ಅಕ್ರಮ ಎತ್ತುಗಳ ಸಾಗಾಟ : ದೂರು, ಪ್ರತಿದೂರು ದಾಖಲು

| Published : Apr 23 2024, 12:45 AM IST

ಸಾರಾಂಶ

ಅಕ್ರಮವಾಗಿ ಎತ್ತುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಲಾರಿ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು, ಪ್ರತಿದೂರು ದಾಖಲಾಗಿವೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಕ್ರಮವಾಗಿ ಎತ್ತುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಲಾರಿ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು, ಪ್ರತಿದೂರು ದಾಖಲಾಗಿವೆ.

ಬೆಳಗಾವಿ ಶಹಪೂರ ಪ್ರದೇಶದ ವೀರಾಪೂರ ಗಲ್ಲಿಯ ಭರತ ಗುಂಡು ನಾವಗೆ ಎಂಬಾತ ಕೇರಳದ ಕಾಸರಗೋಡ ಮೂಲದ ಲಾರಿ ಚಾಲಕ ಸುನೀಲಕುಮಾರ ಹಾಗೂ ಕ್ಲಿನರ್‌ ಉಮರ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಾರಾಷ್ಟ್ರದಿಂದ ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿ ಕಡಗೆ ಹೊರಟ್ಟಿದ್ದ ಕಂಟೇನರ್‌ ಇಲ್ಲಿನ ಸುವರ್ಣ ವಿಧಾನ ಸೌಧದ ಹತ್ತಿರ ತಡೆದು ಪರಿಶೀಲನೆ ನಡೆಸಿದ ಸಮಯದಲ್ಲಿ ಕಂಟೆನರಲ್ಲಿ 25 ಎತ್ತುಗಳನ್ನು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೇ ಹಾಗೂ ಎತ್ತುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೂ ಲಾರಿ ಚಾಲಕ ಸುನೀಲಕುಮಾರ ಸುಮಾರು 50ಕ್ಕೂ ಹೆಚ್ಚು ಜನರು ಕೈಯಲ್ಲಿ ಬಡಿಗೆಗಳನ್ನು ಹಿಡಿದು ಸುವರ್ಣ ವಿಧಾನ ಸೌಧದ ಎದುರಿಗೆ ತಡೆದು ಚಾಲಕ ಹಾಗೂ ಕ್ಲಿನರನ್ನು ವಾಹನದಿಂದ ಕೆಳಗೆ ಇಳಿಸಿ ಎತ್ತುಗಳ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಿರಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ ಹಲ್ಲೆ ಮಾಡಿ ಜೀವ ಬೇದರಿಕೆ ಹಾಕಲಾಗಿದೆ ಎಂದು ಲಾರಿ ಚಾಲಕ ಪ್ರತಿದೂರು ನೀಡಿದ್ದಾನೆ.

ಈ ದೂರು ಪ್ರತಿ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಹೀರೆಬಾಗೇವಾಡಿ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಬಾಕ್ಸ್...

ಪೊಲೀಸರು-ಯುವಕರ ಗುಂಪಿನ ಮಧ್ಯೆ ಮಾತಿನ ಚಕಮಕಿ

ಎತ್ತುಗಳನ್ನು ಸಾಗಾಟ ಮಾಡುತ್ತಿದ್ದ ಕಂಟೆನರನ್ನು ಬೆಳಗಾವಿ ಸುವರ್ಣ ವಿಧಾನ ಸೌಧದ ಎದುರು ರಾಷ್ಟ್ರೀಯ ಹೆದ್ದಾರಿ ಮೇಲೆ ಸುಮಾರು 50ಕ್ಕೂ ಹೆಚ್ಚು ಯುವಕರ ಗುಂಪು ತಡೆದ್ದಾರೆ. ಬಳಿಕ ಲಾರಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಚಾಲಕ ಮತ್ತು ಕ್ಲಿನರನ್ನು ಹಲ್ಲೆ ಮಾಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಚಾಲಕ ಹಾಗೂ ಕ್ಲಿನರನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಕಂಟೆನರಲ್ಲಿದ್ದ ಎತ್ತುಗಳನ್ನು ವಾಹನದಿಂದ ಕೆಳಗೆ ಇಳಿಸಲು ಯುವಕರ ತಂಡ ಮುಂದಾಗಿದೆ. ತಕ್ಷಣ ಪೊಲೀಸರು ವಾಹನದ ಸುತ್ತುವರೆದು ಯುವಕರನ್ನು ತಡೆದಿದ್ದಾರೆ. ಇದರಿಂದ ಪೊಲೀಸರು ಹಾಗೂ ಯುವಕರ ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಅವರು ಯುವಕರನ್ನು ಮನವೊಲಿಸಿದರು. ಬಳಿಕ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸುವಂತೆ ಪೊಲೀಸರಿಗೆ ತಿಳಿಸಿದರು. ಏಕಾಏಕಿ ನಡೆದ ಈ ಘಟನೆಯಿಂದ ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯುಂಟಾಗಿತ್ತು.