ಸಾರಾಂಶ
ರಾಜ್ಯದ ಪರಿಶಿಷ್ಟ ಜಾತಿ ಮಾದಿಗ ಸಮುದಾಯವು ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ, ಉದ್ಯೋಗ ಮತ್ತು ಸರ್ಕಾರಿ ಸೌಲಭ್ಯದಿಂದ ವಂಚಿತವಾಗಿದೆ. ಆದ್ದರಿಂದ ಒಳಮೀಸಲಾತಿ ಜಾರಿಗಾಗಿ ಕಳೆದ 30 ವರ್ಷದಿಂದ ಸತತವಾಗಿ ಬೀದಿಗಿಳಿದು ವಿವಿಧ ರೀತಿಯ ಹೋರಾಟ ನಡೆಸಿದ ಪ್ರತಿಫಲವಾಗಿ ಎಸ್.ಎಂ.ಕೃಷ್ಣ ಅವರು ಒಳಮೀಸಲಾತಿ ಜಾರಿಗಾಗಿ ಎ.ಜೆ.ಸದಾಶಿವ ಆಯೋಗ ರಚಿಸಿದ್ದರು.
ಕನ್ನಡಪ್ರಭವಾರ್ತೆ ನಾಗಮಂಗಲ
ಒಳಮೀಸಲಾತಿ ವರ್ಗೀಕರಣ ಮಾಡಿರುವಂತೆ ಕೂಡಲೇ ಸುಗ್ರೀವಾಜ್ಞೆ ಹೊರಡಿಸಿ ಜಾರಿಗೊಳಿಸುವಂತೆ ಅಖಿಲ ಕರ್ನಾಟಕ ಡಾ.ಬಾಬುಜಗಜೀವನರಾಮ್ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಆರ್.ಚಂದ್ರಶೇಖರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಪಟ್ಟಣದಲ್ಲಿ ಸಮುದಾಯದ ಮುಖಂಡರ ಸಭೆ ನಡೆಸಿದ ಬಳಿಕ ಮಾತನಾಡಿ, 2005ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಅವಧಿಯಲ್ಲಿ ಪ್ರಾರಂಭವಾಗಿದ್ದ ಒಳಮೀಸಲಾತಿ ವಿಷಯ ಈಗಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಂತಿಮವಾಗಿ ವರ್ಗಿಕರಣವಾಗಿರುವುದರಿಂದ ಮಾದಿಗ ಸಮುದಾಯದ ಕನಸು ನನಸಾಗಿದೆ ಎಂದರು.
ರಾಜ್ಯದ ಪರಿಶಿಷ್ಟ ಜಾತಿ ಮಾದಿಗ ಸಮುದಾಯವು ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ, ಉದ್ಯೋಗ ಮತ್ತು ಸರ್ಕಾರಿ ಸೌಲಭ್ಯದಿಂದ ವಂಚಿತವಾಗಿದೆ. ಆದ್ದರಿಂದ ಒಳಮೀಸಲಾತಿ ಜಾರಿಗಾಗಿ ಕಳೆದ 30 ವರ್ಷದಿಂದ ಸತತವಾಗಿ ಬೀದಿಗಿಳಿದು ವಿವಿಧ ರೀತಿಯ ಹೋರಾಟ ನಡೆಸಿದ ಪ್ರತಿಫಲವಾಗಿ ಎಸ್.ಎಂ.ಕೃಷ್ಣ ಅವರು ಒಳಮೀಸಲಾತಿ ಜಾರಿಗಾಗಿ ಎ.ಜೆ.ಸದಾಶಿವ ಆಯೋಗ ರಚಿಸಿದ್ದರು ಎಂದರು.ಆಯೋಗದ ವರದಿ 2012ರಲ್ಲಿ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೆ ನೀಡಿತ್ತು. ಬಳಿಕ 2023ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ವಜಾಗೊಳಿಸಿ ಮಾಧುಸ್ವಾಮಿ ಅವರ ಉಪಸಮಿತಿ ರಚಿಸಿ ಸದರಿ ವರದಿಯನ್ನು ಕೆಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು ಎಂದರು.
ನಂತರ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಸುಪ್ರೀಂ ಕೋರ್ಟ್ ಪರಿಶಿಷ್ಠ ಜಾತಿ ಒಳಮೀಸಲಾತಿ ಪ್ರಕರಣವನ್ನು ಜಾರಿಗೊಳಿಸಲು ಆಯಾ ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿದ್ದು, ದತ್ತಾಂಶವನ್ನು ಪಡೆದು ಜಾರಿ ಮಾಡುವಂತೆ ತಿಳಿಸಿ 2024ರ ಆ.1ರಲ್ಲಿ ಮಹತ್ವದ ತೀರ್ಪು ನೀಡಿದರಿಂದ ಒಳಮೀಸಲಾತಿ ಹೋರಾಟಕ್ಕೆ ಜೀವ ಬಂದಂತಾಗಿದೆ ಎಂದು ತಿಳಿಸಿದರು.ಆ.19 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಯೋಗದ ವರದಿಯಲ್ಲಿ ಕೆಲವು ಮಾರ್ಪಾಡು ಮಾಡಿ ವಿವಿಧ ಭಾಗವಾಗಿ ವರ್ಗಿಕರಣ ಮಾಡಲಾಗಿದೆ. ನಂತರ ಆ.20ರಂದು ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ವರ್ಗಿಕರಣ ಮಾಡಿರುವುದನ್ನು ಪ್ರಕಟಿಸಿ ಘೋಷಣೆ ಮಾಡಿದ್ದಾರೆ ಎಂದರು.
ಈ ವೇಳೆ ತಾಲೂಕು ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ಗೌರವಾಧ್ಯಕ್ಷರಾದ ಶಿವಲಿಂಗಯ್ಯ, ಹೊಂಬಯ್ಯ, ಮರಿಯಪ್ಪ, ರಾಜಣ್ಣ, ಉಪಾಧ್ಯಕ್ಷರಾದ ಭೂಸಮುದ್ರ ರಾಮಕೃಷ್ಣ, ಗಾಣಸಂದ್ರ ಮುನಿಯಪ್ಪ, ದೊಡ್ಡಯಗಟಿ ವೆಂಕಟೇಶ, ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ದೇವರಮಾದಹಳ್ಳಿ ತಿಮ್ಮರಾಜು, ಸಂಘಟನಾ ಕಾರ್ಯದರ್ಶಿ ದಂಡಿಗನಹಳ್ಳಿ ರಂಜೀತ್, ಬ್ರಹ್ಮದೇವರಹಳ್ಳಿ ಅಭಿ, ಗ್ರಾಪಂ ಸದಸ್ಯೆ ರಾಣಿ ಸೇರಿದಂತೆ ಹಲವರು ಇದ್ದರು.