ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹಾನಿಗೊಳಗಾಗಿದ್ದ ಚಿತ್ರದುರ್ಗ ತಾಲೂಕಿನ ಓಬಣ್ಣನಹಳ್ಳಿಗೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಮಂಗಳವಾರ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿದರು. ಜಿಲ್ಲಾಡಳಿತ ಧಾವಿಸುವುದಕ್ಕೂ ಮೊದಲೇ ಸಂತ್ರಸ್ಥರ ಸಂಕಷ್ಟಗಳ ಆಲಿಸಿ ಆಹಾರ ಧಾನ್ಯದ ಕಿಟ್ ವಿತರಿಸಿದರು.ಮಳೆಯಿಂದಾಗಿ ಮನೆಗಳು ನೀರಿನಿಂದ ಜಲಾವೃತವಾಗಿದ್ದವು. ಇದರಿಂದ ಮನೆಯಲ್ಲಿ ನಿಲ್ಲಲು ಜಾಗವಿಲ್ಲದೇ ಜನತೆ ಪರದಾಡಿದರು. ಇದ್ದ ಬದ್ದ ಸಾಮಾನುಗಳು ನೀರಿನಲ್ಲಿ ತೊಯ್ದಿದ್ದವು. ಮಳೆಯ ದಿನದಂದು ಮಲಗಲು ಜಾಗವಿಲ್ಲದೇ ಜಾಗರಣೆ ಮಾಡಿದ್ದರು. ಹಾಗಾಗಿ ಇಮ್ಮಡಿ ಶ್ರೀಗಳು ಮಳೆಯಿಂದ ಆದ ಅನಾಹುತವನ್ನು ಖುದ್ದಾಗಿ ವೀಕ್ಷಣೆ ಮಾಡಿದರು. ಸ್ಥಳಕ್ಕೆ ಭೇಟಿ ನೀಡುವುದರ ಮೂಲಕ ಮಾತೃಪ್ರೇಮ ಮೆರೆದರು.ಸಂತ್ರಸ್ತರಿಗೆ ಆಹಾರದ ಕಿಟ್ ವಿತರಿಸಿದ ನಂತರ ಮಾತನಾಡಿದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ನಮ್ಮ ಜನತೆ ಸಂಕಟ ಬಂದಾಗ ಮಾತ್ರ ವೆಂಕಟರಮಣನನ್ನು ನೆನೆಯುತ್ತಾರೆ. ಈಗ ದೇವರೇ ಯಾಕೆ ನನಗೆ ಕಷ್ಟ ಕೊಟ್ಟೆ, ನನ್ನ ಸಂಸಾರವನ್ನು ಯಾಕೆ ಬೀದಿಗೆ ತಂದೆ ಎಂದು ಪ್ರಶ್ನಿಸುತ್ತಿದ್ದಾರೆ ಎಂದರು.ಮಳೆ ಬಂದರೂ ಸಹ ನೀವು ಧೃತಿಗೆಟ್ಟಿಲ್ಲ. ನೀವು ಶ್ರಮಿಕ ವರ್ಗದವರಾಗಿದ್ದೀರ. ಕಾಯಕ ಮಾಡುವುದರ ಮೂಲಕ ಬದುಕನ್ನು ಸಾಗಿಸುತ್ತಿದ್ದೀರಾ, ಸರ್ಕಾರ ನಿಮ್ಮ ಸಹಾಯಕ್ಕೆ ಬರುತ್ತದೆ, ಸ್ವಲ್ಪ ತಡವಾಗಬಹುದು ಅಷ್ಟೇ. ಅಲ್ಲಿಯವರೆಗೂ ಕಾಯದೇ ಮಳೆಯಿಂದ ಬಿದ್ದಿರುವ ನಿಮ್ಮ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಿ ಎಂದು ಶ್ರೀಗಳು ಸಲಹೆ ನೀಡಿದರು.
ನಿಮ್ಮ ಗ್ರಾಮದ ಸುತ್ತ ಗುಡ್ಡಗಾಡು ಪ್ರದೇಶವಿದೆ. ಗುಡ್ಡದ ಮೇಲೆ ಬಿದ್ದ ಮಳೆ ನೀರು ಪೂರ್ಣವಾಗಿ ಹರಿದು ಕೆಳಗಡೆ ಬರುತ್ತದೆ. ಮುಂದಿನ ದಿನಮಾನದಲ್ಲಿ ನಿಮ್ಮ ಮನೆಗಳು ಭದ್ರವಾಗಿ ಇರಬೇಕಾದರೆ ಎಲ್ಲಿ ನೀರು ಹರಿದು ಬರುತ್ತದೋ ಅಂತಹ ಸ್ಥಳದಲ್ಲಿ ಸುಭದ್ರವಾದ ತಡೆ ಗೋಡೆ ನಿರ್ಮಾಣ ಮಾಡಿಕೊಳ್ಳುವುದರ ಮೂಲಕ ಮನೆಗಳನ್ನು ರಕ್ಷಿಸಿಕೊಳ್ಳಬೇಕಿದೆ. ಗ್ರಾಮಗಳು ವೈಜ್ಞಾನಿಕವಾಗಿ ನಿರ್ಮಾಣವಾಗಬೇಕು. ಭೋವಿ ಗುರುಪೀಠ ಮಾನವೀಯತೆಗೆ ಸದಾ ಸಿದ್ದ ಹಸ್ತ. ಹಾಗಾಗಿ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ತಕ್ಷಣವೇ ಧಾವಿಸಿ ಬಂದಿದೆ ಎಂದು ಇಮ್ಮಡಿ ಶ್ರೀ ಹೇಳಿದರು.ಶೋಷಿತರು ದುಡಿದು ಗಳಿಸಿದ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡದೇ ಉಳಿಸಬೇಕು. ಹಾಗಾದಲ್ಲಿ ಮಾತ್ರ ಆಪತ್ ಕಾಲದಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ದುಡಿಮೆಗಿಂತ ಹೆಚ್ಚು ಖರ್ಚು ಮಾಡಿದರೆ ಸಂಕಷ್ಟಗಳು ಮೈ ಮೇಲೆ ಬರುತ್ತವೆ. ಮುಂದಿನ ದಿನದಲ್ಲಿ ಶಾಸಕರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಿಮ್ಮ ನೋವುಗಳನ್ನು ಆಲಿಸಬಹುದು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು. ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ ಮಾತನಾಡಿ, ನೂರಾರು ಮನೆಗಳಿಗೆ ನೀರು ನುಗ್ಗಿದರೂ ರಾಜಕಾರಣಿಗಳು ಬಂದು ಸಾಂತ್ವನ ಹೇಳಿಲ್ಲ. ರಾಜಕಾರಣಿಗಳಿಗೆ ಜನರ ಸಮಸ್ಯೆಗಳನ್ನು ಆಲಿಸುವ ವ್ಯವಧಾನ ಇಲ್ಲ ಎಂದರು.
ಸಂಘದ ಮಾಜಿ ಅಧ್ಯಕ್ಷ ತಿಮ್ಮಣ್ಣ ಮಾತನಾಡಿ, ನಮ್ಮ ಕಷ್ಟಕ್ಕೆ ಯಾವ ರಾಜಕಾರಣಿ ಆಗುವುದಿಲ್ಲ. ಮಠದ ಜೊತೆ ನಾವಿದ್ದರೆ, ಮಠ ನಮ್ಮನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ ಎಂದರು.ಎಸ್ ಜೆ ಎಸ್ ಸಂಸ್ಥೆ ಕಾರ್ಯದರ್ಶಿ ಡಿಸಿ ಮೋಹನ್ ಮಾತನಾಡಿ, ಮಠದ ಶಾಲೆಯಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ಇರುವುದರಿಂದ ಬಡತನದಲ್ಲಿರುವ ಕುಟುಂಬದವರು ಮಕ್ಕಳನ್ನ ಕೂಲಿಗೆ ಕಳಿಸದೇ ಶಾಲೆಗೆ ಕಳಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅಕ್ಕಿ, ಬೇಳೆ, ರಾಗಿ, ಜೋಳ, ಖಾರದ ಪುಡಿ, ಉಪ್ಪು, ಸಕ್ಕರೆ, ಗೋಧಿ ಸೇರಿದಂತೆ ಸುಮಾರು 20 ವಿವಿಧ ರೀತಿಯ ದವಸ ಧಾನ್ಯಗಳನ್ನು ಒಳಗೊಂಡ ಕಿಟ್ ಗಳನ್ನು ಸಂತ್ರಸ್ತ 120 ಕುಟುಂಬಗಳಿಗೆ ವಿತರಿಸಲಾಯಿತು.
ಈ ವೇಳೆ ಭೋವಿ ಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ. ಉಮೇಶ್, ಪಿಡಿಒ ಆಂಜನೇಯ, ಗ್ರಾಮ ಪಂಚಾಯತಿ ಸದಸ್ಯ ಲಕ್ಷ್ಮಮ್ಮ, ಜಯಪ್ಪ, ಮುಖಂಡರಾದ ಚಂದ್ರಪ್ಪ, ಯಲ್ಲಪ್ಪ, ಓಬಳೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದರು.----------------
ಮಳೆಯಿಂದ ಅನಾಹುತಕ್ಕೆ ಒಳಗಾದ ಚಿತ್ರದುರ್ಗ ತಾಲೂಕಿನ ಓಬಣ್ಣನಹಳ್ಳಿಗೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ನೀಡಿ ಪರಿಶೀಲಿಸಿದರು.20ಸಿಟಿಡಿ10-------------ಸಂತ್ರಸ್ತ 120 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಇಮ್ಮಡಿ ಶ್ರೀ20 ಸಿಟಿಡಿ11