ಸಾರಾಂಶ
- ಶ್ರೀಮಠದ ಪ್ರತಿನಿಧಿಗಳು, ಕಣ್ವಮಠದ ವಿವಿಧ ಸಂಘ ಸಂಸ್ಥೆಗಳಿಂದ ಡಿಸಿಗೆ ಮನವಿ
------ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಹುಣಸಿಹೊಳೆಯ ಶ್ರೀಮದ್ ಕಣ್ವಮಠ ಮೂಲ ಮಹಾ ಸಂಸ್ಥಾನ ಮಠದ ಜಮೀನುಗಳ ಹಕ್ಕು ವರ್ಗಾವಣೆಯನ್ನು 2015 ರಿಂದ 2018ನೇ ಸಾಲಿನಲ್ಲಿ ಅಕ್ರಮವಾಗಿ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕಣ್ವ ಮಠದ ವಿವಿಧ ಸಂಘ ಸಂಸ್ಥೆಗಳ ಸದಸ್ಯರಿಂದ ಜಿಲ್ಲಾಧಿಕಾರಿಗಳ ಭೇಟಿಯಾಗಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕಣ್ವಮಠಕ್ಕೆ 200 ವರ್ಷಗಳ ಇತಿಹಾಸವಿದೆ. ಕಣ್ವಮಠದ ಜಮೀನಿನ ಹಕ್ಕು ವರ್ಗಾವಣೆಯಲ್ಲಿ 2015 ರಿಂದ 2018 ನೇ ಸಾಲಿನಲ್ಲಿ ಅಧಿಕಾರಿಗಳು ಆಗಿನ ಪೀಠಾಧಿಪತಿಗಳೊಂದಿಗೆ ಶಾಮೀಲಾಗಿ ಜಮೀನುಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ಆಗಿನ ಅಧಿಕಾರಿಗಳು ಕಂದಾಯ ಅಧಿನಿಯಮದ ನಿಯಮಗಳನ್ನು ಗಾಳಿಗೆ ತೂರಿ ಕರ್ನಾಟಕದ ಸುತ್ತೋಲೆ ಸಂ/ಕ/ಇ/18ಗೆ ಬೆಲೆ ಕೊಡದೆ ಸುಮಾರು 70ಕ್ಕೂ ಹೆಚ್ಚು ಎಕರೆ ಜಮೀನನ್ನು ಅಕ್ರಮ ಹಕ್ಕು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕಣ್ವಮಠವು ದೇಶಾದ್ಯಂತ ಲಕ್ಷಾಂತರ ಭಕ್ತ ಸಮೂಹ ಹೊಂದಿದ್ದ ಧಾರ್ಮಿಕ ಸಮೂಹ ಆಗಿದ್ದರೂ, ಇಂತಹ ಧಾರ್ಮಿಕ ಸಂಸ್ಥೆಗಳ ಈ ರೀತಿ ಅಕ್ರಮ ಹಕ್ಕು ವರ್ಗಾವಣೆಯಾದರೆ ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಹೇಗಿರಬಾರದು. ಅಲ್ಲದೆ ಇನ್ನೂ ಎಷ್ಟು ಜಮೀನುಗಳ ಅಕ್ರಮ ಹಕ್ಕು ವರ್ಗಾವಣೆ ಆಗಿರುಬಹುದು ಎಂಬ ಅನುಮಾನ ಜನಸಾಮಾನ್ಯರಲ್ಲಿ ಮೂಡಿದೆ ಎಂದು ದೂರಿದರು.ಜಮೀನು ವರ್ಗಾವಣೆ ಮಾಡಿದ ಅಧಿಕಾರಿಗಳ ವಿರುದ್ಧ ಕರ್ನಾಟಕ ನಾಗರಿಕ ಸೇವಾ (ನಡತೆ) ಅಧಿನಿಯಮದಡಿಯಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮ ಹಕ್ಕು ವರ್ಗಾವಣೆ ರದ್ದುಪಡಿಸಬೇಕು. ಇಲ್ಲದಿದ್ದರೆ ಜನಸಾಮಾನ್ಯರ ಪರ ಹಾಗೂ ಕಣ್ವಮಠದ ಪರವಾಗಿ ಕಣ್ವಮಠದ ಸಮಾಜದ ವತಿಯಿಂದ ಉಗ್ರ ಪ್ರತಿಭಟನೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಮ್ಮಿ ಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಖಿಲ ಭಾರತ ಕಣ್ವ ಪರಿಷದ್ ರಾಷ್ಟ್ರೀಯ ಅಧ್ಯಕ್ಷ ಮನೋಹರ ಮಡಿಗೇರಿ, ಉಪಾಧ್ಯಕ್ಷ ರಂಗನಾಥ ಜೋಶಿ ಪುಣೆ, ಕಣ್ವ ಮಠದ ವಕೀಲರಾದ ಪ್ರಶಾಂತ್ ಕುಲ್ಕರ್ಣಿ ಸಿಂಧನೂರು, ಬೆಂಗಳೂರು ಶುಕ್ಲ ಯಜುರ್ವೇದ ಶಾಖಾ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ, ಚಿಂತಾಮಣಿ ಯೋಗೇಶ್ವರ ಯಾಜ್ಞವಲ್ಯ್ಕ ಟ್ರಸ್ಟ್‌ನ ಅಧ್ಯಕ್ಷ ಎನ್. ನಾಗರಾಜ್ ಸೇರಿದಂತೆ ಕಣ್ವ ಮಠದ ಮುಖಂಡರು ಇದ್ದರು.----
10ವೈಡಿಆರ್18 : ಸುರಪುರ ತಾಲೂಕು ಹುಣಸಿಹೊಳಿ ಶ್ರೀಕಣ್ವಮಠದ ಜಮೀನು ಅಕ್ರಮವಾಗಿ ವರ್ಗಾವಣೆ ಮಾಡಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶ್ರೀಮಠದ ಪ್ರತಿನಿಧಿಗಳು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.