ಸಾರಾಂಶ
ಸುತ್ತೋಲೆ ಪುನರ್ ಪರಿಶೀಲಿಸಿಕನ್ನಡಪ್ರಭ ವಾರ್ತೆ ತುಮಕೂರು
ರಾಜ್ಯ ಸರ್ಕಾರ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ೨೦೨೪ರ ಅ.೩ ರಂದು ಹೊರಡಿಸಿರುವ ಸುತ್ತೋಲೆ, ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳು ಉಪನ್ಯಾಸಕರಿಗೆ ನುಂಗಲಾರದ ತುತ್ತಾಗಿದ್ದು, ಕೂಡಲೇ ಸುತ್ತೋಲೆಯನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುತ್ತೋಲೆಯಲ್ಲಿ ತಿಳಿಸಿರುವಂತೆ ಕಾರ್ಯಭಾರವಿಲ್ಲದ ಉಪನ್ಯಾಸಕರನ್ನು ಹತ್ತಿರದ ಅನುದಾನಿತ ಕಾಲೇಜಿಗೆ ನಿಯೋಜಿಸುವಂತೆ ಸೂಚನೆ ನೀಡಲಾಗಿದೆ. ಇದರಲ್ಲಿ ಹಲವಾರು ನೂನ್ಯತೆಗಳಿವೆ. ಹಾಗಾಗಿ ಸರ್ಕಾರ ತನ್ನ ಸುತ್ತೋಲೆಯನ್ನು ಪರಿಶೀಲನೆಗೆ ಒಳಪಡಿಸಬೇಕು. ಹಾಗೆಯೇ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ನಿಯೋಜಿಸಲು ಇರುವ ನಿರ್ಬಂಧವನ್ನು ರದ್ದುಪಡಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು.
ಸರ್ಕಾರ ಹಿಂದೆ ಎರಡು ಸಂಯೋಜನೆಗೆ ಅನುಮೋದನೆ ಕೊಟ್ಟು ಈಗ ೨೦ ಗಂಟೆಗಳ ಕಾರ್ಯಭಾರ ಸಮಸ್ಯೆಯನ್ನು ತಂದಿಟ್ಟಿರುವುದು ಸರಿಯಲ್ಲ. ರಾಜ್ಯದ ೩೪ ಶೈಕ್ಷಣಿಕ ಜಿಲ್ಲೆಗಳ ೮೨೧ ಅನುದಾನಿತ ಪದವಿಪೂರ್ವ ಕಾಲೇಜುಗಳ ಸುಮಾರು ೬೦೦೦ ನೌಕರರು ಸರಕಾರದ ಸುತ್ತೋಲೆಯಿಂದ ಆಂತಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಇಲಾಖೆಯ ನಿರ್ದೇಶಕರ ಮೌಖಿಕ ಆದೇಶಕ್ಕೆ ಮಣಿದು ಇದುವರೆಗೂ ಕಾರ್ಯಭಾರವಿಲ್ಲದೆ ನಿಯೋಜನೆಗೆ ಒಳಗಾಗದ ಉಪನ್ಯಾಸಕರಿಗೆ ವೇತನ ಮತ್ತು ಭತ್ಯೆಗಳನ್ನು ತಡೆಹಿಡಿಯಲಾಗಿದೆ. ಮೊದಲು ತಡೆ ಹಿಡಿದಿರುವ ವೇತನ ಬಿಡುಗಡೆ ಮಾಡಿ, ನಂತರ ನಿಮ್ಮ ಕಾರ್ಯಾಭಾರದ ಕುರಿತು ಸಂಘಟನೆಯೊಂದಿಗೆ ಮಾತನಾಡಬೇಕು ಎಂದು ನುಡಿದರು.ಸರ್ಕಾರ ಮತ್ತು ಇಲಾಖೆ ೨೦೧೨ರ ಸೆ.9 ರಿಂದ ಕಾರ್ಯಾಭಾರ ಸಮಸ್ಯೆಯನ್ನು ಸೃಷ್ಟಿಸಲು ಪ್ರಾರಂಭಿಸಿದೆ. ನಂತರದ ದಿನಗಳಲ್ಲಿ ಒಂದೊಂದೇ ನಿಯಮಗಳನ್ನು ನಮ್ಮ ಮೇಲೆ ಹೇರುತ್ತಾ ಬರುತ್ತಿರುವುದು ಸರಿಯಲ್ಲ. ಭಾಷಾ ವಿಷಯಗಳ ತೆಲುಗು, ಹಿಂದಿ, ಉರ್ದು, ಎಲೆಕ್ಟ್ರಾನಿಕ್ಸ್ ಉಪನ್ಯಾಸಕರ ಕಾರ್ಯಾಭಾರವನ್ನು ಸರಿದೂಗಿಸಬೇಕು. ಜ್ಯೋತಿ ಸಂಜೀವಿನಿ ಸೌಲಭ್ಯವನ್ನು ಅನುದಾನಿತ ಕಾಲೇಜುಗಳ ನೌಕರರಿಗೂ ವಿಸ್ತರಿಸಬೇಕು ಎಂದರು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮಿತಿಯನ್ನು ಕನಿಷ್ಠ ೨೦, ಗರಿಷ್ಠ ೪೦ಕ್ಕೆ ನಿಗದಿಗೊಳಿಸಬೇಕು. ವಾಣಿಜ್ಯ ವಿಷಯದ ಉಪನ್ಯಾಸಕರಿಗೆ ಬಿ.ಇಡಿ ನಿಗದಿಯನ್ನು ಕೈಬಿಡಬೇಕು. ಪರೀಕ್ಷೆಗಳನ್ನು ಅನುದಾನಿತ ಕಾಲೇಜುಗಳ ನೌಕರರಿಗೂ ವಿಸ್ತರಿಸಬೇಕು. ಕಂಪ್ಯೂಟರ ಸಾಕ್ಷರತಾ ಪರೀಕ್ಷೆಯನ್ನು ವಿಸ್ತರಿಸಬೇಕು. ಅಂತರ್ ಜಿಲ್ಲೆ ನಿಯೋಜನೆಯನ್ನು ರದ್ದುಗೊಳಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಸರ್ಕಾರಕ್ಕೆ, ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಕೆಲಸ ಮಾಡಲಾಗುವುದು. ನಂತರ ಎಲ್ಲಾ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಇದಕ್ಕೆ ಸರ್ಕಾರ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ರಾಜ್ಯ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಗೌರವಾಧ್ಯಕ್ಷ ಶ್ರೀಕಂಠಯ್ಯ, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ಕಾರ್ಯಾಧ್ಯಕ್ಷ ಆನಂದ್, ಪ್ರಾಂಶುಪಾಲ ಸಂಘದ ಉಪಾಧ್ಯಕ್ಷ ಕುಮಾರಯ್ಯ, ತುಮಕೂರು ಜಿಲ್ಲಾ ಅಧ್ಯಕ್ಷ ಗೋವಿಂದರಾಜು, ರಾಜ್ಯ ಪ್ರತಿನಿಧಿ ಬಿ.ಆರ್ ಮಂಜುನಾಥ್, ರಾಮನಗರ ಜಿಲ್ಲೆಯ ಅಧ್ಯಕ್ಷ ಗೋವಿಂದರಾಜು, ಪುಟ್ಟಸ್ವಾಮಿ, ರಾಜ್ಯ ಸದಸ್ಯರಾದ ಉಷಾ ಪಟೇಲ್, ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ದೇವರಾಜು, ಪ್ರಧಾನ ಕಾರ್ಯದರ್ಶಿ ಆನಂದ್, ರಾಜ್ಯ ಕಾರ್ಯದರ್ಶಿ ಬಿ.ಎಲ್.ಯಶವಂತ್, ಮೋಹನ್ ಹೆಗ್ಗಡೆ, ಕುಬೇಂದ್ರ, ಉಮೇಶ್, ಬೋರಪ್ಪ, ಪರಮೇಶ್ವರಪ್ಪ, ವೆಂಕಟಾಚಲ, ದೇವರಾಜು ಇದ್ದರು.