ಶ್ರೀ ಅರ್ಕೇಶ್ವರಸ್ವಾಮಿ ಸೇವಾ ಸಂಘದ ಅಕ್ರಮ: ಆರೋಪ

| Published : Feb 25 2025, 12:49 AM IST

ಸಾರಾಂಶ

ರಾಮನಗರ: ನಗರದ ಅರ್ಕಾವತಿ ದಂಡೆಯ ಪಶ್ಚಿಮಾಭಿಮುಖ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೀಪಾಲಂಕಾರ, ಅನ್ನದಾನ ಮಾತ್ರ ನಡೆಯಲಿದ್ದು, ಈ ವರ್ಷ ಅಂಬಾರಿ ಉತ್ಸವ ಮತ್ತು ರಸಮಂಜರಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಸಮಾಜ ಸೇವಕ ಹಾಗೂ ಭಕ್ತ ಭೋಜರಾಜು ತಿಳಿಸಿದರು.

ರಾಮನಗರ: ನಗರದ ಅರ್ಕಾವತಿ ದಂಡೆಯ ಪಶ್ಚಿಮಾಭಿಮುಖ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೀಪಾಲಂಕಾರ, ಅನ್ನದಾನ ಮಾತ್ರ ನಡೆಯಲಿದ್ದು, ಈ ವರ್ಷ ಅಂಬಾರಿ ಉತ್ಸವ ಮತ್ತು ರಸಮಂಜರಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಸಮಾಜ ಸೇವಕ ಹಾಗೂ ಭಕ್ತ ಭೋಜರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಾಯಿಯವರ ಆಶಯದಂತೆ ಕುಟುಂಬದ ವತಿಯಿಂದ ನಾಗದೇವತೆ ಜೀರ್ಣೋದ್ಧಾರ ಮಾಡಿ, ಪ್ರತಿವರ್ಷ ಮಹಾಶಿವರಾತ್ರಿಯಂದು ಕಳೆದ 5 ವರ್ಷದಿಂದ ಪೂಜೆ ನೆರವೇರಿಸುತ್ತಿದ್ದು, ಅಂಬಾರಿ ಮೆರವಣಿಗೆ, ಅನ್ನದಾನ ಸೇವೆ ಮಾಡುತ್ತಾ ಬಂದಿದ್ದೇವೆ. ಆದರೆ, ದೇವಾಲಯದಲ್ಲಿ ದೇವರಿಗೆ ಮೂರು ತಿಂಗಳಿಂದ ಪೂಜೆ ನಡೆಯುತ್ತಿಲ್ಲದ ಕಾರಣ ಅಂಬಾರಿ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ ಎಂದರು.

ಶ್ರೀ ಅರ್ಕೇಶ್ವರಸ್ವಾಮಿ ಸೇವಾ ಸಂಘ ದೇಗುಲದ ಜೀರ್ಣೋದ್ಧಾರ ಕಾರ್ಯ ಮಾಡುವಾಗ ಗರ್ಭಗುಡಿ ಕೆಡವದಂತೆ ಮನವಿ ಮಾಡಿದ್ದೆವು. ದೇವಾಲಯ ನಿರ್ಮಾಣ ಕಾಮಗಾರಿ ಮೂರು ವರ್ಷಗಳಿಂದ ತೆವಳುತ್ತ ಸಾಗಿದೆ. ದೇವರಿಗೆ ಪೂಜೆಯಿಲ್ಲದೆ ದೇವಾಲಯಕ್ಕೆ ಬೀಗ ಹಾಕಿದ್ದಾರೆ. ಮುಜರಾಯಿ ಇಲಾಖೆಗೆ ಸೇರಿರುವ ಇತಿಹಾಸ ಪ್ರಸಿದ್ದ ದೇವಾಲಯದ ಪರಿಸ್ಥಿತಿ ಶೋಚನೀಯವಾಗಿದ್ದು, ಪುರೋಹಿತರಿಗೆ ಮಾಸಿಕ ವೇತನ ನೀಡುತ್ತಿಲ್ಲ. ಧಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರಿರುವ ದೇವಾಲಯದಲ್ಲಿಯೇ ಪುರೋಹಿತರಿಗೆ ವೇತನ ನೀಡಲು ಹಣ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು.

ಪ್ರತಿನಿತ್ಯ ಸಣ್ಣ ಹುಡುಗನೊಬ್ಬ ನಿತ್ಯಪೂಜೆ ಸಲ್ಲಿಸಿ ಬಾಗಿಲು ಹಾಕಿಕೊಂಡು ಹೋಗುತ್ತಿದ್ದಾನೆ. ದೇವರ ಸಾಮಗ್ರಿಗಳು ಬೂಸ್ಟ್ ಹಿಡಿಯುತ್ತಿವೆ. ಶ್ರೀ ಅರ್ಕೇಶ್ವರ ದೇವಾಲಯ ನಿರ್ಮಾಣ ಶೀಘ್ರವಾಗಿ ಆಗಬೇಕು. ಭಕ್ತರಿಗೆ ಪೂಜಾ ಕಾರ್ಯಕ್ಕೆ ಅನುವಾಗಬೇಕು. ದಾನಿಯೊಬ್ಬರು ಅರ್ಕೇಶ್ವರ ಸ್ವಾಮಿಗೆ ಬೃಹತ್ ರಥವನ್ನು ನಿರ್ಮಿಸಿಕೊಟ್ಟಿದ್ದರು. ಅದನ್ನು ಜೋಪಾನ ಮಾಡಬೇಕಾದ ಸಮಿತಿ ಪದಾಧಿಕಾರಿಗಳು, ರಥವನ್ನು ಸತತ ಎರಡು ವರ್ಷ ಹೊರಗಡೆ ನಿಲ್ಲಿಸಿದ್ದರು. ಬಿಸಿಲು ಹಾಗೂ ಮಳೆಯಿಂದಾಗಿ ರಥ ಸಂಪೂರ್ಣ ಆಳಾಗುವ ಹಂತ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಿತಿಯವರನ್ನು ಕೇಳಿದರೆ ಯಾವುದೇ ಉತ್ತರವಿಲ್ಲ, ದೇವಾಲಯವನ್ನು ನಿಯಮಾನುಸಾರ ಒಂದು ವರ್ಷದೊಳಗೆ ನಿರ್ಮಿಸಬೇಕು. ಸಮಿತಿಯಲ್ಲಿ ದೇವಾಲಯ ನಿರ್ಮಿಸಲು ಎರಡು ಬ್ಯಾಂಕ್ ಖಾತೆಗಳನ್ನು ಮಾಡಿದ್ದಾರೆ. ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಹೆಸರಿನಲ್ಲಿ ಟ್ರಸ್ಟ್ ಪದಾಧಿಕಾರಿಗಳು, ಕಾಲ ಹರಣ ಮಾಡುತ್ತಿದ್ದು, ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. 80 ಲಕ್ಷ ರು. ಕಾಮಗಾರಿಯ ಅಂದಾಜು ವೆಚ್ಚ ಎಂದು ಹೇಳಲಾಗಿದೆ. ಟ್ರಸ್ಟ್ ನ ಖಾತೆಯಲ್ಲಿ 1 ಕೋಟಿ ರು. ಇದೆ. ಆದರೆ, ಟ್ರಸ್ಟ್ ನವರು ದೇವಾಲಯದ ಹೊರಭಾಗದಲ್ಲಿ 15 ಕೋಟಿ ರು. ವೆಚ್ಚವಾಗುತ್ತದೆ ಎಂದು ಫಲಕ ಹಾಕಿದ್ದಾರೆ. ಇದೆಲ್ಲವೂ ಸಾಕಷ್ಟು ಸಂದೇಹಗಳಿಗೆ ಕಾರಣವಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಲೆಕ್ಕಪತ್ರ ಕೊಡುತ್ತಿಲ್ಲ, ದೇವಾಲಯ ನಿರ್ಮಿಸುತ್ತಿಲ್ಲ. ಜೋರ್ಣೋದ್ಧಾರದ ಹೆಸರಿನಲ್ಲಿ ಹಣ ದುರುಪಯೋಗ ಆಗುತ್ತಿದೆ. ನಾನು ಮಾಡಿರುವ ಆರೋಪಕ್ಕೆ ಸಮಿತಿ ಸರಿಯಾದ ಉತ್ತರ ನೀಡಬೇಕು. ಇಲ್ಲದಿದ್ದಲ್ಲಿ ಸಮಿತಿಯ ಕಾರ್ಯವೈಖರಿ ಬಗ್ಗೆ ನಗರಾದ್ಯಂತ ಕರಪತ್ರ ಹಂಚಿಸಲಾಗುವುದು, ಜೊತೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ಪತ್ರ ಬರೆಯಲಾಗುವುದು ಎಂದು ಭೋಜರಾಜು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರೈಡ್‌ನಾಗರಾಜು, ಮುತ್ತುರಾಜು, ಅನಿಲ್‌ ಜೋಗೇಂದರ್, ಡಿ.ಕೆ.ಶಿವಕುಮಾರ್, ವೆಂಕಟೇಶ್, ಸ್ನೇಕ್‌ ಹರೀಶ್, ದೊಡ್ಡಿ ಸುರೇಶ್, ರಾಘು, ಮಧು, ಸೂರಿ, ಪರಮಶಿವಯ್ಯ ಮತ್ತಿತರರು ಇದ್ದರು.

ಕೋಟ್ ..............

ಪ್ರತಿವರ್ಷ ಜೋಡಿ ಆನೆಗಳ ಮೇಲೆ ಪ್ರಮುಖ ರಸ್ತೆಗಳಲ್ಲಿ ಶ್ರೀ ಅರ್ಕೇಶ್ವರ ಸ್ವಾಮಿ ದೇವರ ಮೆರವಣಿಗೆ ನಡೆಸಲಾಗುತ್ತಿತ್ತು. ಆದರೆ ಕಳೆದ ಮೂರು ತಿಂಗಳಿಂದ ದೇವರ ವಿಗ್ರಹವಿರುವ ಗರ್ಭಗುಡಿಗೆ ಬೀಗ ಹಾಕಿದ್ದು, ಪೂಜಾ ಪುನಸ್ಕಾರಗಳು ಸರಿಯಾಗಿ ನಡೆಯದಿರುವ ಕಾರಣ, ಈ ಬಾರಿ ಆನೆಗಳನ್ನು ಕರೆಸಿ ವಿಜೃಂಭಣೆಯಿಂದ ಶಿವರಾತ್ರಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬೆಳ್ಳಿರಥದಲ್ಲಿ ದೇವರ ಮೆರವಣಿಗೆ ನಡೆಸಿ, ದೀಪಾಲಂಕಾರ ಮತ್ತು ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸುತ್ತಿದ್ದೇವೆ.

-ಭೋಜರಾಜು, ಸಮಾಜ ಸೇವಕರು

24ಕೆಆರ್ ಎಂಎನ್ 6.ಜೆಪಿಜಿ

ಸಮಾಜ ಸೇವಕ ಹಾಗೂ ಭಕ್ತ ಭೋಜರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.