ಸಾರಾಂಶ
ಕಾರ್ಕಳ ತಾಲೂಕಿನ ಅಜೆಕಾರು ಗ್ರಾಮದಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು 100 ಚೀಲ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ ತಾಲೂಕಿನ ಅಜೆಕಾರು ಗ್ರಾಮದಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು 100 ಚೀಲ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ.ಮರ್ಣೆ ಗ್ರಾ.ಪಂ. ವ್ಯಾಪ್ತಿಯ ಅಂಗಡಿಯೊಂದರ ಮಾಲೀಕ ಪಡಿತರ ಅಕ್ಕಿಯನ್ನು ಗ್ರಾಹಕರಿಂದ ಅತೀ ಕಡಿಮೆ ಬೆಲೆಗೆ ಖರೀದಿಸಿ, ಬಳಿಕ ದುಪ್ಪಟ್ಟು ಬೆಲೆಗೆ ರೈಸ್ ಮಿಲ್ ಮತ್ತು ಇತರೆ ಖಾಸಗಿ ರಖಂ ಖರೀದಿದಾರರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯಲ್ಲಿ ಅಕ್ರಮವಾಗಿ ಅಕ್ಕಿಯನ್ನು ದಾಸ್ತಾನು ಮಾಡಿದ್ದರೆಂದು ತಿಳಿದುಬಂದಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಕಳ ಆಹಾರ ಇಲಾಖೆಯ ಆಹಾರ ನಿರೀಕ್ಷಕಿ ಸುಮತಿ ಅವರ ನೇತೃತ್ವದ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದು, ಅಂಗಡಿಗೆ ಅಂಟಿಕೊಂಡಿರುವ ಗೋಡೌನ್‌ನಲ್ಲಿ ಪಡಿತರ ಅಕ್ಕಿಯ 100ಕ್ಕೂ ಹೆಚ್ಚು ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.ದಾಳಿ ನಡೆದ ತಕ್ಷಣ ಅಂಗಡಿ ಮಾಲೀಕ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಆಹಾರ ನಿರೀಕ್ಷಕಿ ಸುಮತಿ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.