ತಾಲೂಕಿನ ಮಾರಪ್ಪನಹಳ್ಳಿಯ ಸರ್ವೇ ನಂ 4ರಲ್ಲಿ ಸುಮಾರು 2.17 ಗುಂಟೆ ಗುಂಡು ತೋಪು ಇದ್ದು ಇದರಲ್ಲಿನ ಸುಮಾರು 25 ರಿಂದ 30 ಗುಂಟೆ ಜಮೀನಿನಲ್ಲಿದ್ದ ಮಣ್ಣನ್ನು ಅಕ್ರಮವಾಗಿ ಅಗೆದು ಬೇರೆಡೆಗೆ ಸಾಗಾಟ ಮಾಡಲಾಗಿದೆ ಎಂಬ ಗ್ರಾಮಸ್ಥರ ದೂರಿನ ಮೇರೆಗೆ ತಹಸೀಲ್ದಾರ್ ಎನ್. ಎ. ಕುಂಇ ಅಹಮದ್ ಮತ್ತು ಅವರ ತಂಡ ಸ್ಥಳ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಮಾರಪ್ಪನಹಳ್ಳಿಯ ಸರ್ವೇ ನಂ 4ರಲ್ಲಿ ಸುಮಾರು 2.17 ಗುಂಟೆ ಗುಂಡು ತೋಪು ಇದ್ದು ಇದರಲ್ಲಿನ ಸುಮಾರು 25 ರಿಂದ 30 ಗುಂಟೆ ಜಮೀನಿನಲ್ಲಿದ್ದ ಮಣ್ಣನ್ನು ಅಕ್ರಮವಾಗಿ ಅಗೆದು ಬೇರೆಡೆಗೆ ಸಾಗಾಟ ಮಾಡಲಾಗಿದೆ ಎಂಬ ಗ್ರಾಮಸ್ಥರ ದೂರಿನ ಮೇರೆಗೆ ತಹಸೀಲ್ದಾರ್ ಎನ್. ಎ. ಕುಂಇ ಅಹಮದ್ ಮತ್ತು ಅವರ ತಂಡ ಸ್ಥಳ ಪರಿಶೀಲನೆ ನಡೆಸಿದರು. ಮಾರಪ್ಪನಹಳ್ಳಿಯ ನಟರಾಜ್ ಎಂಬುವವರ ಮಕ್ಕಳಾದ ಯೋಗೀಶ್ ಈ ಕೃತ್ಯ ಎಸಗಿರುವ ವ್ಯಕ್ತಿಯಾಗಿದ್ದಾರೆಂದು ತಿಳಿದುಬಂದಿದೆ. ತಹಸೀಲ್ದಾರ್ ಸ್ಥಳ ಮಹಜರು ಮಾಡುವ ವೇಳೆ ಹಾಜರಿದ್ದ ಯೋಗೀಶ್ ಹಲವಾರು ವರ್ಷಗಳಿಂದ ತಮ್ಮ ಕುಟುಂಬದವರು ಈ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಕಾರಣ ತಾವು ಜಮೀನಿನಲ್ಲಿದ್ದ ಮಣ್ಣನ್ನು ತೆಗೆದು ಕೃಷಿಹೊಂಡ ನಿರ್ಮಿಸುವ ಬಗ್ಗೆ ಯೋಚನೆ ಮಾಡಿದ್ದೆ ಎಂದು ತಹಸೀಲ್ದಾರ್ ರಿಗೆ ತಿಳಿಸಿದರು. ಈ ಜಮೀನಿಗೆ ಸಂಬಂಧಿಸಿದಂತೆ ಜಮೀನು ತಮ್ಮದೇ ಎನ್ನುವುದಕ್ಕೆ ಯಾವುದಾದರೂ ಸರ್ಕಾರಿ ದಾಖಲೆ ಇದ್ದಲ್ಲಿ ಹಾಜರುಪಡಿಸಿ ಎಂದು ತಹಸೀಲ್ದಾರ್ ಅಹಮದ್, ಯೋಗೀಶ ಗೆ ಸೂಚಿಸಿದರು. ಆದರೆ ಯೋಗೀಶ್ ಈ ಜಮೀನಿಗೆ ಸಂಬಂಧಿಸಿದಂತೆ ತಮ್ಮಲ್ಲಿ ಯಾವುದೇ ದಾಖಲೆಗಳು ಇಲ್ಲ ಎಂದು ಹೇಳಿ, ತಮಗೆ ಅರಿವಿಲ್ಲದೇ ಈ ಕೃತ್ಯ ಎಸಗಿರುವುದಾಗಿ ದಂಡಾಧಿಕಾರಿಗಳ ಬಳಿ ಕ್ಷಮೆಯಾಚಿಸಿದರು. ಆದರೆ ತಹಸೀಲ್ದಾರ್ ಕ್ಷಮೆಯ ಮಾತೇ ಇಲ್ಲ. ಸುಮಾರು 25 ರಿಂದ 30 ಗುಂಟೆ ಜಮೀನಿನಲ್ಲಿ ಫಲವತ್ತಾದ ಮಣ್ಣನ್ನು ಅಕ್ರಮವಾಗಿ ಭೂಮಿಯಿಂದ ಅಕ್ರಮವಾಗಿ ತೆಗೆದಿದ್ದೂ ಅಲ್ಲದೇ ಅಕ್ರಮವಾಗಿ ಸಾಗಾಟ ಮಾಡಿರುವುದು ಅಕ್ಷಮ್ಯ ಅಪರಾಧ ಹಾಗಾಗಿ ಈ ಕುರಿತು ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ಸುಮಾರು ಸಾವಿರಕ್ಕೂ ಹೆಚ್ಚು ಲೋಡ್ ಮಣ್ಣನ್ನು ತೆಗೆಯಲಾಗಿದೆ. ಅಲ್ಲದೇ ಸಾಗಾಟ ಸಹ ಮಾಡಲಾಗಿದೆ. ಈ ಅಕ್ರಮಕ್ಕೆ ಕೈ ಜೋಡಿಸಿರುವ ಜೆಸಿಬಿ ಮತ್ತು ಟ್ರ್ಯಾಕ್ಟರ್ ಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಅವರ ಮೇಲೂ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಅಹಮದ್ ರೆವಿನ್ಯೂ ಅಧಿಕಾರಿ ಬಿ.ಎಂ.ಮಲ್ಲಿಕಾರ್ಜುನ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಭೂತೇಶ್ ಗೆ ಸೂಚನೆ ನೀಡಿದರು. ಈ ಪ್ರದೇಶದಲ್ಲಿ ಸುಮಾರು 2.17 ಗುಂಟೆ ಜಮೀನು ಗುಂಡು ತೋಪಿದೆ. ಇದು ಸರ್ಕಾರಿ ಜಮೀನಾಗಿದ್ದು ಸಾರ್ವಜನಿಕರ ಬಳಕೆಗೆ ಅನುಕೂಲವಾಗಿದೆ. ಹಾಗಾಗಿ ಸರ್ಕಾರಿ ಜಮೀನಿನಲ್ಲಿ ಆಶ್ರಯ ಯೋಜನೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಿಕೊಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಹಸೀಲ್ದಾರ್ ಕುಂಇ ಅಹಮದ್ ತಿಳಿಸಿದರು. ಸರ್ಕಾರಿ ಗುಂಡು ತೋಪಿನಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಬೇರೆಡೆ ಸಾಗಾಟ ಮಾಡಿದ ಆರೋಪ ಎದುರಿಸುತ್ತಿರುವ ಯೋಗೀಶ್ ತಮಗೆ ಇದು ಸರ್ಕಾರಿ ಜಮೀನೆಂಬ ಅರಿವು ಇಲ್ಲದೆ ಮಣ್ಣನ್ನು ತೆಗೆದಿದ್ದೇನೆ. ಈಗ ತಾನು ಮಾಡಿರುವುದು ತಪ್ಪೆಂದು ಅರಿವಾಗಿದೆ. ಹಾಗಾಗಿ ಜಮೀನಿನಲ್ಲಿ ತೆಗೆದಿರುವ ಮಣ್ಣನ್ನು ಪುನಃ ಆ ಪ್ರದೇಶಕ್ಕೆ ತುಂಬಿಸಿಕೊಡುವುದಾಗಿ ಯೋಗೀಶ್ ತಹಸೀಲ್ದಾರ್ ರಲ್ಲಿ ಮನವಿ ಮಾಡಿದರು. ಈ ಕುರಿತು ಯಾವುದೇ ಭರವಸೆ ನೀಡದ ತಹಸೀಲ್ದಾರ್ ರವರು ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.ಬಾಕ್ಸ್....ಮತ್ತೊಂದು ಪ್ರಕರಣ
ಸದರಿ ಯೋಗೀಶ್ ಇದೇ ಗ್ರಾಮದ ಬೇರೊಂದು ಸರ್ವೇ ನಂಬರ್ ನಲ್ಲೂ ಸಹ ಇದೇ ಪ್ರಕಾರ ಅಕ್ರಮವಾಗಿ ಮಣ್ಣನ್ನು ತೆಗೆದು ಬೇರರೆಡೆ ಸಾಗಿಸಿದ್ದಾರೆಂದು ದೂರಲಾಗಿದೆ. ಈ ಕುರಿತು ಮತ್ತೊಂದು ದಿನ ಸ್ಥಳ ಪರಿಶೀಲನೆ ನಡೆಸುವುದಾಗಿ ತಹಸೀಲ್ದಾರ್ ಕುಂಇ ಅಹಮದ್ ತಿಳಿಸಿದ್ದಾರೆ.