ಸಾರಾಂಶ
ಕನ್ನಡಪ್ರಭ ವಾರ್ತೆ ಆಳಂದ:
ತಾಲೂಕಿನ ಹಾಳತಡಕಲ್ ಗ್ರಾಪಂ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಡೆದ ತೆರೆದ ಬಾವಿ ಕಾಮಗಾರಿಯಲ್ಲಿ ಗಂಭೀರ ಅಕ್ರಮಗಳು ಬೆಳಕಿಗೆ ಬಂದಿವೆ.ಈ ಪ್ರಕರಣದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ (ಪ್ರಭಾರಿ) ರಾಚಣ್ಣಗೌಡ ಅವರನ್ನು ಜಿಪಂ ಸಿಇಒ ಭಂವರಸಿಂಗ್ ಮೀನಾ ಅಮಾನತುಗೊಳಿಸಿದ್ದಾರೆ. ಅಲ್ಲದೆ, ಅಕ್ರಮದಿಂದ ಸರ್ಕಾರಕ್ಕೆ ಉಂಟಾದ 1,01,757 ರು. ನಷ್ಟ ಭರಿಸುವಂತೆ ಸೂಚಿಸಿದ್ದಾರೆ.
*ಅಕ್ರಮದ ಹಿನ್ನೆಲೆ: ಮಾಜಿ ಶಾಸಕ ಸುಭಾಷ ಗುತ್ತೇದಾರ ಮತ್ತು ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾಂನಂದ ಗುತ್ತೇದಾರ, ಆಳಂದ ತಾಲೂಕಿನ 467 ತೆರೆದ ಬಾವಿಗಳ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಈ ದೂರಿನ ಆಧಾರದ ಮೇಲೆ ಜಿಪಂ ಸಿಇಒ ಚಿತ್ತಾಪೂರ ಮತ್ತು ಅಫಜಲಪೂರ ತಾಲೂಕಿನ ಅಧಿಕಾರಿಗಳ ತಂಡವನ್ನು ಪರಿಶೀಲನೆಗೆ ನೇಮಿಸಿತ್ತು. ತಂಡದ ವರದಿಯಲ್ಲಿ ಮನರೇಗಾ ಮಾರ್ಗಸೂಚಿಗಳ ಉಲ್ಲಂಘನೆ, ಸರ್ಕಾರಿ ಖಜಾನೆಗೆ ಹಾನಿ, ಮತ್ತು ಸುಳ್ಳು ದಾಖಲೆಗಳ ಸೃಷ್ಟಿಯ ವಿವರಗಳು ಬಯಲಾಗಿವೆ.*ಬೆಳಕಿಗೆ ಬಂದ ಅವ್ಯವಹಾರಗಳು: ಸರ್ವೇ ಸಂಖ್ಯೆ ದೋಷ ಹಾಳತಡಕಲ್ ಗ್ರಾಮದ ಸರ್ವೇ ನಂ.122ರಲ್ಲಿ ಕಾಮಗಾರಿ ನಡೆಸಬೇಕಿದ್ದರೂ, ಸರ್ವೇ ನಂ. 123ರಲ್ಲಿ ಕಾಮಗಾರಿ ನಡೆಸಲಾಗಿದೆ. ಇದರಿಂದ 79,911 ರು. ಹೆಚ್ಚುವರಿ ಕೂಲಿ ಮೊತ್ತ ಪಾವತಿಯಾಗಿದೆ.
ನಸೀರವಾಡಿಯಲ್ಲಿ ಬಬ್ರುವಾಹನ ಪಾಟೀಲರ ಜಮೀನಿನಲ್ಲಿ ತೆರೆದ ಬಾವಿ ಕಾಮಗಾರಿಯಲ್ಲಿ ಭೌತಿಕ ಕಾಮಗಾರಿಗಿಂತ 21,846 ರು. ಹೆಚ್ಚುವರಿ ಕೂಲಿ ಪಾವತಿಯಾಗಿದೆ.*ಕೈಗೊಂಡ ಕ್ರಮಗಳು: ಪಿಡಿಒ ರಾಚಣ್ಣಗೌಡ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಅವರಿಂದ ಒಟ್ಟು 1,01,757 ರು. ವಸೂಲಿಗೆ ಆದೇಶಿಸಲಾಗಿದೆ.
*ಪ್ರಕರಣದ ವ್ಯಾಪಿ: ಈ ಅಕ್ರಮಗಳು ಕೇವಲ ಹಾಳತಡಕಲ್‍ನಲ್ಲಿ ಮಾತ್ರವಲ್ಲದೆ, ಕಡಗಂಚಿ ಮತ್ತು ಮಾದನಹಿಪ್ಪರಗಾ ಗ್ರಾಪಂ ಸೇರಿ ಹಲವೆಡೆ ಬೆಳಕಿಗೆ ಬಂದಿವೆ. ತಾಲೂಕಿನ 467 ತೆರೆದ ಬಾವಿಗಳ ಕಾಮಗಾರಿಯಲ್ಲಿ ಒಟ್ಟು ಬಹುತೇಕ ಎಲ್ಲ ಕಾಮಗಾರಿಗಳಲ್ಲಿ ಭ್ರಷ್ಟಾಚಾರದ ಆರೋಪಗಳಿವೆ. ಈ ಘಟನೆಯಿಂದ ಮನರೇಗಾ ಯೋಜನೆಯ ವಿಶ್ವಾಸಾರ್ಹತೆಯೇ ಪ್ರಶ್ನೆಗೆ ಒಳಗಾಗಿದೆ.*ಕಾಮಗಾರಿ ತಡೆಗೆ ಒತ್ತಾಯ: ಮಾಜಿ ಶಾಶಕ ಸುಭಾಷ ಗುತ್ತೇದಾರ ಅವರು ತಾಲೂಕಿನ ಎಲ್ಲಾ ಗ್ರಾಪಂಗಳಲ್ಲಿ ನಡೆಯುತ್ತಿರುವ ತೆರೆದ ಬಾವಿ ಕಾಮಗಾರಿಗಳನ್ನು ತಡೆಯಬೇಕು ಮತ್ತು ಹಣ ಪಾವತಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಒಪ್ಪದಿದ್ದರೆ ಸಾವಿರಾರು ಕೂಲಿಕಾರರೊಂದಿಗೆ ಜಿಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ನೀಡಿದ್ದಾರೆ. ಅಲ್ಲದೆ, ಸುಭಾಷ ಗುತ್ತೇದಾರರು, ಈ ರೀತಿಯ ಲೂಟಿಯನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಮತ್ತು ಕಾಮಗಾರಿಗಳ ಸಂಪೂರ್ಣ ತನಿಖೆಗೆ ಒತ್ತಾಯಿಸಿದ್ದಾರೆ. ನಕಲಿ ಜಾಬ್ ಕಾರ್ಡ್‌ಗಳ ಸೃಷ್ಟಿ
ವಿದೇಶದಲ್ಲಿರುವ ವ್ಯಕ್ತಿಗಳು, ಮಹಾರಾಷ್ಟ್ರದ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಕಂಪನಿಗಳಲ್ಲಿ ಕೆಲಸ ಮಾಡುವವರ ಹೆಸರನ್ನು ಕೂಲಿಕಾರರೆಂದು ಸೇರಿಸಿ ಸುಳ್ಳು ಜಾಬ್ ಕಾರ್ಡ್‍ಗಳನ್ನು ಸೃಷ್ಟಿಸಲಾಗಿದೆ. ನಸೀರವಾಡಿಯಲ್ಲಿ 128 ಜಾಬ್ ಕಾರ್ಡ್‍ಗಳು ಒಬ್ಬರೇ ಸದಸ್ಯರ ಹೆಸರಿನಲ್ಲಿದ್ದು, ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ. ಹಾಳ ತಡಕಲ್ ಗ್ರಾಮದಲ್ಲಿ ಮರಣ ಹೊಂದಿದ ಫಲಾನುಭವಿಯ ಹೆಸರಿನಲ್ಲಿ ಕಾಮಗಾರಿಗೆ ಅನುಮೋದನೆ ಪಡೆದು ಅನುಷ್ಠಾನಗೊಳಿಸಲಾಗಿದೆ. ಮನರೇಗಾ ಕಾಮಗಾರಿಯಲ್ಲಿ ಜೆಸಿಬಿ ಮತ್ತು ಇತರ ಯಂತ್ರಗಳನ್ನು ಬಳಸಿ ನಿಯಮ ಉಲ್ಲಂಘಿಸಿದ್ದ ಬೆಳಕಿಗೆ ಬಂದಿದೆ.