ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕು ಜೋಗಿಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ವಿಸ್ತರಣಾಧಿಕಾರಿಯು ನಿಯಮ ಬಾಹಿರವಾಗಿ ಕಾನೂನು ಉಲ್ಲಂಘನೆ ಮಾಡಿ ಚುನಾವಣೆ ನಡೆಸಿದ್ದಾರೆ ಎಂದು ಜೋಗಿಹಳ್ಳಿ ಹಾಲು ಉತ್ಪಾದಕರ ಸಂಘದ ಹಾಲುಮಲ್ಲಯ್ಯ ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನ. 10 ರಂದು ನಡೆಯುವ ತುಮಕೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಶಿರಾ ತಾಲೂಕಿನ ಜೋಗಿಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಮಂಗಳವಾರ ಚುನಾವಣೆ ನಡೆಯಿತು. ವಿಸ್ತರಣಾಧಿಕಾರಿ ಗಿರೀಶ್ ಸಮಕ್ಷಮದಲ್ಲಿ ಚುನಾವಣೆ ನಡೆಯಿತು. 11 ಜನ ಸದಸ್ಯ ಬಲದ ಸಂಘದಲ್ಲಿ ಹಾಲು ಮಲ್ಲಯ್ಯ ಪರ 6 ಮತ ಚಲಾವಣೆಯಾದರೆ, ಪ್ರತಿಸ್ಪರ್ಧಿ ಬಾಳಯ್ಯ 5 ಮತ ಪಡೆದರು. ವಿಸ್ತರಣಾಧಿಕಾರಿಗೆ ಮತ ಚಲಾಯಿಸಲು ಅವಕಾಶ ಇದ್ದ ಕಾರಣ ಬಾಲಯ್ಯಗೆ ಒಂದು ಮತ ಹಾಕಿದರು. ಆಗ ಇಬ್ಬರಿಗೂ ಸಮಬಲವಾಯಿತು. ಸಭೆಯಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಸಮವಾದ ಕಾರಣ ವಿಸ್ತರಣಾಧಿಕಾರಿ ಸ್ಪರ್ಧಿಯಾಗಿದ್ದ ಬಾಳಯ್ಯಗೆ ಮತ್ತೆ ಮತ ಚಲಾಯಿಸಲು ಅವಕಾಶ ಕೊಟ್ಟಿದ್ದು ಇದು ಕಾನೂನು ಉಲ್ಲಂಘನೆ ಜೊತೆಗೆ, ನಿಯಮಬಾಹಿರವಾಗಿ ಒಬ್ಬ ವ್ಯಕ್ತಿಗೆ ಎರಡು ಬಾರಿ ಮತಚಲಾಯಿಸಲು ಅವಕಾಶ ಕೊಟ್ಟಿದ್ದು ಅನುಮಾನ ಮೂಡಿಸಿದ್ದು, ವಿಸ್ತರಣಾಧಿಕಾರಿ ಒಬ್ಬರ ಪರ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತುಮಕೂರು ಹಾಲು ಒಕ್ಕೂಟ ಗಮನ ಹರಿಸಿ ವಿಸ್ತರಣಾಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಹಾಲುಮಲ್ಲಯ್ಯ ಒತ್ತಾಯಿಸಿದ್ದಾರೆ. ಅಲ್ಲದೆ ಇಂತಹ ನಿಯಮಬಾಹಿರವಾಗಿ, ಒಬ್ಬ ವ್ಯಕ್ತಿಯ ಪರ ಕೆಲಸ ಮಾಡುವ ಅಧಿಕಾರಿಗೆ ತಕ್ಷಣ ಅಮಾನತು ಪಡಿಸುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಜೋಗಿಹಳ್ಳಿ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಗೋಪಾಲಕೃಷ್ಣ, ದೇವರಾಜು, ಈರಣ್ಣ, ಕಾಂತರಾಜು, ಸಣ್ಣ ಬೊಮ್ಮಣ್ಣ, ಸೀಬಿ ಅಗ್ರಹಾರ ಗ್ರಾಮ ಪಂಚಾಯತಿ ಸದಸ್ಯ ರಮೇಶ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚೆಲುವರಾಜು, ಮುಖಂಡ ಕಂಬಣ್ಣ ,ರಮೇಶ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.