ಕೂಡಲೇ ಬಡವರ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ

| Published : Jun 30 2024, 12:48 AM IST

ಸಾರಾಂಶ

ಸ್ಲಂ ಬೋರ್ಡ್‌ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷದ ಬಗ್ಗೆ ಬೇಸರ ವ್ಯಕ್ತಪಡಿಸದ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಕೂಡಲೇ ಬಡವರ ಮನೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಕಾಲಮಿತಿ ನೀಡಿದರು.

ಕೊರಟಗೆರೆ: ಸ್ಲಂ ಬೋರ್ಡ್‌ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷದ ಬಗ್ಗೆ ಬೇಸರ ವ್ಯಕ್ತಪಡಿಸದ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಕೂಡಲೇ ಬಡವರ ಮನೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಕಾಲಮಿತಿ ನೀಡಿದರು. ಪಟ್ಟಣದ ಗಿರಿನಗರ, ಕಾಮೇನಹಳ್ಳಿಯಲ್ಲಿ ಸ್ಲಂ ಬೋರ್ಡ್ ಅಧಿಕಾರಿಗಳು ಬಡವರಿಗೆ ಮನೆಗಳನ್ನು ಸರಿಯಾದ ಸಮಯಕ್ಕೆ ನಿರ್ಮಾಣ ಮಾಡಿಕೊಡದೆ ಇರುವ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿ ಸ್ಲಂ ಬೋರ್ಡ್‌ ಎಂಜಿನಿಯರ್‌ ರಕ್ಷಿತ್ ಮೇಲೆ ತೀರ್ವ ಅಸಮಾಧಾನ ವ್ಯಕ್ತಪಡಿಸಿದರು. ಇದೇ ರೀತಿ ಪಪಂ ಪೌರಕಾರ್ಮಿಕರಿಗೆ ₹7.50 ಲಕ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಾಯ ಧನದಲ್ಲಿ ಅವರೆ ನಿರ್ಮಾಣ ಮಾಡಿಕೊಂಡ 14 ಮನೆಗಳು ಉದ್ಘಾಟನೆಯಾಗಿಲ್ಲ. ಸಂಪೂರ್ಣ ಕಾಮಗಾರಿ ಹಾಗೂ ಉದ್ಘಾಟನೆಗೆ ರಾಜೀವ್‌ಗಾಂಧಿ ವಸತಿ ಇಲಾಖೆ ಸಂಪರ್ಕಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡಲು ಜಾಗಗಳ ಕೊರತೆ ಇದೆ. ಆದರೆ ಕೊರಟಗೆರೆ ಪಟ್ಟಣ ಪಂಚಾಯಿತಿಗೆ ಉತ್ತಮವಾದ 3 ಎಕರೆ ಜಾಗ ಇಟ್ಟುಕೊಂಡು ಸ್ಲಂ ಬೋರ್ಡ್ ಅಧಿಕಾರಿಗಳು ಇಲ್ಲಿಯವರೆಗೂ ಮನೆ ನಿರ್ಮಾಣ ಮಾಡಿಲ್ಲ. ಸ್ಲಂ ಬೋರ್ಡ್ ವರದಿ ಪ್ರಕಾರ ಕಾಮೇನಹಳ್ಳಿಗ್ರಾಮದ ನಿವೇಶನದಲ್ಲಿ ಫೆಬ್ರವರಿ ವೇಳೆಗೆ ಬಡವರಿಗೆ ಮನೆ ನಿರ್ಮಿಸಿ ಕೊಡಬೇಕಿತ್ತು. ಆದರೆ ಇಲ್ಲಿಯವರೆಗೆ ಅವರು ಕನಿಷ್ಟ ಗುದ್ದಲಿ ಪೂಜೆಯನ್ನು ಮಾಡಿಲ್ಲ ಎಂದರು.ಈ ಜಾಗದ ಮಣ್ಣನ್ನು ಪರೀಕ್ಷೆ ಕಳುಹಿಸಲಾಗಿದೆ. 240 ಫಲಾನುಭವಿಗಳ ಆಯ್ಕೆಯಾಗಬೇಕಿದೆ. ಈ ಎರಡು ಕೆಲಸಗಳನ್ನು ಕೂಡಲೇ ಮಾಡುವಂತೆ ತಹಸೀಲ್ದಾರ್‌ಗೆ ಆದೇಶಿಸಲಾಗಿದೆ. ಸಾರ್ವಜನಿಕರ ದೂರಿನಂತೆ ಸ್ಲಂ ಬೋರ್ಡ್ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷದ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.ಜುಲೈ 1 ರಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತುಮಕೂರಿಗೆ ಭೇಟಿ ನೀಡಲಿದ್ದು, ಜಿಲ್ಲೆ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ಭಾಗವಹಿಸಲಿದ್ದಾರೆ. ಸರ್ಕಾರದ ಆದೇಶದಂತೆ ಪಿ.ಎಂ.ಕುಸುಮ್‌ ಯೋಜನೆಯಡಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ 800 ಎಕರೆ ಜಾಗದ ಪ್ರಸ್ತಾವನೆ ಬಂದಿದ್ದು, ಪ್ರಸ್ತುತ 300 ಎಕರೆ ಪ್ರದೇಶವನ್ನು ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತಿದೆ. ಈ ಬಗ್ಗೆ ಇಬ್ಬರು ಸಚಿವರು ಕಂದಾಯ ಅಧಿಕಾರಿಗಳ ಸಭೆ ನಡೆಸುವರು. ಕೊರಟಗೆರೆ ತಾಲ್ಲೂಕಿನ ಸಂಕೇನಹಳ್ಳಿ ಮತ್ತು ತುಂಬಾಡಿ ಗ್ರಾಮಗಳಲ್ಲಿ 66 ಕೆ.ವಿ.ಗಳ ಎರಡು ವಿದ್ಯುತ್ ಉಪಸ್ಥಾವರಗಳನ್ನು ಉದ್ಘಾಟನೆ ಮಾಡುವರು. ಈ ಸ್ಥಾವರಗಳಿಂದ ಸುಮಾರು 32 ಗ್ರಾಮಗಳಿಗೆ ನಿರಂತರ ವಿದ್ಯುತ್ ಸಂಪರ್ಕ ನೀಡಲಾಗುವುದು. ತಹಸೀಲ್ದಾರ್ ಮಂಜುನಾಥ್, ಕಂದಾಯ ಅಧಿಕಾರಿ ಬಸವರಾಜು, ಪಪಂ ಪ್ರಭಾರ ಮುಖ್ಯಾಧಿಕಾರಿ ತುಳಸಿಕುಮಾರಿ, ಸದಸ್ಯ ನಂದೀಶ್, ಆರೋಗ್ಯಅಧಿಕಾರಿ ಮಹಮದ್ ಹುಸೇನ್, ಕಂದಾಯ ನಿರೀಕ್ಷಕ ವೇಣು, ಸಿಬ್ಬಂದಿಗಳಾದ ಸಾವಿತ್ರಮ್ಮ ಸೇರಿದಂತೆ ಹಾಜರಿದ್ದರು.