ಸಾರಾಂಶ
ಚಾಮರಾಜನಗರ ತಾಲೂಕಿನ ಬೋಗಾಪುರದಲ್ಲಿ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ 4 ಟ್ರ್ಯಾಕ್ಟರ್, ಜೆಸಿಬಿಯನ್ನು ತಹಸೀಲ್ದಾರ್ ಗಿರಿಜಾ ನೇತೃತ್ವದಲ್ಲಿ ಜಪ್ತಿ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೃಷಿ ಜಮೀನಿನಲ್ಲಿ ಯಾವುದೇ ಪರವಾನಗಿ ಇಲ್ಲದೇ ಜೆಸಿಬಿ ಮುಖಾಂತರ ನಾಲ್ಕು ಟ್ರಾಕ್ಟರ್‌ಗಳಿಗೆ ಮಣ್ಣು ಅಗೆದು ಸಾಗಿಸುತ್ತಿರುವ ಖಚಿತ ಮಾಹಿತಿ ಆಧರಿಸಿ, ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ಮಾಡಿ, ಜಪ್ತಿ ಪಡಿಸಿಕೊಂಡಿರುವ ಪ್ರಕರಣ ವರದಿಯಾಗಿದೆ. ತಾಲೂಕಿನ ಭೋಗಾಪುರ ವ್ಯಾಪ್ತಿಯಲ್ಲಿ ಜೆಸಿಬಿ ಮೂಲಕ ಟ್ರಾಕ್ಟರ್‌ಗೆ ಫಲವತ್ತಾದ ಮಣ್ಣುನ್ನು ಅಗೆದು ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ತಹಸೀಲ್ದಾರ್ ಗಿರಿಜಾ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಪ್ರಕರಣ ಪತ್ತೆಯಾಗಿದೆ. ತಕ್ಷಣ ಗಿರಿಜಾ ಅವರು ತಮ್ಮ ಸಿಬ್ಬಂದಿಯೊಂದಿಗೆ ಜೆಸಿಬಿ ಮತ್ತು ನಾಲ್ಕು ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿ, ಕುದೇರು ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜೆಸಿಬಿಗೆ ₹೫೦ ಸಾವಿರ ಹಾಗೂ ನಾಲ್ಕು ಟ್ರಾಕ್ಟರ್‌ಗಳಿಗೆ ತಲಾ ೧೦ ಸಾವಿರದಂತೆ ೪೦ ಸಾವಿರ ರು. ದಂಡ ಪಾವತಿಸಿಕೊಂಡು ವಾಹನವನ್ನು ಬಿಡುವಂತೆ ಸೂಚನೆ ನೀಡಿದ್ದಾರೆ. ಕಂದಾಯ ಇಲಾಖೆಯ ವತಿಯಿಂದ ಜಮೀನಿನ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲು ಆರ್‌ಟಿಸಿಯನ್ನು ಗಣಿ ಇಲಾಖೆಯವರು ಕೋರಿದ್ದು, ಕ್ರಮ ವಹಿಸುವುದಾಗಿ ತಹಸೀಲ್ದಾರ್ ಗಿರಿಜಾ ತಿಳಿಸಿದ್ದಾರೆ. ದಾಳಿಯಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರ್ ವಿನು, ರಾಜಸ್ವ ನಿರಿಕ್ಷಕ ರಾಜಶೇಖರ್, ಗ್ರಾಮ ಆಡಳಿತಾಧಿಕಾರಿ ಉಜ್ವಲ್, ಕಿರಣ್, ನಾಗರಾಜು, ಇತರರು ಇದ್ದರು.