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯವರಿಂದ ಅನುಮತಿ ಪಡೆಯಲಾಗಿತ್ತು. ಮೂರು ತಿಂಗಳೊಳಗೆ ಮಣ್ಣು ತೆಗೆಯಲು ಪರವಾನಗಿ ಪಡೆದುಕೊಳ್ಳಲಾಗಿತ್ತು. ಆದರೆ ಅದು ಸಾಧ್ಯವಾಗದ ಕಾರಣ ಅದನ್ನು ನವೀಕರಣಗೊಳಿಸಿ 30.6.2025ರ ವರೆಗೆ ಪರವಾನಗಿ ನೀಡಲಾಗಿದೆ. ಆದರೆ ಇಷ್ಟರಲ್ಲೇ ಅಂದಾಜು 60000 ಮೆ.ಟನ್ ಗಿಂತ ಹೆಚ್ಚು ಮುರ್ರಂ ಸಾಗಾಣಿಕೆ ಮಾಡಲಾಗಿದೆ. ಈ ಜಮೀನಿನಲ್ಲಿ ಸಾಕಷ್ಟು ಆಳಕ್ಕೆ ಮಣ್ಣು ತೆಗೆಯಲಾಗಿದೆ. ಮುರ್ರಂ ತೆಗೆಯುವಾಗ ಜನ ಜಾನುವಾರುಗಳಿಗೆ ತೊಂದರೆಯಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿಯಮವಿದ್ದರೂ ಅದು ಯಾವುದು ಇಲ್ಲಿ ನಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಪರವಾನಗಿ 2.20 ಎಕರೆಗೆ ಮಾತ್ರ
ಪರವಾನಗಿ ಪಡೆದಿದ್ದು 2.20 ಎಕರೆ ಆದರೆ ಅಗೆದಿದ್ದು 5 ಎಕರೆಗೂ ಅಧಿಕ. ಇಷ್ಟೆಲ್ಲಾ ಅಕ್ರಮ ನಡೆದರೂ ಈ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡದಿರುವದು ವಿಶೇಷ. ಇದನ್ನೆಲ್ಲ ಗಮನಿಸಿದಾಗ ಅಧಿಕಾರಿಗಳು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ರಾಜಕಾರಣಿಗಳ ಕೈವಾಡ ಇರುವದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರಿಂದ ಅಕ್ಕಪಕ್ಕದ ಜಮೀನುಗಳ ಮಾಲೀಕರು ಆಕ್ಷೇಪ ಎತ್ತಿದರೂ ಗುತ್ತಿಗೆದಾರ ಕ್ಯಾರೆ ಎಂದಿಲ್ಲ. ಅವಧಿಯ ನಿಯಮ ಉಲ್ಲಂಘನೆ: ಸರಕಾರದ ಆದೇಶದ ಪ್ರಕಾರ ಕೊಟ್ಟಿರುವ ನಿಯಮದಲ್ಲಿ ಅಂದಾಜಿಸಿರುವ ಖನಿಜ ಅಥವಾ ಪರವಾನಗಿಯ ಅವಧಿ ಇದರಲ್ಲಿ ಯಾವುದು ಮೊದಲು ಪೂರ್ಣಗೊಳ್ಳುತ್ತದೆಯೇ ಅಲ್ಲಿಗೆ ಆದೇಶದ ಅವಧಿ ಮುಕ್ತಾಯಗೊಳ್ಳುತ್ತದೆ ಎಂದಿದ್ದರೂ ನಿಯಮ ಮೀರಿ ಇಲ್ಲಿಯವರೆಗೂ ಸಾಗಾಣಿಕೆ ಮಾಡಲಾಗುತ್ತಿದೆ. ಈ ಜಮೀನು ಎತ್ತರವಾದ ಗುಡ್ಡ ಪ್ರದೇಶವಾಗಿದ್ದು, ಈ ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಅಗೆದು ತೆಗೆಯಲಾಗಿದೆ. ಇದೊಂದು ಭಾರೀ ಪ್ರಮಾಣದ ಅಕ್ರಮವಾಗಿದ್ದು, ಇದರಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದರೆಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ. ಇದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ನನಗೆ ಕಾರಣಾಂತರಗಳಿಂದ ಭೇಟಿ ನೀಡಲಾಗಿರುವುದಿಲ್ಲ. ನಮ್ಮ ಕಂದಾಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದೇನೆ. ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತೇನೆ, ಆದೇಶ ಉಲ್ಲಂಘನೆಯಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹೇಳಿದರು.