ಸಾರಾಂಶ
ಬೆಂಗಳೂರು : ಬಿಡದಿ ಬಳಿ ಕೆಪಿಸಿಎಲ್ ಸ್ಥಾಪಿಸುತ್ತಿರುವ ಕಸದಿಂದ ವಿದ್ಯುತ್ ಉತ್ಪಾದನಾ ಘಟಕದ ಕಾರ್ಯಚರಣೆಯನ್ನು ತ್ವರಿತವಾಗಿ ಆರಂಭಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.
ಗುರುವಾರ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಘಟಕಕ್ಕೆ ಅಗತ್ಯವಿರುವ ಕಸ ಸರಬರಾಜಿಗೆ ವ್ಯವಸ್ಥೆ ಮಾಡಬೇಕು. ಘಟಕದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
10 ಎಕರೆಯಲ್ಲಿ ಸ್ಥಾಪಿಸಲಾದ ಈ ಘಟಕ ನಿರ್ಮಾಣಕ್ಕೆ ₹260 ಕೋಟಿ ವೆಚ್ಚ ಮಾಡಲಾಗಿದೆ. ಪ್ರತಿನಿತ್ಯ 11.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದೆ. ಪಾಲಿಕೆಯ ಸಂಸ್ಕರಣಾ ಘಟಕಗಳು, ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳಲ್ಲಿ ಸಂಗ್ರಹವಾಗುವ ಪುನರ್ ಬಳಕೆ ಸಾಧ್ಯವಿಲ್ಲದ ಕಸವನ್ನು ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ರವಾನಿಸಲಾಗುತ್ತದೆ ಎಂದು ಅಧಿಕಾರಿಗಳು ಮುಖ್ಯ ಆಯುಕ್ತರಿಗೆ ಮಾಹಿತಿ ನೀಡಿದರು.
ಈ ವೇಳೆ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಲೋಕೇಶ್, ಕಾರ್ಯಪಾಲಕ ಅಭಿಯಂತರ ಮಧುಸೂಧನ್, ಕೆಪಿಟಿಸಿಎಲ್ ಮುಖ್ಯ ಅಭಿಯಂತರ ಎಸ್.ಆರ್.ಕಬಾಡೆ ಇದ್ದರು.
170 ಎಕರೆ ಜಾಗಕ್ಕೆ ಡಿಸಿಗೆ ಪತ್ರ
ಬೊಮ್ಮನಹಳ್ಳಿ ವಲಯ ಗೊಲ್ಲಹಳ್ಳಿ ಬಳಿ ಲೋಕೋಪಯೋಗಿ ಇಲಾಖೆಗೆ ಸೇರಿದ ಸುಮಾರು 170 ಎಕರೆ ಜಾಗವನ್ನು ನಗರದ ಕಸ ವಿಲೇವಾರಿಗೆ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗಿದೆ. ಸಮತಟ್ಟಾದ ಜಾಗ ಹಾಗೂ ಕ್ವಾರಿ ಜಾಗ ಎಷ್ಟಿದೆ ಎಂಬುದನ್ನು ಪರಿಶೀಲಿಸಬೇಕು. ಜತೆಗೆ ಈ ಜಾಗವನ್ನು ಪಾಲಿಕೆಯ ಹಸ್ತಾಂತರಕ್ಕೆ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಕೂಡಲೇ ಪತ್ರ ಬರೆಯಲು ಮುಖ್ಯ ಆಯುಕ್ತರು ಸೂಚಿಸಿದರು.