ಉತ್ತರ ಕರ್ನಾಟಕದ ರೋಗಿಗಳಿಗೆ ಸ್ಥಳೀಯವಾಗಿಯೇ ಸುಧಾರಿತ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಹುಬ್ಬಳ್ಳಿಯ ವಿಹಾನ್ ಹಾರ್ಟ್ ಆ್ಯಂಡ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಅಡ್ವಾನ್ಸ್ಡ ಸಿನರ್ಜಿ ವಿಷನ್ ಇಮೇಜಿಂಗ್ ಸಿಸ್ಟಂ ಅಳವಡಿಸಲಾಗಿದೆ.

ಹುಬ್ಬಳ್ಳಿ:

ಉತ್ತರ ಕರ್ನಾಟಕದ ರೋಗಿಗಳಿಗೆ ಸ್ಥಳೀಯವಾಗಿಯೇ ಸುಧಾರಿತ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ನಗರದ ವಿಹಾನ್ ಹಾರ್ಟ್ ಆ್ಯಂಡ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಅಡ್ವಾನ್ಸ್ಡ ಸಿನರ್ಜಿ ವಿಷನ್ ಇಮೇಜಿಂಗ್ ಸಿಸ್ಟಂ ಅಳವಡಿಸಲಾಗಿದ್ದು, ಸ್ವರ್ಣ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಸೋಮವಾರ ಯಂತ್ರವನ್ನು ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಡಾ. ವಿ.ಎಸ್‌.ವಿ. ಪ್ರಸಾದ, ವಿಹಾನ್ ಆಸ್ಪತ್ರೆ ನೂತನ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿಕೊಳ್ಳುವ ಮೂಲಕ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿದೆ. ಈ ಹಿಂದೆ ಉನ್ನತ ಮಟ್ಟದ ಚಿಕಿತ್ಸೆಗಾಗಿ ಬೇರೆ ನಗರಗಳನ್ನು ಅವಲಂಬಿಸಬೇಕಾಗಿತ್ತು. ಇದೀಗ ಸ್ಥಳೀಯವಾಗಿಯೇ ಕಡಿಮೆ ವೆಚ್ಚದಲ್ಲಿ ಸುಧಾರಿತ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ ಎಂದರು.

ಬಳಿಕ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಹರಿಕೃಷ್ಣ ಮಠ, ಎಲುಬು, ಕೀಲು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸುಧಾರಿತ ತಂತ್ರಜ್ಞಾನದ ಮೂಲಕ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಯಂತ್ರ ಅಳವಡಿಸಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ತಂತ್ರಜ್ಞಾನ ಹೊಂದಿರುವ ಏಕೈಕ ಆಸ್ಪತ್ರೆ ವಿಹಾನ್ ಆಗಿದೆ ಎಂದು ಹೇಳಿದರು.

ಸಾಮಾನ್ಯವಾಗಿ ಎಲುಬು ಮತ್ತು ಕೀಲುಗಳ ಸಮಸ್ಯೆ ಪತ್ತೆ ಹಚ್ಚಲು ಎಂಆರ್‌ಐ ಸ್ಕ್ಯಾನಿಂಗ್ ಸೇರಿದಂತೆ ವಿವಿಧ ಪರೀಕ್ಷೆಗಳ ಅಗತ್ಯವಿದೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿಯೂ ಹೆಚ್ಚಿನ ಗಾತ್ರದ ಉಪಕರಣಗಳನ್ನು ಬಳಸಬೇಕಾಗುತ್ತದೆ. ಆದರೆ, ನೂತನ ತಂತ್ರಜ್ಞಾನದಿಂದ ನ್ಯಾನೋ ಮತ್ತು ಪಾನೋ ಸ್ಕೋಪ್‌ಗಳ ನೆರವಿನಿಂದ ದೇಹದ ಒಳಭಾಗವನ್ನು ಸ್ಪಷ್ಟವಾಗಿ ವೀಕ್ಷಿಸಿ, ಅಗತ್ಯ ಚಿಕಿತ್ಸಾ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಶಸ್ತ್ರಚಿಕಿತ್ಸೆಯ ನಿಖರತೆ ಹೆಚ್ಚಿಸುವುದರ ಜತೆಗೆ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.

ಆಸ್ಪತ್ರೆ ಅಧ್ಯಕ್ಷ ಡಾ. ವಿಜಯಕೃಷ್ಣ ಕೊಳೂರು ಮಾತನಾಡಿ, ಉತ್ತರ ಕರ್ನಾಟಕದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಆಸ್ಪತ್ರೆ ನಿರಂತರವಾಗಿ ಹೊಸ ವೈದ್ಯಕೀಯ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ಸುಮಾರು ₹1 ಕೋಟಿ ಮೌಲ್ಯದ ಈ ಇಮೇಜಿಂಗ್ ಸಿಸ್ಟಂನಿಂದ ಸ್ಥಳೀಯ ರೋಗಿಗಳಿಗೆ ಸುಧಾರಿತ ಚಿಕಿತ್ಸೆ ಲಭ್ಯವಾಗಲಿದ್ದು, ಹೆಚ್ಚಿನ ಚಿಕಿತ್ಸೆಗೆ ದೂರದ ನಗರಗಳಿಗೆ ತೆರಳುವ ಅನಿವಾರ್ಯತೆ ಕಡಿಮೆಯಾಗಲಿದೆ ಎಂದು ಹೇಳಿದರು.

ಅವನಾ ಇನ್ನೋವೇಟಿಂಗ್ ಹೆಲ್ತ್‌ಕೇರ್ ಸಂಸ್ಥೆಯ ಪ್ರತಿನಿಧಿ ವಿನಯ ಆರ್.ಎ. ಮಾತನಾಡಿ, ಈ ವ್ಯವಸ್ಥೆಯು ದೇಹದ ಒಳರಚನೆಗಳನ್ನು ಸ್ಪಷ್ಟವಾಗಿ ಹಾಗೂ ವಿವಿಧ ಕೋನಗಳಿಂದ ವೀಕ್ಷಿಸಲು ನೆರವಾಗುತ್ತದೆ. ಸುಧಾರಿತ 4ಕೆ ಮತ್ತು ಹೈ ಡೈನಾಮಿಕ್ ರೇಂಜ್ (ಎಚ್‌ಡಿಆರ್) ಇಮೇಜಿಂಗ್ ತಂತ್ರಜ್ಞಾನವನ್ನು ನ್ಯಾನೋ ಮತ್ತು ಪಾನೋ ಸಾಮರ್ಥ್ಯಗಳೊಂದಿಗೆ ಸಂಯೋಜಿಸಿರುವುದು ಇದರ ವಿಶೇಷತೆಯಾಗಿದೆ. ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರಿಗೆ ನಿಖರ ನಿರ್ಧಾರ ಕೈಗೊಳ್ಳಲು ಇದು ಸಹಕಾರಿಯಾಗಲಿದೆ ಎಂದರು.

ಆಸ್ಪತ್ರೆ ಆಡಳಿತಾಧಿಕಾರಿ ಡಾ. ಸಂಜಯ ಹಾಗೂ ಡಾ. ಮುರಳಿಧರ ಸೇರಿದಂತೆ ಹಲವರಿದ್ದರು.