ಸಾರಾಂಶ
ಅಮೇರಿಕಾ ನೇರವಾಗಿ ತನ್ನ ವಿಮಾನ ವಾಹಕ ಯುದ್ಧ ಹಡಗುಗಳನ್ನು ಇಸ್ರೇಲ್ ಹತ್ತಿರ ತಂದು ನಿಲ್ಲಿಸಿದೆ ಎಂದು ಆತಂಕ
ಕನ್ನಡಪ್ರಭ ವಾರ್ತೆ ಮೈಸೂರು
ಯುದ್ದ ವಿರೋಧಿಸಿ, ವಿಶ್ವ ಶಾಂತಿಗೆ ಒತ್ತಾಯಿಸಿ, ಪ್ಯಾಲೆಸ್ಟೈನ್ ನಲ್ಲಿ ಶಾಂತಿ ಮರು ಸ್ಥಾಪಿಸಲು ಆಗ್ರಹಿಸಿ ಎಡಪಕ್ಷಗಳ ಜಂಟಿ ಸಮಿತಿಯವರು (ಸಿಪಿಎಂ, ಸಿಪಿಐ, ಸಿಪಿಐಎಂಎಲ್ ಲಿಬರೇಶನ್) ನಗರದ ಗಾಂಧಿ ಚೌಕದಲ್ಲಿ ಶನಿವಾರ ಪ್ರತಿಭಟಿಸಿದರು.ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲ್ ನಡೆಸಿದ ನರಹತ್ಯೆ ತಕ್ಷಣ ನಿಲ್ಲಿಸಿ. ಕದನ ವಿರಾಮ ನಡೆ, ಗಾಜಾದ ಮರು ನಿರ್ಮಾಣ ಹಾಗೂ ಮಾನವೀಯ ನೆರವನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
2023 ಅಕ್ಟೋಬರ್ 7ರ ಘಟನೆಗೆ ಪ್ರತೀಕಾರವೆಂದು ಇಸ್ರೇಲ್ ಈಗ ಗಾಜಾದ ಮೇಲೆ ಆಕ್ರಮಣ ನಡೆಸಿ ಅವರ ಮನೆ, ಆಸ್ಪತ್ರೆ, ಶಾಲೆ, ವಾಣಿಜ್ಯ ಕಟ್ಟಡಗಳೆಲ್ಲವನ್ನೂ ಧ್ವಂಸ ಮಾಡಿದೆ. 42 ಸಾವಿರ ಜನ ಮೃತಪಟ್ಟಿದ್ದಾರೆ. ಅವರಲ್ಲಿ 16 ಸಾವಿರ ಮಕ್ಕಳು ಮತ್ತು ಮಹಿಳೆಯರು ಇದ್ದಾರೆ. ಇಸ್ರೇಲ್ ಗೆ ಪ್ರತಿರೋಧ ಒಡ್ಡುವ ಸಶಸ್ತ್ರ ಗುಂಪುಗಳಾದ ಹಮಾಸ್, ಹಿಬಾಬುಲ್ಲಾ, ಹೌದಿಗಳಿಗೆ ಇರಾನ್, ಲೆಬನಾನ್, ಜೋಡಾನ್, ಇರಾಕ್ ದೇಶಗಳು ಬೆಂಬಲ ನೀಡುತ್ತಿದೆ ಎಂದು ಆ ದೇಶಗಳ ಮೇಲೆ ಆಕ್ರಮಣ ಮಾಡುತ್ತಿದೆ. ಇದು ಜಗತ್ತಿನಲ್ಲಿ ಮೂರನೇ ಮಹಾಯುದ್ಧದ ಹೊಸ್ತಿಲಿಗೆ ತಂದು ನಿಲ್ಲಿಸಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಮಧ್ಯ ಪ್ರಾಚ್ಯದಲ್ಲಿ ಅರಬ್ ದೇಶಗಳನ್ನು ಹೆದರಿಸಿ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಲು ಅಮೇರಿಕಾ, ಬ್ರಿಟನ್ ಮತ್ತಿತರ ಸಾಮ್ರಾಜ್ಯಶಾಹಿಗಳು ಈ ಯುದ್ಧದಲ್ಲಿ ಇಸ್ರೇಲ್ ಸೋಲದಂತೆ ತನ್ನ ಬೆಂಬಲ ಮುಂದುವರಿಸಿದೆ. ಅಮೇರಿಕಾ ನೇರವಾಗಿ ತನ್ನ ವಿಮಾನ ವಾಹಕ ಯುದ್ಧ ಹಡಗುಗಳನ್ನು ಇಸ್ರೇಲ್ ಹತ್ತಿರ ತಂದು ನಿಲ್ಲಿಸಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹೀಗಿರುವಾಗ ತೀರಾ ಬಲಪಂಥೀಯ ಇಸ್ರೇಲ್ ಸರ್ಕಾರಕ್ಕೆ ಭಾರತದ ಬಲಪಂಥೀಯ ಮೋದಿ ಸರ್ಕಾರ ಬೆಂಬಲ ನೀಡುತ್ತಿದೆ. ಪ್ಯಾಲೆಸ್ಟೈನ್ ಬೆಂಬಲಿಸಿದ ಚಾರಿತ್ರಿಕ ನಿರ್ಣಯವನ್ನು ಮೋದಿ ಸರ್ಕಾರ ಬದಲಾಯಿಸಲು ಹೊರಟಿದೆ. ಪ್ಯಾಲೆಸ್ಟೈನ್ ಸ್ವತಂತ್ರ ದೇಶವಾಗಬೇಕು. ಇಸ್ರೇಲ್ ಆಕ್ರಮಣ ನಿಲ್ಲಿಸಬೇಕು. ಶಾಂತಿ ಸಮಾಧಾನ ನೆಲೆಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಸಮಿತಿಯ ಸದಸ್ಯರಾದ ಎನ್. ವಿಜಯ್ ಕುಮಾರ್, ಜಿ. ಜಯರಾಂ, ಜಗನ್ನಾಥ್, ಎಚ್.ಆರ್. ಶೇಷಾದ್ರಿ, ದೇವದಾಸ್, ಬೆಲವತ್ತ ರಾಜು, ಡಿ. ಜಗನ್ನಾಥ್, ಚೌಡಳ್ಳಿ ಜವರಯ್ಯ, ಇನ್ಸಾಫ್, ನೂರ್ ಮರ್ಚೆಂಟ್, ಮೆಹಬೂಬ್, ಸುಬ್ರಮಣ್ಯ, ರಾಜೇಂದ್ರ, ಅಣ್ಣಪ್ಪ, ಅಭಿ, ಭರತ್, ಉಗ್ರ ನರಸಿಂಹೇಗೌಡ ಮೊದಲಾದವರು ಇದ್ದರು.