ಸಾರಾಂಶ
ಉಪ ಲೋಕಾಯುಕ್ತ ನ್ಯಾಯಮೂರ್ತಿ ಕ್ರಮ । ಅನುಮತಿ ನೀಡಿದ ಪ್ರದೇಶಕ್ಕಿಂತಲೂ ಹೆಚ್ಚು ಒತ್ತುವರಿಗೆ ಕಿಡಿ
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಜಿಲ್ಲೆಯಲ್ಲಿ ಕಾನೂನುಬಾಹಿರ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಅನುಮಾನವಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿರುದ್ಧ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲು ಮಾಡಿ, ತನಿಖೆ ಕೈಗೊಳ್ಳಲಿದ್ದೇವೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಚಾಟಿ ಬೀಸಿದರು.
ತಾಲೂಕಿನ ಕುರ್ಕಿ ಸಮೀಪದ ಹಿರೇತೊಗಲೇರಿ, ಹೆಬ್ಬಾಳ್ ಸಮೀಪದ ಪಂಜೇನಹಳ್ಳಿ ಅರಣ್ಯದಂಚಿನ ಕಲ್ಲು ಗಣಿಗಾರಿಕೆ ಕ್ವಾರಿಗಳನ್ನು ಗುರುವಾರ ಬೆಳಿಗ್ಗೆ ವೀಕ್ಷಿಸಿದ ನಂತರ ಕುರ್ಕಿ ಸಮೀಪದ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದು, ಇಲ್ಲಿ 7ಕ್ಕೆ ಅನುಮತಿ ನೀಡಲಾದ ಪ್ರದೇಶಕ್ಕಿಂತ ಹೆಚ್ಚು ಒತ್ತುವರಿ ಮಾಡಿರುವುದನ್ನು ಗಮನಿಸಿದ ನಂತರ ಇಲಾಖೆ ವಿರುದ್ಧ ಲೋಕಾಯುಕ್ತದಲ್ಲಿ ಸ್ವಯಂ ಪ್ರೇರಿತ ದೂರು ದಾಖಲು ಮಾಡಿ, ತನಿಖೆ ಕೈಗೊಳ್ಳಲಿದ್ದೇವೆ ಎಂದರು.ಹಿರೇ ತೊಗಲೇರಿಯಲ್ಲಿ 7 ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದೆ. ಕೆಲ ಕಡೆ 100 ಅಡಿಗಿಂತಲೂ ಹೆಚ್ಚು ಆಳಕ್ಕೆ ಕಲ್ಲು ಗಣಿಗಾರಿಕೆ ಮಾಡಿದ್ದಾರೆ. ಆದರೆ, ಇಷ್ಟು ಆಳ ಮಾಡಿದರೆ ಮುಂದೆ ಮುಚ್ಚುವುದು ಹೇಗೆಂಬ ಅರಿವು ಸಹ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಇಲ್ಲದಿದ್ದರೆ ಹೇಗೆ? ಕಲ್ಲು ಗಣಿಗಾರಿಕೆ ಮಾಡುವವರು ಇಲ್ಲಿ ಬ್ಲಾಸ್ಟಿಂಗ್, ಕ್ವಾರಿಯಲ್ಲಿ ಬ್ಲಾಸ್ಟಿಂಗ್ ಸಹ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಹೆಬ್ಬಾಳ್ ಸಮೀಪದ ಪಂಜೇನಹಳ್ಳಿ ಅರಣ್ಯದಂಚಿನ ಗಣಿಗಾರಿಕೆ ಕ್ವಾರಿಗೆ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ, ಅದನ್ನು ಅಲ್ಲಿ ನಿಲ್ಲಿಸಿದ್ದು, ಕ್ರಷರ್ ಮಾತ್ರ ನಡೆಸುತ್ತಿರುವ ವಿಚಾರ ತಿಳಿಸಿದರು. ಆದರೆ, ಗಣಿಗಾರಿಕೆ ನಡೆಸಿದ ಸ್ಥಳವನ್ನು ಮಣ್ಣಿನ ಮುಚ್ಚಿ, ಗಿಡ, ಮರಗಳನ್ನು ಹಾಕಬೇಕು ಎಂದು ಸೂಚಿಸಿದರು.ಲೋಕಾಯುಕ್ತ ಅಪರ ನಿಬಂಧಕ ಕೆ.ಎಂ.ರಾಜಶೇಖರ, ಉಪ ನಿಬಂಧಕ ಎನ್.ವಿ.ಅರವಿಂದ, ವಿ.ಎನ್.ಮಿಲನ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ.ಕರಣ್ಣನವರ, ಪ್ರಭಾರ ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ, ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ, ಹಿರಿಯ ಭೂ ವಿಜ್ಞಾನಿ ರಶ್ಮಿ, ವಿವಿಧ ಇಲಾಖೆ ಅಧಿಕಾರಿಗಳು, ಸ್ಥಳೀಯ ಗ್ರಾಮಸ್ಥರು ಇದ್ದರು.
128 ಕಲ್ಲು ಗಣಿಗೆ 270.12 ಎಕರೆ ಪ್ರದೇಶ ಗುತ್ತಿಗೆಜಿಲ್ಲೆಯಲ್ಲಿ ಕಲ್ಲುಗಣಿಗಾರಿಕೆಗೆ ಗುತ್ತಿಗೆಯಡಿ 128 ಕಲ್ಲು ಗಣಿ ಗುತ್ತಿಗೆ ನೀಡಿದ್ದು, 270.12 ಎಕರೆ ಪ್ರದೇಶವಿದೆ. ಇದರಲ್ಲಿ ಪ್ರಸ್ತುತ ಪಟ್ಟಾ ಭೂಮಿಯಲ್ಲಿ 75ಕ್ಕೆ ಅನುಮತಿ ನೀಡಿದ್ದು, ಇದರಲ್ಲಿ 21 ಸ್ಥಗಿತವಾಗಿ 54 ಕ್ವಾರಿ ಮಾತ್ರ ನಡೆಯುತ್ತಿವೆ.
ಸರ್ಕಾರಿ ಜಾಗದಲ್ಲಿ 53ಕ್ಕೆ ಅನುಮತಿ ನೀಡಿದ್ದು, ಇದರಲ್ಲಿ 21 ಸ್ಥಗಿತವಾಗಿ 32 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ದಾವಣಗೆರೆ ತಾ.ನಲ್ಲಿ 57ಕ್ಕೆ 149.35 ಎಕರೆಗೆ ಅನುಮತಿ ನೀಡಿದ್ದು, ಪಟ್ಟಾ ಭೂಮಿಯಲ್ಲಿ 44ರಲ್ಲಿ 14 ಸ್ಥಗಿತವಾಗಿ 30 ನಡೆಯುತ್ತಿವೆ. ಸರ್ಕಾರಿ ಭೂಮಿಯಲ್ಲಿ 13ರಲ್ಲಿ 9 ನಡೆಯುತ್ತಿವೆ.ಜಗಳೂರು ತಾ.ನಲ್ಲಿ 4ಕ್ಕೆ 10.02 ಎಕರೆ ಪ್ರದೇಶಕ್ಕೆ ಅನುಮತಿ ನೀಡಿದ್ದು, ಪಟ್ಟಾ ಭೂಮಿಯಲ್ಲಿ 2, ಸರ್ಕಾರಿ ಜಾಗದಲ್ಲಿ ನೀಡಿದ 2 ಕ್ವಾರಿ ಸ್ಥಗಿತವಾಗಿವೆ. ಚನ್ನಗಿರಿಯ ಪಟ್ಟಾ ಭೂಮಿಯಲ್ಲಿ ನೀಡಲಾದ 3ರಲ್ಲಿ 1 ಸ್ಥಗಿತವಾಗಿದೆ. ಹೊನ್ನಾಳಿಯ 10 ಪಟ್ಟಾ ಭೂಮಿಯಲ್ಲಿ 3 ಸ್ಥಗಿತವಾಗಿದ್ದು, 7 ನಡೆಯುತ್ತಿವೆ. ಸರ್ಕಾರಿ ಭೂಮಿಯಲ್ಲಿ ನೀಡಲಾದ 6ರಲ್ಲಿ 1 ಸ್ಥಗಿತವಾಗಿ 5 ನಡೆಯುತ್ತಿವೆ. ನ್ಯಾಮತಿಯಲ್ಲಿ 16 ಪಟ್ಟಾ ಭೂಮಿಯಲ್ಲಿ 3 ಸ್ಥಗಿತವಾಗಿ, 13 ಕ್ವಾರಿ ಮಾತ್ರ ನಡೆಯುತ್ತಿವೆ. ಹರಿಹರ ತಾಲೂಕಿನಲ್ಲಿ ಯಾವುದೇ ಕಲ್ಲು ಗಣಿಗಾರಿಕೆಗೆ ಗುತ್ತಿಗೆ ನೀಡಿಲ್ಲ ಎಂದು ಗಣಿ ಇಲಾಖೆ ಅಧಿಕಾರಿಗಳು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರ ಗಮನಕ್ಕೆ ತಂದರು.