ಸಾರಾಂಶ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಪ್ಪಿತಸ್ಥರನ್ನು ಪತ್ತೆ ಮಾಡಿ, ಕಾನೂನು ರೀತಿ ಕ್ರಮ ವಹಿಸುವಂತೆ ಸಹಾಯಕ ಕೃಷಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಕನ್ನಡಪ್ರಭ ವರದಿಯಲ್ಲಿ ಉಲ್ಲೇಖವಾದ ಮಾಹಿತಿ ಆಧರಿಸಿ ಕ್ರಮವಹಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮೇ 6ರಂದು ಸುದೀರ್ಘ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿ ನಲಿನ್ ಅತುಲ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಖುದ್ದು ಜಿಲ್ಲಾಧಿಕಾರಿಗಳೇ ಈ ಪ್ರಶ್ನೆ ಮಾಡಿ, ತಕ್ಷಣ ಕ್ರಮಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗುಸುವಂತೆ ಸೂಚಿಸಿದ್ದಾರೆ. ಹೀಗಾಗಿ, ಈ ಬಗ್ಗೆ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಿ, ಇಲಾಖೆಗೆ ಮಾಹಿತಿ ನೀಡುವಂತೆ ಕುಷ್ಟಗಿ ಸಹಾಯಕ ಕೃಷಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.ಪತ್ರದಲ್ಲಿ ಏನಿದೆ:
2024-25ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಪಡಿಯಪ್ಪ ಬೊಮ್ಮನಾಳ ಹಾಗೂ ಬಾಲಪ್ಪ ಕುಷ್ಟಗಿ ಎನ್ನುವವರು ಭೂ ಸರ್ವೆ ಸಂಖ್ಯೆಗಳನ್ನು ದುರ್ಬಳಕೆ ಮಾಡಿಕೊಂಡು ಬರೋಬ್ಬರಿ ₹ 13 ಲಕ್ಷ ಬೆಳೆ ವಿಮಾ ಪರಿಹಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಮತ್ತೊಂದು ಪ್ರಕರಣದಲ್ಲಿ ಕುಷ್ಟಗಿ ತಾಲೂಕಿನ ಮುಂಗಾರು ಹಂಗಾಮಿನಲ್ಲಿ ಕೆಲವು ರೈತರು ಈರುಳ್ಳಿ ಬೆಳೆ ನೀರಾವರಿಗಾಗಿ ಬಿತ್ತನೆ ಮಾಡಿದ್ದೇವೆ ಎಂದು ಹೊಂದಾಣಿಕೆ ಇಲ್ಲ ಎನ್ನುವ ಆರೋಪದಡಿ ಬೆಳೆ ಬದಲಾಯಿಸಿಕೊಂಡಿದ್ದಾರೆ. ಇದರಲ್ಲಿ ಬೆಳೆ ಸಮೀಕ್ಷೆದಾರರ ಪಾತ್ರ ಇರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಹೀಗಾಗಿ, ಇವರ ವಿರುದ್ಧವೂ ಕ್ರಮ ವಹಿಸಬೇಕು ಎಂದು ಸೂಚಿಸಿರುವುದಲ್ಲದೆ ಅಕ್ರಮ ನಡೆದಿರುವ ದಾಖಲೆಗಳನ್ನು ಸಹ ಇದರೊಂದಿಗೆ ಲಗತ್ತಿಸಿದ್ದಾರೆ.ಇಲ್ಲಿದೆ ನೋಡಿ ಅಕ್ರಮದ ಜಾಡುನನ್ನ ಹೆಸರು ಮಹೇಶ ಪಾಟೀಲ್ ಎಂದು ಇದ್ದು, ನನ್ನ 20 ಎಕರೆ ಭೂಮಿಯಲ್ಲಿ ಬೆಳೆ ವಿಮಾ ಪರಿಹಾರವನ್ನು ₹ 4 ಲಕ್ಷಕ್ಕೂ ಅಧಿಕ ಪಡೆದುಕೊಂಡಿದ್ದಾರೆ. ಅಕ್ರಮ ಮಾಡಿದವನ ಹೆಸರು ಸಹ ಮಹೇಶ ಎಂದು ಇದೆ. ತನ್ನ ಹೆಸರಿನಲ್ಲಿ ಎಲ್ಲೆಲ್ಲಿ ಪಹಣಿ ಇದೆ ಎನ್ನುವುದನ್ನು ಪತ್ತೆ ಮಾಡಿ, ಬೆಳೆ ವಿಮಾ ಪರಿಹಾರ ನುಂಗಿದ್ದಾನೆ. ಹಾಗೆಯೇ ನನ್ನ ಪಹಣಿಯಲ್ಲಿ ಫೇಕ್ ಎಎಫ್‌ಐಡಿ ಕ್ರಿಯೇಟ್ ಮಾಡಿ, ಬೆಳೆ ವಿಮಾ ಪರಿಹಾರ ದೋಚಿದ್ದಾನೆ. ಇದಕ್ಕೆ ಅಧಿಕಾರಿಗಳ ಬೆಂಬಲ ಇಲ್ಲದೆಯೇ ಹೀಗೆ ಮಾಡಲು ಸಾಧ್ಯವೇ ಇಲ್ಲ. ನನ್ನ ಪಹಣಿಯ ಹೆಸರಿನಲ್ಲಿ ಈಗಾಗಲೇ ಎಫ್‌ಐಡಿ ಇರುವಾಗ ಮತ್ತೊಂದು ಎಫ್‌ಐಡಿಯನ್ನು ಬಳಕೆ ಮಾಡಿದ್ದು ಹೇಗೆ, ಹೀಗೆ ಮಾಡುವಾಗ ಒಟಿಪಿ ಸಹ ಬರುತ್ತದೆ. ನನ್ನ ಮೊಬೈಲ್ ನಂಬರ್ ಬದಲಾಗಿ, ಮತ್ತೊಬ್ಬರ ಮೊಬೈಲ್ ನಂಬರ್‌ಗೆ ಒಟಿಪಿ ಬಂದಿದ್ದು ಹೇಗೆ ಎನ್ನುವುದನ್ನು ಪತ್ತೆ ಮಾಡಿದರೆ ಅಕ್ರಮ ಮಾಡಿದವರು ಯಾರು ಎನ್ನುವುದು ಪಕ್ಕಾ ಆಗುತ್ತದೆ ಎನ್ನುತ್ತಾರ ಮಹೇಶ ಪಾಟೀಲ್. ನಾನು ಈ ಕುರಿತು ದೂರು ದಾಖಲಿಸುತ್ತೇನೆ. ರೈತರ ಹೆಸರಿನಲ್ಲಿ ಬೆಳೆ ವಿಮೆ ದೋಚಿದವರ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ಆಗ್ರಹಿಸಿದ್ದಾರೆ.ಬೆಳೆ ವಿಮಾ ಪರಿಹಾರದಲ್ಲಿ ಅಕ್ರಮವಾಗಿರುವುದು ದಾಖಲೆಯಿಂದ ಗೊತ್ತಾಗಿದೆ. ಹೀಗಾಗಿ, ಇವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲು ಈಗಾಗಲೇ ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚಿದ್ದೇನೆ.
ರುದ್ರೇಶಪ್ಪ, ಜೆಡಿ ಕೃಷಿ ಇಲಾಖೆ