ಮುಂಬೈನಲ್ಲಿ ಆಭರಣ ತಯಾರಿಸಿಕೊಂಡು ಯಾವುದೇ ದಾಖಲೆ ಹಾಗೂ ಜಿಎಸ್‌ಟಿ ಇಲ್ಲದೇ ಹುಬ್ಬಳ್ಳಿಗೆ ತಂದು ಸ್ಥಳೀಯ ಆಭರಣಗಳ ಅಂಗಡಿಗಳಿಗೆ ಮಾರಲು ಯೋಜಿಸಿದ್ದ.

ಹುಬ್ಬಳ್ಳಿ:

ಹು-ಧಾ ಮಧ್ಯದಲ್ಲಿ ಸಿಸಿಬಿ ಹಾಗೂ ವಿದ್ಯಾಗಿರಿ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ದಾಖಲೆ ಇಲ್ಲದ ಆಭರಣ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದು, ಆತನಿಂದ ₹ 75 ಲಕ್ಷ ಮೌಲ್ಯದ 1.101 ಕೆಜಿ ಬಂಗಾರ ಹಾಗೂ 1.463 ಕೆಜಿ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.

ಗುರುವಾರ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಮಹಾನಿಂಗ ನಂದಗಾವಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ನಿವಾಸಿ ಅಭಿಷೇಕ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯು ಮುಂಬೈನಿಂದ ಹುಬ್ಬಳ್ಳಿಗೆ ಖಾಸಗಿ ಬಸ್‌ನಲ್ಲಿ ಆಭರಣಗಳನ್ನು ಸಾಗಿಸುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ಹು-ಧಾ ಮಧ್ಯದಲ್ಲಿ ತಪಾಸಣೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.

ಬಂಧಿತ ಆರೋಪಿ ನಗರದ ಕೋರಿಯರ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮುಂಬೈನಲ್ಲಿ ಆಭರಣ ತಯಾರಿಸಿಕೊಂಡು ಯಾವುದೇ ದಾಖಲೆ ಹಾಗೂ ಜಿಎಸ್‌ಟಿ ಇಲ್ಲದೇ ಹುಬ್ಬಳ್ಳಿಗೆ ತಂದು ಸ್ಥಳೀಯ ಆಭರಣಗಳ ಅಂಗಡಿಗಳಿಗೆ ಮಾರಲು ಯೋಜಿಸಿದ್ದನು ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದರು.

ಕಾರ್ಯಾಚರಣೆಯಲ್ಲಿ ಸಿಸಿಬಿ ಎಸಿಪಿ ಎಸ್‌.ಟಿ. ಒಡೆಯರ, ಸಿಸಿಬಿ ಪಿಐ ಪ್ರಭು ಗಂಗೇನಹಳ್ಳಿ, ವಿದ್ಯಾಗಿರಿ ಠಾಣೆ ಪಿಐ ಸಂಗಮೇಶ ದಿಡಿಗನಾಳ ಹಾಗೂ ಪೊಲೀಸ್‌ ಸಿಬ್ಬಂದಿ ಇದ್ದರು.