ಆಲೂರು ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಅಕ್ರಮ

| Published : Jan 04 2025, 12:30 AM IST

ಆಲೂರು ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಅಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

2025-2030ನೇ ಅವಧಿಯ ಆಲೂರು ಪಿ.ಎಲ್.ಡಿ ಬ್ಯಾಂಕ್ ಕಾರ್ಯಕಾರಿ ಮಂಡಳಿಯ ಚುನಾವಣೆಯಲ್ಲಿ ಬ್ಯಾಂಕಿನ ಷೇರುದಾರರಿಗೆ ಮತದಾನದ ಹಕ್ಕನ್ನು ನೀಡದೆ, ಅವೈಜ್ಞಾನಿಕವಾಗಿ ಮತದಾರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಯಾವುದೇ ಮಾಧ್ಯಮಗಳ ಮೂಲಕವಾಗಲಿ ಅಥವಾ ಕರಪತ್ರಗಳ ಮೂಲಕವಾಗಲಿ, ಚುನಾವಣೆಯ ಪ್ರಕಟಣೆಯನ್ನು ಹೊರಡಿಸದೆ ಗೌಪ್ಯವಾಗಿ ಚುನಾವಣಾ ಪ್ರಕ್ರಿಯೆಯನ್ನು ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ. ತಕ್ಷಣ ಈ ಚುನಾವಣೆಯ ಪ್ರಕ್ರಿಯೆಯನ್ನು ನಿಲ್ಲಿಸಿ ಕಾನೂನುಬದ್ಧವಾಗಿ ಚುನಾವಣೆಯನ್ನು ನಡೆಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಆಲೂರು

2025-2030ನೇ ಅವಧಿಯ ಆಲೂರು ಪಿ.ಎಲ್.ಡಿ ಬ್ಯಾಂಕ್ ಕಾರ್ಯಕಾರಿ ಮಂಡಳಿಯ ಚುನಾವಣೆಯಲ್ಲಿ ಬ್ಯಾಂಕಿನ ಷೇರುದಾರರಿಗೆ ಮತದಾನದ ಹಕ್ಕನ್ನು ನೀಡದೆ, ಅವೈಜ್ಞಾನಿಕವಾಗಿ ಮತದಾರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಯಾವುದೇ ಮಾಧ್ಯಮಗಳ ಮೂಲಕವಾಗಲಿ ಅಥವಾ ಕರಪತ್ರಗಳ ಮೂಲಕವಾಗಲಿ, ಚುನಾವಣೆಯ ಪ್ರಕಟಣೆಯನ್ನು ಹೊರಡಿಸದೆ ಗೌಪ್ಯವಾಗಿ ಚುನಾವಣಾ ಪ್ರಕ್ರಿಯೆಯನ್ನು ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ. ತಕ್ಷಣ ಈ ಚುನಾವಣೆಯ ಪ್ರಕ್ರಿಯೆಯನ್ನು ನಿಲ್ಲಿಸಿ ಕಾನೂನುಬದ್ಧವಾಗಿ ಚುನಾವಣೆಯನ್ನು ನಡೆಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಣಗಾಲು ಮೂರ್ತಿ ಒತ್ತಾಯಿಸಿದರು.

ಆಲೂರು ಪಿ.ಎಲ್.ಡಿ ಬ್ಯಾಂಕಿನ ಮುಂಭಾಗ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಇರುವುದು ರೈತರಿಗಾಗಿ, ಆದರೆ ಈ ಬ್ಯಾಂಕಿನ ಅಧಿಕಾರಿ ವರ್ಗದವರು ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕಾರಿ ಮಂಡಳಿಯ ಸದಸ್ಯರು, ಪುನಃ ಈ ಬಾರಿಯ ಚುನಾವಣೆಯಲ್ಲಿ ಮರು ಆಯ್ಕೆ ಆಗುವ ದುರುದ್ದೇಶದಿಂದ ತಾವು ಪ್ರತಿನಿಧಿಸುವ ಕ್ಷೇತ್ರಗಳಿಗೆ ತಮಗೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ತಮ್ಮ ಮಾತನ್ನು ಕೇಳುವಂತಹ ರೈತ ಮತದಾರರನ್ನು ಮಾತ್ರ ಮತದಾನ ಪಟ್ಟಿಯಲ್ಲಿ ಮತದಾನಕ್ಕೆ ಅರ್ಹತೆ ಪಡೆಯುವಂತೆ ತಂತ್ರಗಾರಿಕೆ ರೂಪಿಸಿಕೊಂಡು, ಮತದಾರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಆದ್ದರಿಂದ ತಕ್ಷಣ ಸಹಕಾರ ಸಂಘಗಳ ಉಪನಿಬಂಧಕರು ಕೂಡಲೇ ಈ ಅಕ್ರಮದ ವಿರುದ್ಧ ಗಮನಹರಿಸಿ ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಕಾನೂನುಬದ್ಧವಾಗಿ ಮರು ಚುನಾವಣೆಗೆ ಆದೇಶ ಮಾಡುವಂತೆ ಆಗ್ರಹಿಸಿದರು. ಇಲ್ಲದಿದ್ದಲ್ಲಿ ಇದರ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಎಸ್ ಮಂಜೇಗೌಡ ಮಾತನಾಡಿ, ಬ್ಯಾಂಕಿನಲ್ಲಿ ರೈತರ ಮತದಾನದ ಹಕ್ಕನ್ನೇ ಕಸಿದುಕೊಂಡು ಕಾನೂನು ಬಾಹಿರವಾಗಿ ಚುನಾವಣೆ ಪ್ರಕ್ರಿಯೆಯನ್ನು ಕೈಗೊಂಡಿರುವುದು ಖಂಡನೀಯವಾಗಿದ್ದು, ಕ್ಷೇತ್ರವಾರು ಮತದಾರರನ್ನ ನೋಡಿದರೆ ಒಟ್ಟಾರೆ 15 ಕ್ಷೇತ್ರಗಳಿಗೆ ಕೇವಲ 156 ಜನ ಮತದಾರರಿಗೆ ಅರ್ಹತೆಯನ್ನ ಕೊಟ್ಟಿದ್ದು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಬ್ಯಾಂಕಿನವರು ನೀಡಿರುವ ಮಾಹಿತಿಯ ಪ್ರಕಾರ 3346 ಷೇರುದಾರರು ಬ್ಯಾಂಕಿನ ಸದಸ್ಯತ್ವವನ್ನು ಪಡೆದಿದ್ದಾರೆ. ಹಾಗೂ ಸರ್ಕಾರದ ನಿರ್ದೇಶನದಂತೆ ಹೆಚ್ಚುವರಿ ಷೇರನ್ನು ಪಾವತಿಸಿ ಅಧಿಕೃತ ಷೇರುದಾರರಾಗಿರುವವರು 898 ಮಂದಿ ರೈತರಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಕೇವಲ 156 ಮಂದಿ ರೈತರಿಗೆ ಮತದಾನದ ಹಕ್ಕನ್ನ ನೀಡಿರುವುದನ್ನು ನೋಡಿದರೆ ಇದು ಕೆಲವೇ ವ್ಯಕ್ತಿಗಳ ಚುನಾವಣೆಯ ಅನುಕೂಲಕ್ಕಾಗಿ ಮಾಡಿಕೊಂಡಿರುವ ವ್ಯವಸ್ಥಿತ ಪಿತೂರಿ ಎಂಬುದು ಎದ್ದು ಕಾಣುತ್ತಿದೆ. ಉದಾಹರಣೆಯಾಗಿ ಹೇಳಬೇಕೆಂದರೆ ಮಡಬಲು ಕ್ಷೇತ್ರದಲ್ಲಿ ಕೇವಲ 2 ಮಂದಿ ಮತದಾರರಿಗೆ, ಬೈರಾಪುರ ಕ್ಷೇತ್ರದಲ್ಲಿ 4 ಮಂದಿ ಮತದಾರರಿಗೆ, ಕದಾಳು ಕ್ಷೇತ್ರದಲ್ಲಿ 6 ಮಂದಿ ಮತದಾರರಿಗೆ ಮತದಾನದ ಹಕ್ಕನ್ನ ಕಲ್ಪಿಸಿಕೊಡಲಾಗಿದೆ. ಈ ಬಗ್ಗೆ ಬ್ಯಾಂಕಿನ ಅಧಿಕಾರಿಗಳನ್ನ ವಿಚಾರಿಸಲು ಹೋದರೆ ರೈತರ ಮತ್ತು ಸಾರ್ವಜನಿಕರ ಜೊತೆ ಉಡಾಫೆಯಿಂದ ವರ್ತಿಸುತ್ತಿದ್ದಾರೆ ಎಂಬ ದೂರುಗಳು ಕೂಡ ಕೇಳಿ ಬರುತ್ತಿದ್ದು, ತಕ್ಷಣ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಚುನಾವಣೆಯ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಪಾರದರ್ಶಕವಾದ ಹಾಗೂ ನ್ಯಾಯಯುತವಾದ ಚುನಾವಣೆಯನ್ನು ನಡೆಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಅಧ್ಯಕ್ಷ ಮಲ್ಲೇಶಚಾರ್, ಕಾರ್ಯದರ್ಶಿ ಮನು ಕಿರಗಡಲು, ಸಂಚಾಲಕ ಶಿವು, ರೈತ ಮುಖಂಡರಾದ ಕೆ.ವಿ ಮಲ್ಲಿಕಾರ್ಜುನ, ನಾಗರಾಜು ಧರ್ಮಪುರಿ, ಬಸವರಾಜು ಗೇಕರವಳ್ಳಿ, ಮಂಜು, ಲಕ್ಷ್ಮಣ್, ಮೋಹನ್,ಅಶೋಕ್ ಕರಿಗೌಡನಹಳ್ಳಿ, ಇತರರು ಉಪಸ್ಥಿತರಿದ್ದರು.