ಉತ್ತಮ ಸಂವಹನ ಕೌಶಲ ಮೈಗೂಡಿಸಿಕೊಳ್ಳಿ: ಪಯ್ಯವುಲ ಕೇಶವ ಕರೆ

| Published : Apr 14 2025, 01:17 AM IST

ಸಾರಾಂಶ

ಮಾಹೆಯ ಅಂಗಸಂಸ್ಥೆ ಟಿಎ ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ (ಟ್ಯಾಪ್ಮಿ)ನ ೩೯ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭ ಶನಿವಾರ ಜರುಗಿತು. ಆಂಧ್ರಪ್ರದೇಶದ ಹಣಕಾಸು, ಯೋಜನೆ, ವಾಣಿಜ್ಯ ತೆರಿಗೆ ಸಚಿವರಾಗಿರುವ ಟ್ಯಾಪ್ಮಿಯ ಹಿರಿಯ ವಿದ್ಯಾರ್ಥಿ ಪಯ್ಯವುಲ ಕೇಶವ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಾಹೆಯ ಅಂಗಸಂಸ್ಥೆ ಟಿಎ ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ (ಟ್ಯಾಪ್ಮಿ)ನ ೩೯ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭ ಶನಿವಾರ ಜರುಗಿತು. ಆಂಧ್ರಪ್ರದೇಶದ ಹಣಕಾಸು, ಯೋಜನೆ, ವಾಣಿಜ್ಯ ತೆರಿಗೆ ಸಚಿವರಾಗಿರುವ ಟ್ಯಾಪ್ಮಿಯ ಹಿರಿಯ ವಿದ್ಯಾರ್ಥಿ ಪಯ್ಯವುಲ ಕೇಶವ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಅವರು ‘ನನ್ನ ರಾಜಕೀಯ ಜೀವನದಲ್ಲಿ ಪರಿಣಾಮಕಾರಿ ಸಂವಹನ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಇದು ಎಷ್ಟೇ ಸಂಕೀರ್ಣವಾದ ಆಲೋಚನೆಗಳನ್ನು ಸರಳ ವಿಧಾನದಲ್ಲಿ ವ್ಯಕ್ತಪಡಿಸಲು ಸಹಾಯ ಮಾಡುತ್ತದೆ. ಅವಕಾಶಗಳನ್ನು ಪಡೆದುಕೊಳ್ಳಲು ಸಂವಹನ ಅತ್ಯಂತ ಮಹತ್ವದ್ದು. ಉತ್ತಮ ಸಂವಹನ ಕೌಶಲ, ತಾಳ್ಮೆಯಿಂದ ಸಮಸ್ಯೆ ಬಗೆಹರಿಸುವುದನ್ನು ಮೈಗೂಡಿಸಿಕೊಳ್ಳಿ’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಮುಂಬೈನ ಕ್ಲಾಸಿಕ್ ಲೆಜೆಂಡ್ಸ್‌ ಸಂಸ್ಥೆಯ ಮುಖ್ಯ ವಹಿವಾಟು ಅಧಿಕಾರಿ ಶರದ್ ಅಗರವಾಲ್ ‘ನೀವೀಗ ಅಂತ್ಯವಿಲ್ಲದ ಸಾಧ್ಯತೆಗಳ ಜಗತ್ತಿಗೆ ಕಾಲಿಡುತ್ತಿದ್ದೀರಿ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿರುವ ಹಳೆ ವಿದ್ಯಾರ್ಥಿಗಳ ಸಾಲಿಗೂ ನೀವು ಸೇರುತ್ತಿದ್ದೀರಿ. ನಿಮ್ಮಲ್ಲಿ ನಂಬಿಕೆ ಇಡಿ. ನಿಮ್ಮ ಕೈಲಿರುವ ಅವಕಾಶವನ್ನು ಬಳಸಿಕೊಳ್ಳಿ. ನಿಮ್ಮ ಸಾಮರ್ಥ್ಯದ ಮೇಲೆ ಗಮನಹರಿಸಿ ಬೆಳವಣಿಗೆ ಸಾಧಿಸಿ’ ಎಂದರು.

ಮಾಹೆ ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ ಡಿ ವೆಂಕಟೇಶ್, ಮಾಹೆಯ ಸಹ ಕುಲಪತಿ ಡಾ.ಎಚ್.ಎಸ್ ಬಲ್ಲಾಳ್ ಮತ್ತು ಆಡಳಿತ ಮಂದಳಿಯ ಇತರ ಪ್ರಮುಖರ ಸಮಾರಂಭದಲ್ಲಿ ಹಾಜರಿದ್ದರು.

ಐದು ವಿಭಾಗದ ಎಂಬಿಎ ಪದವಿಗಳಲ್ಲಿ ಅತ್ಯುನ್ನತ ಸ್ಥಾನ ಪಡೆದ ಇಶಿತಾ, ದೇಸಾಯಿ ಚಿರಸ್ವಿ, ಶ್ರೀನಿಧಿ ಎಸ್, ಉಪ್ಪಾಳ ಮೀನ ಶ್ರೀಶ, ಪ್ರಣವ್ ಎಸ್. ಅವರಿಗೆ ಚಿನ್ನದ ಪದಕ, ೨.೫ ಲಕ್ಷ ನಗದು ಮತ್ತು ಪದವಿ ಪತ್ರ ನೀಡಿ ಗೌರವಿಸಲಾಯಿತು. ಟೈಟಾನ್ ಟ್ಯಾಪ್ಮಿ ಆಫ್ ದಿ ಇಯರ್ ಪ್ರಶಸ್ತಿಯನ್ನು ವಿದ್ಯಾರ್ಥಿನಿ ಅಪೂರ್ವ ಅವರಿಗೆ ನೀಡಲಾಯಿತು. ೨೦೨೩-೨೫ನೇ ಸಾಲಿನ ಒಟ್ಟು ೫೨೪ ವಿದ್ಯಾರ್ಥಿಗಳು ಪದವಿ ಪಡೆದರು.