ಸಾರಾಂಶ
- ಹಾನಿಗೀಡಾದ ಕಟ್ಟಡಗಳ ವೀಕ್ಷಿಸಿ ವಿನಯಕುಮಾರ್- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಕಲ್ಲು ಕ್ವಾರೆಗಳಿಂದ ನಿವಾಸಿಗಳಿಗೆ ಹಲವು ಸಮಸ್ಯೆಗಳು ಕಾಡುತ್ತಿವೆ. ಈ ಬಗ್ಗೆ ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಸ್ಥಳಕ್ಕೆ ಭೇಟಿ, ಕೂಡಲೇ ಅಕ್ರಮ ಗಣಿಗಾರಿಕೆ, ಕಾನೂನುಬಾಹಿರ ಕ್ರಷರ್ ಸ್ಥಗಿತಕ್ಕೆ ಒತ್ತಾಯಿಸಿದರು.ಊರಿನ ಸಮಸ್ಯೆ ಅಧಿಕಾರಿಗಳು ಹತ್ತಿರದಿಂದ ಗಮನಿಸಿದ್ದಾರೆ. ನಾನು ಹಲವು ಶಾಲೆಗಳಿಗೆ ಭೇಟಿ ನೀಡಿದ್ದು, ಧೂಳಿನಿಂದಾಗಿ ಮಕ್ಕಳು ನೆಮ್ಮದಿಯಿಂದ ಪಾಠ ಕಲಿಯಲು ಆಗುತ್ತಿಲ್ಲ. ಕೆಂಚಿಕೊಪ್ಪ ಗ್ರಾಮ ಪಂಚಾಯಿತಿಯ ಆರುಂಡಿ ಗ್ರಾಮ ವ್ಯಾಪ್ತಿಯ ಕಲ್ಲಿನ ಕ್ವಾರಿ ಹಾಗೂ ಗಣಿಗಾರಿಕೆ ಕಾನೂನುಬಾಹಿರವಾಗಿದೆ. ಕ್ವಾರಿ ವಾಹನಗಳಿಂದ ಗ್ರಾಮದ ರಸ್ತೆ ಹಾಳಾಗಿದೆ. ಧೂಳಿನಿಂದ ವಿದ್ಯಾರ್ಥಿಗಳು, ಗ್ರಾಮಸ್ಥರಿಗೆ ಅನಾನುಕೂಲವಾಗುತ್ತಿದೆ. ಬೆಳೆಗಳು ಧೂಳಿನಿಂದ ಹಾಳಾಗಿವೆ. ನೀರು ಕುಡಿಯಲು ಯೋಗ್ಯವಾಗಿಲ್ಲ. ಅಂತರ್ಜಲ ಮಟ್ಟವೂ ಕುಸಿದಿದೆ. ದೇವಸ್ಥಾನಗಳು ಹಾಗೂ ಆರುಂಡಿ ವಾಸದ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಜನರಲ್ಲಿ ಆತಂಕ ಕಾಡುತ್ತಿದೆ ಎಂದು ಆರೋಪಿಸಿದರು.
ಕ್ಯಾರೆಗಳಲ್ಲಿ ಯಾವುದೇ ತಡೆಗೋಡೆ ಇಲ್ಲ. ಮರ-ಗಿಡಗಳನ್ನು ಬೆಳೆಸಿಲ್ಲ. ತಂತಿ ಬೇಲಿ ಹಾಕುವುದೂ ಸೇರಿದಂತೆ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಸ್ಫೋಟಕಗಳಿಂದಾಗಿ ಜನರಲ್ಲಿ ಶ್ರವಣಶಕ್ತಿ ಕುಂದಿದೆ. ಧೂಳಿನಿಂದ ಉಸಿರಾಟದ ತೊಂದರೆ ಆಗುತ್ತಿದೆ. ಚರ್ಮರೋಗಗಳು ಬಾಧಿಸುತ್ತಿವೆ. ಈ ಎಲ್ಲ ಸಮಸ್ಯೆಗಳ ಪರಿಗಣಿಸಿ ಅಧಿಕಾರಿಗಳು ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಕ್ರಷರ್ ನಿಲ್ಲಿಸುವಂತೆ ಈ ಹಿಂದೆ ಗ್ರಾಮದ ವ್ಯಾಪ್ತಿಯ ಎಲ್ಲ ಕಲ್ಲು ಕ್ವಾರಿಗಳ ಲಾರಿಗಳು, ಹಿಟಾಚಿ ವಾಹನಗಳನ್ನು ಊರಿನ ಮುಂದೆ ನಿಲ್ಲಿಸಿ, ಪ್ರತಿಭಟನೆ ಮಾಡಲಾಗಿದೆ. ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಹಸೀಲ್ದಾರ್ ಅವರನ್ನು ಗ್ರಾಮಕ್ಕೆ ಕರೆಯಿಸಿ ಮನವಿ ನೀಡಿದ್ದಾರೆ. ಆದರೆ ಅಧಿಕಾರಿಗಳು ಇನ್ನೂ ಕ್ರಮ ತೆಗೆದುಕೊಳ್ಳದಿರುವುದು ಬೇಸರದ ಸಂಗತಿ ಎಂದು ವಿನಯ್ ಕುಮಾರ್ ತಿಳಿಸಿದರು.
ಈ ಸಂದರ್ಭ ಗ್ರಾಮದ ಮುಖಂಡರು, ಮಹಿಳೆಯರು, ಯುವಕರು, ಯುವತಿಯರು ಹಾಜರಿದ್ದು, ಕ್ವಾರಿಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ಖಂಡಿಸಿದರು.- - - -20ಎಚ್.ಎಲ್.ಐ2:
ಆರುಂಡಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಿಷೇಧಿಸಲು ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದರು.