ಸಾರಾಂಶ
24 ತಾಸಲ್ಲೇ ಕೊಲೆ ಪ್ರಕರಣ ಭೇದಿಸಿದ ದಾವಣಗೆರೆ ಪೊಲೀಸ್ ಶ್ವಾನ ದಳದ ‘ತಾರಾ’
ಕನ್ನಡಪ್ರಭ ವಾರ್ತೆ ದಾವಣಗೆರೆಜಮೀನೊಂದರಲ್ಲಿ ವ್ಯಕ್ತಿಯೊಬ್ಬನ ತಲೆ, ಮೈ-ಕೈ ಹಾಗೂ ಮರ್ಮಾಂಗವನ್ನು ಕಲ್ಲಿನಿಂದ ಜಜ್ಜಿ, ಕೊಲೆ ಮಾಡಿದ್ದ ಪ್ರಕರಣವನ್ನು ಘಟನೆ ನಡೆದ 24 ಗಂಟೆಯೊಳಗೆ ಪೊಲೀಸ್ ಶ್ವಾನ ದಳದ ‘ತಾರಾ’ ನೆರವಿನಿಂದ ಭೇದಿಸಿ, ಹಂತಕನನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಹೊನ್ನೂರು ಗ್ರಾಮದ ಕೂಲಿ ಕೆಲಸಗಾರ ಜಯಪ್ಪ ಕಾಟಪ್ಪರ ಬಂಧಿತ ಆರೋಪಿ. ಚಿತ್ರದುರ್ಗ ಜಿಲ್ಲೆ ಹೆಗಡೆಹಾಳ್ ಗ್ರಾಮದ ಶಿವಕುಮಾರ (29) ಕೊಲೆಯಾದ ವ್ಯಕ್ತಿ. ಆರೋಪಿ ಜಯಪ್ಪ ಕಾಟಪ್ಪರನನ್ನು ನ್ಯಾಯಾಂಗ ಬಂಧನ ವಿಧಿಸಲಾಗಿದೆ.ತನ್ನ ತಮ್ಮನ ಮೈಮೇಲಿನ ಗಾಯಗಳು, ಹಲ್ಲೆ ನೋಡಿದರೆ ಪರಿಮಳ ಗಂಡ ಜಯಪ್ಪ ಕಾಟಪ್ಪರ ಏ.4ರ ರಾತ್ರಿ 10ರ ನಂತರ ಕಲ್ಲಿನಿಂದ ತಲೆ, ಮೈ-ಕೈಗೆ ಹೊಡೆದು ಕೊಲೆ ಮಾಡಿರುವಂತಿದೆ. ಜಯಪ್ಪನನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಮೃತರ ಸಹೋದರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಪೊಲೀಸರು ತಂಡ ರಚಿಸಿದ್ದರು. ಜಿಲ್ಲಾ ಶ್ವಾನ ದಳದ ತಾರಾ ಹೆಸರಿನ ಶ್ವಾನ ಘಟನೆ ನಡೆದ ಸ್ಥಳದಿಂದ 1 ಕಿಮೀ ಕ್ರಮಿಸಿ, ಆರೋಪಿ ಜಯಪ್ಪ ಕಾಟಪ್ಪರನನ್ನು ಪತ್ತೆ ಮಾಡಿತು. ಅನಂತರ ಆರೋಪಿ ಜಯಪ್ಪ ಕಾಟಪ್ಪರನನ್ನು ಹೊನ್ನೂರು ಐಒಸಿ ಪೆಟ್ರೋಲ್ ಬಂಕ್ ಬಳಿ ಬಂಧಿಸಲಾಯಿತು.ವಿಚಾರಣೆ ವೇಳೆ ತನ್ನ ಪತ್ನಿ ಪರಿಮಳ ಜೊತೆಗೆ ಶಿವಕುಮಾರ ಸಂಬಂಧ ಹೊಂದಿದ್ದ. ಈ ವಿಚಾರಕ್ಕೆ ಸಿಟ್ಟಿಗೆದ್ದು ಏ.4ರಂದು ರಾತ್ರಿ 10.30ರ ವೇಳೆ ಬಸವರಾಜಪ್ಪ ಎಂಬುವರ ಜಮೀನಿನಲ್ಲಿ ಶಿವಕುಮಾರನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಘಟನೆ ಏನು?:ಏ.4ರಂದು ರಾತ್ರಿ 7.20ರ ವೇಳೆ ಶಿವಕುಮಾರ ತನ್ನ ಸ್ನೇಹಿತರಾದ ರಮೇಶ, ಅಜ್ಜಯ್ಯ ಎಂಬುವರ ಜೊತೆಗೆ ದಾವಣಗೆರೆಯ ಹೊನ್ನೂರಿಗೆ ಹೋಗಿದ್ದರು. ಶಿವಕುಮಾರ ಹೆಗಡೆಹಾಳ್ ಗ್ರಾಮದ ಕೂಲಿ ಕೆಲಸಗಾರ ದಿ.ಚೌಡಪ್ಪರ ನಾಲ್ಕು ಮಕ್ಕಳ ಪೈಕಿ ಕಿರಿಯ.
ಆಂಧ್ರದ ನಲ್ಲೂರು ಬಳಿ ಬೇಕರಿ ಕೆಲಸಕ್ಕೆ ಹೋಗುತ್ತಿದ್ದ ಶಿವಕುಮಾರ 3 ತಿಂಗಳಿಗೊಮ್ಮೆ ರಜೆ ಹಾಕಿ ಹೆಗಡೆಹಾಳ್ ಗ್ರಾಮಕ್ಕೆ ಬರುತ್ತಿದ್ದ. ತಿಂಗಳ ಹಿಂದೆ ಊರಿಗೆ ಬಂದು, ಹೊನ್ನೂರಿಗೆ ಹೋಗಿದ್ದ. ರಾತ್ರಿ ತಡವಾದರೂ ಊರಿಗೆ ಮರಳಿರಲಿಲ್ಲ.ಮಾರನೇ ದಿನ ಬೆಳಿಗ್ಗೆ ಹೊನ್ನೂರು ಜಮೀನೊಂದರಲ್ಲಿ ಶಿವಕುಮಾರ ಕೊಲೆಯಾಗಿರುವ ವಿಚಾರ ಗೊತ್ತಾಗಿದೆ. ಮೃತನ ಸಹೋದರ ಕೊಲ್ಲಪ್ಪ ಅವರು ಸ್ನೇಹಿತರಾದ ಅಶೋಕ, ಗಿರೀಶ್ ಜೊತೆಗೆ ಬೆಳಿಗ್ಗೆ 11ರ ವೇಳೆಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಶಿವಕುಮಾರನ ಮೈಮೇಲೆ ಗಾಯಗಳಾಗಿದ್ದು, ತಲೆಯಲ್ಲಿ ರಕ್ತಗಾಯ, ಮೈಮೇಲೆ ಪ್ಯಾಂಟ್ ಮಾತ್ರ ಇತ್ತು. ರಮೇಶನಿಗೆ ವಿಚಾರಿಸಿದಾಗ, ‘ರಾತ್ರಿ 10ರ ವೇಳೆಗೆ ಶಿವು ಇದ್ದ ಜಾಗಕ್ಕೆ ಹೋದೆವು. ಆದರೆ, ಶಿವು ಅಲ್ಲಿ ಇರಲಿಲ್ಲ. ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇನ್ನೊಂದು ನಂಬರ್‌ಗೆ ಫೋನ್ ಮಾಡಿದಾಗ ಪರಿಮಳ ಎಂಬಾಕೆ ಮಾತನಾಡಿದಳು’ ಎಂದು ಹೇಳಿದ್ದಾನೆ.
‘ಪರಿಮಳ ತಾನು ಹಾಗೂ ಶಿವು ಮಾತನಾಡುವಾಗ ತನ್ನ ಗಂಡ ಜಯಪ್ಪನ ಕೈಗೆ ಸಿಕ್ಕು ಬಿದ್ದೆವು. ಆಗ ನನ್ನ ಗಂಡ ಶಿವುಗೆ ಎರಡು ಏಟು ಹೊಡೆದ. ಶಿವು ಹೊಲದ ಕಡೆಗೆ ಓಡಿ ಹೋದ. ವಾಪಸ್ ಊರಿಗೆ ಹೋಗಿದ್ದಾನೆಂದು ಗಂಡ ವಾಪಸ್ ಬಂದರು ಎಂದು ತಿಳಿಸಿದಳು’ ಎಂದು ರಮೇಶ್ ಹೇಳಿದ್ದಾನೆ.